CONNECT WITH US  

ಬ್ಯಾಂಕುಗಳ ಮುಂದೆ ಕನಕ ಜಯಂತಿ ರಜೆ ರಶ್‌

ಬೆಂಗಳೂರು: 500, 1000 ರೂ. ನೋಟುಗಳನ್ನು ರದ್ದುಗೊಳಿಸಿ 10 ದಿನ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಬದಲಿ ಹೊಸ ನೋಟುಗಳ ವಿನಿಮಯವಾಗದೆ ಜನ ಸಾಮಾನ್ಯರು ತೀವ್ರ ಪರಿತಪಿಸುವಂತಾಗಿದೆ. 

ಗುರುವಾರ ಕನಕ ಜಯಂತಿ ಪ್ರಯುಕ್ತ ಇದ್ದ ಸಾರ್ವಜನಿಕ ರಜೆಯನ್ನು ಬ್ಯಾಂಕುಗಳಿಗೆ ಸೀಮಿತಗೊಳಿಸಿ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸಿದವು. ರಜೆ ರದ್ದು ಬ್ಯಾಂಕುಗಳಿಗೆ ಮಾತ್ರ ಸೀಮಿತವಾಗಿದ್ದರಿಂದ ಇತರೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ರಜೆ ಇದ್ದ ಕಾರಣ ಅವರು ಹಣ ವಿನಿಮಯಕ್ಕಾಗಿ ಬೆಳಗ್ಗೆಯಿಂದಲೇ ಸಮೀಪದ ಬ್ಯಾಂಕ್‌, ಎಟಿಎಂ, ಅಂಚೆ ಕಚೇರಿಗಳ ಮುಂದೆ ಸರದಿ ಸಾಲಲ್ಲಿ ಜಮಾಯಿಸಿದ್ದರು. 

ಹÙà 500 ಮತ್ತು 1000 ರೂ. ನೋಟುಗಳ ವಿನಿಮಯಕ್ಕೆ ಪ್ರಸ್ತುತ ಇದ್ದ 4.5 ಸಾವಿರ ರೂ. ಮಿತಿಯನ್ನು ಕೇಂದ್ರ ಸರ್ಕಾರ ಶುಕ್ರವಾರದಿಂದ ಮಿತಿಯನ್ನು 2 ಸಾವಿರ ರೂ.ಗೆ ಇಳಿಸಿದೆ. ಇದರ ಜತೆಗೆ ಒಂದೆರಡು ದಿನಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳುವರ ಬೆರಳಿಗೆ ಶಾಯಿ ಹಾಕುವ ಪ್ರಕ್ರಿಯೆಗೆ ಎಲ್ಲಾ ಬ್ಯಾಂಕು, ಅಂಚೆ ಕಚೇರಿಗಳಲ್ಲಿ ಪ್ರಾರಂಭವಾಗಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಹಣ ವಿನಿಮಯಕ್ಕಾಗಿ ದೌಡಾಯಿಸಿದರು. 

ಇದರಿಂದ ಗುರುವಾರ ಮಧ್ಯಾಹ್ನದ ನಂತರ ಬ್ಯಾಂಕ್‌, ಎಟಿಎ, ಅಂಚೆ ಕಚೇರಿಗಳ ಮುಂದೆ ಇದ್ದ ಸರದಿ ಸಾಲು ಇನ್ನೂ ಉದ್ದವಾಗಿ ಬೆಳೆಯಿತು. ನಗರದ ಆರ್‌ಬಿಐ ಪ್ರಾದೇಶಿಕ ಕಚೇರಿ ಎದುರು ಕೂಡ ಹಣ ವಿನಿಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. 

ಕೆಲ ಬ್ಯಾಂಕ್‌ ಶಾಖೆಗಳಲ್ಲಿ ಹಣದ ಕೊರತೆಯಿಂದ ಪ್ರತಿ ವ್ಯಕ್ತಿಗೆ 4.5 ಸಾವಿರ ರೂ. ಹಣ ವಿನಿಮಯ ನೀಡುವ ಬದಲು 2 ಸಾವಿರ ರೂ.ಗೆ ಸೀಮಿತಗೊಳಿಸಲಾಗಿತ್ತು. ಇದು ಗ್ರಾಹಕರು ಮತ್ತು ಬ್ಯಾಂಕ್‌ ಸಿಬ್ಬಂದಿ ನಡುವೆ ವಾಗ್ವಾದಕ್ಕೂ ಎಡೆಮಾಡಿಕೊಟ್ಟಿತು. ಬಹಳಷ್ಟು ಬ್ಯಾಂಕುಗಳಲ್ಲಿ 100 ರೂ. ನೋಟುಗಳು ಖಾಲಿಯಾಗಿ ಎಲ್ಲ ಗ್ರಾಹಕರಿಗೂ 10, 20 ಹಾಗೂ 50 ರೂ. ಮುಖಬೆಲೆಯ ನೋಟುಗಳನ್ನು ಸಿಬ್ಬಂದಿ ವಿನಿಮಯ ಮಾಡಿದರು. ನಗರದಲ್ಲಿ ಮೊದಲ ಬಾರಿಗೆ ಎಟಿಎಂಗಳಲ್ಲಿ 2000 ರೂ. ಹೊಸ ನೋಟುಗಳು ಲಭ್ಯವಾಗಿವೆ.

