CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತರಾತುರಿಯಲ್ಲಿ ಬೆಳ್ಳಂದೂರು ಕೆರೆ ಸ್ವಚ್ಛತೆ

ಬೆಂಗಳೂರು: ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸಲು ತಿಂಗಳ ಗಡುವು ನೀಡಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಆದೇಶ ನೀಡಿದ ಬೆನ್ನಲ್ಲೇ ಬಿಡಿಎ ತರಾತುರಿಯಲ್ಲಿ ಕೆರೆ ಸ್ವಚ್ಛತೆ ಕಾರ್ಯಕ್ಕೆ ಸಿದ್ಧತೆ ನಡೆಸಿದೆ.

ಮೊದಲಿಗೆ ಕೆರೆಯನ್ನು ಸಂಪರ್ಕಿಸುವ ಸಣ್ಣಪುಟ್ಟ ಕಚ್ಚಾ ರಸ್ತೆಗಳಲ್ಲಿ ಕಂದಕಗಳನ್ನು ನಿರ್ಮಿಸುವ ಮೂಲಕ ತ್ಯಾಜ್ಯ ಸಾಗಣೆ ವಾಹನಗಳು ಕೆರೆಯ ಅಂಗಳ ತಲುಪುವುದನ್ನು ತಡೆಯಲು ಮುಂದಾಗಿದೆ. ಜತೆಗೆ ನಾಲ್ಕೈದು ದಿನಗಳಲ್ಲಿ ಕೆರೆ ಹೂಳೆತ್ತುವ ಕಾರ್ಯ ಆರಂಭಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಜಿಟಿ, ಬುಧವಾರ ತಿಂಗಳೊಳಗೆ ಕೆರೆ ಹೂಳು ತೆರವುಗೊಳಿಸಿ ಶುದ್ಧೀಕರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಜತೆಗೆ ಕೆರೆ ಸುತ್ತಮುತ್ತಲ ಕೈಗಾರಿಕೆಗಳನ್ನು ಮುಚ್ಚುವಂತೆಯೂ ಆದೇಶ ಹೊರಡಿಸಿತ್ತು.

ಆ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಹಾಗೂ ಸ್ವಚ್ಛಗೊಳಿಸಲು ತಾತ್ಕಾಲಿಕ ಮತ್ತು ದೀರ್ಘಾವಧಿ ಪರಿಹಾರ ಕ್ರಮಗಳಿಗೆ ಬಿಡಿಎ ಮುಂದಾಗಿದೆ. ಅದರಂತೆ ಸಂಸ್ಕರಣೆಯಾಗದ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳುವುದು, ಕೆರೆಯಲ್ಲಿನ ಹೂಳೆತ್ತಿ ಸ್ವಚ್ಛಗೊಳಿಸುವುದು ಮತ್ತು ಕೆರೆಯ ಸುತ್ತ ತಂತಿಬೇಲಿ ಅಳವಡಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೆರೆಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು "ಉದಯವಾಣಿ' ಜತೆ ಮಾತನಾಡಿದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಈಗಾಗಲೇ ಬಿಡಿಎ ವತಿಯಿಂದ ಕೆರೆಯ ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಸಂಸ್ಕರಣೆಯಾಗದ ಒಳಚರಂಡಿ ನೀರು ಹಾಗೂ ಘನತ್ಯಾಜ್ಯ ಕೆರೆಗೆ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳುಧಿವುದು. ಅಕ್ರಮವಾಗಿ ವಾಹನಗಳಲ್ಲಿ ಕೆರೆ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು ಕೆರೆಗೆ ಸಂಪರ್ಕ ಕಲ್ಪಿಸುವ ಸಣ್ಣಪುಟ್ಟ ಕಚ್ಚಾ ರಸ್ತೆಗಳಲ್ಲಿ ಕಂದಕ ನಿರ್ಮಾಧಿಣಕ್ಕೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಬೆಳ್ಳಂದೂರು ಕೆರೆಗೆ ನಿತ್ಯ ಸುಮಾರು 480 ಎಂಎಲ್‌ಡಿ ಒಳಚರಂಡಿ ನೀರು ಸೇರುತ್ತಿದ್ದು, ಈ ಪೈಕಿ 380 ಎಂಎಲ್‌ಡಿ ನೀರನ್ನು ಸಂಸ್ಕರಿಸಲಾಗುತ್ತಿದೆ ಎಂದು ನ್ಯಾಯಾಧೀಕರಣಕ್ಕೆ ಮಾಹಿತಿ ನೀಡಲಾಗಿದೆ. ಉಳಿದ 100 ಎಂಎಲ್‌ಡಿ ನೀರನ್ನು ಬೇರೆ ಕಡೆಗೆ ಹರಿಸುವಂತೆ ನ್ಯಾಯಾಧೀಕರಣ ಸೂಚನೆ ನೀಡಿದೆ.