ದಿನೇ, ದಿನೇ ವ್ಯಾಪಾರ ಕುಸಿತ: ನಗದು ಹಣದ ಕೊರತೆ ಹಾಗೂ ಚಿಲ್ಲರೆ ಸಮಸ್ಯೆಯಿಂದಾಗಿ ವ್ಯಾಪಾರ ದಿನೇ ದಿನೇ ಕುಸಿಯುತ್ತಿದೆ. ಇದೂ ಹೀಗೇ ಮುಂದುವರಿದರೆ ವ್ಯಾಪಾರವನ್ನೇ ಅವಲಂಭಿಸಿರುವ ಕುಟುಂಬಗಳ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.

ಹಣದ ಕೊರತೆ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಹೋಟೆಲ್‌ಗ‌ಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಮಾಲೀಕರು ನಷ್ಟದ ಬೀತಿಯಲ್ಲಿದ್ದಾರೆ. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಸಂದಾಯ ಮಾಡಿಕೊಳ್ಳಲು ಅವಕಾಶವಿರುವ ಹೋಟೆಲ್‌ಗ‌ಳಿಗೆ ಇಂತಹ ಸಮಸ್ಯೆ ಎದುರಾಗಿಲ್ಲ. ಆದರೆ, ಅಲ್ಲೂ ಗ್ರಾಹಕರ ಕೊರತೆಯುಂಟಾಗಿದೆ.

ಬಂಕ್‌ಗಳಲ್ಲಿ ಚಿಲ್ಲರೆ ಸಮಸ್ಯೆ: ಸರ್ಕಾರಿ ಸ್ವಾಮ್ಯದ ಪೆಟ್ರೋಲ್‌ ಬಂಕ್‌ಗಳಲ್ಲಿ ರದ್ದಾಗಿರುವ ನೋಟುಗಳನ್ನು ಸ್ವೀಕರಿಸುತ್ತಿದ್ದರೂ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆ. ಬರುವ ಬಹುತೇಕ ಗ್ರಾಹಕರು 500, 1000 ರೂ. ನೋಟು ನೀಡಿ ನೂರಿನ್ನೂರು ರೂ. ಪೆಟ್ರೋಲ್‌, ಡೀಸೆಲ್‌ ಹಾಕಿಸಿ ಚಿಲ್ಲರೆ ಕೇಳುತ್ತಿದ್ದಾರೆ. ಇದರಿಂದ ಅಲ್ಲಿನ ಸಿಬ್ಬಂದಿ ಚಿಲ್ಲರೆ ನೀಡಲಾಗದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. 

ಆಭರಣ ಮಳಿಗೆಗಳು ಖಾಲಿ ಖಾಲಿ: ಆಭರಣ ಮಳಿಗೆಗಳಲ್ಲಿ 500, 1000 ರೂ. ನೋಟು ಸ್ವೀಕರಿಸದ ಹಿನ್ನೆಲೆಯಲ್ಲಿ ಗ್ರಾಹಕರ ಕೊರತೆ ಉಂಟಾಗಿದೆ. ಅವೆನ್ಯೂ ರಸ್ತೆಯ ಜ್ಯುವೆಲರಿಯೊಂದರ ಮಾಲೀಕರು ಹೇಳುವ ಪ್ರಕಾರ ನೋಟು ರದ್ದು ಹಿನ್ನೆಲೆಯಲ್ಲಿ ಶೇ.80ರಷ್ಟು ಗ್ರಾಹಕರ ಕೊರತೆ ಎದುರಾಗಿದೆಯಂತೆ. 

ಚಿತ್ರಮಂದಿರದಲ್ಲೂ ಜನರಿಲ್ಲ: ನೋಟು ರದ್ದು ಬಿಸಿ ಚಿತ್ರೋದ್ಯಮಕ್ಕೂ ತಟ್ಟಿದ್ದು, ಬಿಡುಗಡೆಯಾಗಿರುವ ಹೊಸ ಚಿತ್ರಗಳನ್ನು ನೋಡಲು ಪ್ರೇಕ್ಷರಿಲ್ಲದಾಗಿದೆ. ಗುರುವಾರ ಸರ್ಕಾರಿ ರಜೆ ನಗದು ಹಣದ ಸಮಸ್ಯೆಯಿಂದ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದವು. ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳುವ ಹಣ ನಿತ್ಯದ ಜೀವನಕ್ಕೇ ಸಾಕಾಗುತ್ತಿಲ್ಲ. ಇನ್ನು ಸಿನೆಮಾ ವೀಕ್ಷಣೆಗೆ ಎಲ್ಲಿ ಹೋಗೋದು ಎನ್ನುತ್ತಾರೆ ಮಹಾಲಕ್ಷ್ಮಿ ಲೇಔಟ್‌ ನಿವಾಸಿ ಶರಣ್‌. 

ನೆಟ್‌ ಬ್ಯಾಂಕಿಂಗ್‌ನತ್ತ ಒಲವು 
ಕೇಂದ್ರ ಸರ್ಕಾರದ ನಿರ್ಧಾರದಿಂದ ನಗದು ವಹಿವಾಟು ಕಷ್ಟದಾಯಕವಾಗಿರುವುದರಿಂದ ಬಹುತೇಕ ಜನ ಇದೀಗ ನೆಟ್‌ ಬ್ಯಾಂಕಿಂಗ್‌ ಆಯ್ಕೆಯತ್ತ ತೆರಳುತ್ತಿದ್ದಾರೆ. ಕೇಂದ್ರ ಸರ್ಕಾರವು ಇನ್ಮುಂದೆ ಪ್ಲಾಸ್ಟಿಕ್‌ ಕ್ಯಾಶ್‌ಗೆ ಆಧ್ಯತೆ ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಹಾಗೂ ಪ್ರಸ್ತುತ ನಗದು ಹಣಕ್ಕೆ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಒಬ್ಬರಿಂದ ಮತ್ತೂಬ್ಬರಿಗೆ ಹಣ ವರ್ಗಾವಣೆ ತ್ರಾಸದಾಯಕವಾಗುತ್ತಿರುವ ಹಿನ್ನೆಲೆಯಲ್ಲಿ ಜನ ನೆಟ್‌ಬ್ಯಾಂಕಿಂಗ್‌ಗೆ ಮೊರೆ ಹೋಗುತ್ತಿದ್ದಾರೆ. ಬಹುತೇಕ ಬ್ಯಾಂಕುಗಳಲ್ಲಿ ನೆಟ್‌ ಬ್ಯಾಂಕಿಂಗ್‌ ಬಗ್ಗೆ ತಿಳಿದುಕೊಳ್ಳಲು ಬ್ಯಾಂಕ್‌ ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿದ್ದುದು ಕಂಡು ಬಂತು. 

ಬಾರ್‌ಗಳಿಗೂ ಚಿಲ್ಲರೆ ಸಮಸ್ಯೆ
ಬಾರ್‌ಗಳಲ್ಲೂ ರದ್ದಾಗಿರುವ ನೋಟುಗಳನ್ನು ಸ್ವೀಕರಿಸದ ಕಾರಣ ಮದ್ಯಮಾನಿಗಳು ಚಿಲ್ಲರೆ ಕೊಟ್ಟೇ ತಮ್ಮ ಬ್ರಾಂಡ್‌ ಖರೀದಿಸಬೇಕಾಗಿದೆ. ಇದರಿಂದ ಬಾರ್‌ಗಳಿಗೂ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆಯಂತೆ. ಒಂದು ಎರಡು ಪೆಗ್‌ ಕುಡಿಯುವವರೂ 2 ಸಾವಿರ ರೂ. ನೋಟು ತರುತ್ತಿದ್ದಾರೆ. ಅವರಿಗೆ ಎಲ್ಲಿಂದ ಚಿಲ್ಲರೆ ತಂದು ಕೊಡೋಣ ಎನ್ನುತ್ತಾರೆ ಮೈಸೂರು ರಸ್ತೆಯ ಪ್ರಿಯಾ ಬಾರ್‌ ಕ್ಯಾಷಿಯರ್‌ ರಾಜಣ್ಣ.

ನಿತ್ಯ 2 ರಿಂದ 3 ಸಾವಿರ ರೂ.ವರೆಗೆ ವ್ಯಾಪಾರವಾಗುತ್ತಿತ್ತು. ನೋಟು ರದ್ದು ಬಳಿಕ ವ್ಯಾಪಾರ ಕುಸಿಯುತ್ತಿದ್ದು ಗುರುವಾರ ಕೇವಲ 300 ರೂ. ವ್ಯಾಪಾರವಾಗಿದೆ. ಹೀಗೇ ಮುಂದುವರಿದರೆ ಏನು ಮಾಡುವುದು ಎಂಬ ಆತಂಕ ಸೃಷ್ಟಿಯಾಗಿದೆ.
-ರಿಜ್ವಾನ್‌, ಕೆ.ಆರ್‌. ಮಾರುಕಟ್ಟೆಯ ಎಳನೀರು ವ್ಯಾಪಾರಿ


Trending videos

Back to Top