ಆದರೆ ಏಕಾಏಕಿ ಅಷ್ಟು ಪ್ರಮಾಣದ ನೀರನ್ನು ಬೇರೆಡೆಗೆ ಹರಿಸಲು ಸಾಧ್ಯವಿಲ್ಲ. ಹೀಗಾಗಿ ಕೆರೆಯ ಸಮೀಪ ಜೌಗು ಪ್ರದೇಶ (ವೆಟ್‌ ಲ್ಯಾಂಡ್‌) ನಿರ್ಮಿಸಿ 100 ಎಂಎಲ್‌ಡಿ ನೀರನ್ನು ಆ ಪ್ರೇಶದಲ್ಲಿ ಹರಿಸಿ ಸಂಸ್ಕರಿಸುವ ಪ್ರಸ್ತಾವವೂ ಸರ್ಕಾರದ ಮುಂದಿದೆ ಎಂದು ಹೇಳಿದರು. 

ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ: ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನ್ಯಾಯಾಧೀಕರಣದ ಆದೇಶದ ಕುರಿತಂತೆ ಶುಕ್ರವಾರ ಸಭೆ ನಡೆಯಲಿದೆ. ಸಭೆಯಲ್ಲಿ ಆದೇಶ ಪಾಲನೆಗೆ ಸಂಬಂಧಿಸಿದಂತೆ ಯಾವ ಜವಾಬ್ದಾರಿಗಳನ್ನು ಯಾವ ಇಲಾಖೆಗಳಿಗೆ ವಹಿಸಬೇಕು ಎಂಬ ತೀರ್ಮಾನವಾಧಿಗಲಿದೆ. ಜತೆಗೆ ಈವರೆಗೆ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಕೈಗೊಂಡ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆರೆ ಸುತ್ತಲ ಕೈಗಾರಿಕೆಗಳ ಗುರುತು ಕಾರ್ಯ ಆರಂಭ
ಬೆಂಗಳೂರು:
ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಕೈಗಾರಿಕೆಗಳನ್ನು ಮುಚ್ಚಲು ಕ್ಷಣಗಣನೆ ಆರಂಭವಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (ಎನ್‌ಜಿಟಿ) ಆದೇಶ ಪ್ರತಿ ದೊರೆತ ಕೂಡಲೇ ಕಾರ್ಯಾಚರಣೆಗಿಳಿಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಜ್ಜಾಗಿದೆ. 

ಎನ್‌ಜಿಟಿ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಕೈಗಾರಿಕೆಗಳನ್ನು ಮುಚ್ಚಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳ್ಳಂದೂರು ಕೆರೆಯ ಸುತ್ತಮುತ್ತ 488 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 97 ಕೈಗಾರಿಕೆಗಳು ದ್ರವ ರೂಪದ ತ್ಯಾಜ್ಯವನ್ನು ಹೊರಬಿಡುತ್ತಿವೆ. ಈಗಾಗಲೇ 11 ಕೈಗಾರಿಕೆಗಳಿಂದ ಕೆರೆ ಮಲಿನವಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ. ಜತೆಗೆ ಅಪಾಯಕಾರಿ ಅಂಶಗಳನ್ನು ಹರಿಸುತ್ತಿರುವ 6 ಕೈಗಾರಿಕೆಗಳನ್ನು ಮುಚ್ಚಲು ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದ್ದಾರೆ.

ಬೆಳ್ಳಂದೂರು ಕೆರೆಯೊಂದಿಗೆ ನಗರದಲ್ಲಿನ ಎಲ ಕೆರೆಗಳ ಸಮೀಪದಲ್ಲಿರುವ ಕೈಗಾರಿಕೆಗಳ ಪಟ್ಟಿ ಸಿದ್ಧಪಿಡಿಸಲಾಗಿದ್ದು, ಕೆರೆಗಳನ್ನು ಮಲಿನಗೊಳಿಸುವ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಮಂಡಳಿ ಮುಂದಾಧಿಗಲಿದೆ. ಇದರೊಂದಿಗೆ ರಾಸಾಯನಿಕ ಸಂಸ್ಕರಣಾ ಘಟಕಗಳನ್ನು (ಇಟಿಪಿ) ಸ್ಥಾಪನೆ ಮಾಡದ ಕೈಗಾರಿಕೆಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲಕ್ಷ್ಮಣ್‌ ತಿಳಿಸಿದ್ದಾರೆ. 

ಕೆರೆ ಪಹರೆಗೆ ಕ್ಯಾಮೆರಾ, ಕಾವಲುಗಾರರು: ಬೆಳ್ಳಂದೂರು ಕೆರೆ ಬೆಂಕಿ ಪ್ರಕರಣದಲ್ಲಿ ಎನ್‌ಜಿಟಿ ನೀಡಿದ ಆದೇಶದ ಅನ್ವಯ ಕೆರೆಯ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಂತೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಅಂಗಳದಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಎರಡೂ ಕೆರೆಗಳ ಬಳಿ ಸಿಸಿಟಿವಿ ಅಳವಡಿಕೆಗೆ ಪಾಲಿಕೆ ಸಜ್ಜಾಗಿದೆ. ಇನ್ನೊಂದೆಡೆ ಕೆರೆಗೆ ಕಸ ಬೀಳುವುದನ್ನು ತಪ್ಪಿಸಲು ಕೆರೆ ಸುತ್ತಲೂ ಕಾವಲುಗಾರರನ್ನು ನೇಮಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

ಇದರೊಂದಿಗೆ ಎರಡೂ ಕೆರೆಗಳ ಸುತ್ತಲಿನ ಪ್ರದೇಶಗಳಲ್ಲಿ ಸುರಿದಿರುವ ಘನತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ತೆರೆವುಗೊಳಿಸುವಂತೆ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಜತೆಗೆ ವಾಹನಗಳು ಕೆರೆಯ ಅಂಗಳವನ್ನು ಪ್ರವೇಶಿಸುವ ಸ್ಥಳಗಳನ್ನು ಗುರುತಿಸಿ ಗುಂಡಿ/ಕಾಲುವೆ ಕೊರೆಯುವುದು ಮತ್ತು ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ 5 ಲಕ್ಷ ರೂ. ದಂಡ ವಿಧಿಸುವಂತೆ ಜಂಟಿ ಆಯುಕ್ತರಿಗೆ ಆದೇಶಿಸಿದ್ದಾರೆ. 

ಬೆಳ್ಳಂದೂರು ಕೆರೆಯ ಸುತ್ತಮುತ್ತ ಸುರಿಯಲಾಗಿರುವ ತ್ಯಾಜ್ಯವನ್ನು ತೆರವುಗೊಳಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಕೆರೆಗೆ ತ್ಯಾಜ್ಯ ಸುರಿಯದಂತೆ ಸಿಸಿಟಿವಿ ಕ್ಯಾಮೆರಾ ಹಾಗೂ ಕಾವಲುಗಾರರನ್ನು ನೇಮಿಸಿಕೊಳ್ಳು ವಂತೆಯೂ ಸೂಚನೆ ನೀಡಲಾಗಿದೆ. 
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

Back to Top