CONNECT WITH US  

ಜನ್ಮ ದಿನಾಂಕ ಮುಚ್ಚಿಟ್ಟ ಪತ್ನಿ;ವಿಚ್ಛೇದನ ಕೋರಿ ಪತಿ ಅರ್ಜಿ

ಬೆಂಗಳೂರು: ವಿವಾಹದ ವೇಳೆ ಪತ್ನಿ ತಾನು ಹುಟ್ಟಿದ ಅಸಲಿ ದಿನಾಂಕವನ್ನು ಮುಚ್ಚಿಟ್ಟಿದ್ದಾಳೆ ಮತ್ತು ಆಕೆ ಹೇಳಿಕೊಂಡ ವಯಸ್ಸಿಗಿಂತಲೂ ಎರಡು ವರ್ಷ ದೊಡ್ಡವಳಾಗಿದ್ದಾಳೆ ಎಂಬ ಕಾರಣಕ್ಕೆ ವಿವಾಹ ವಿಚ್ಛೇದನ ಬಯಸಿ ವ್ಯಕ್ತಿ ಹೈಕೋರ್ಟ್‌
ಮೊರೆ ಹೋಗಿದ್ದಾರೆ.

ಸಾಂಸಾರಿಕ ಜೀವನ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣ ನೀಡಿ ವಿವಾಹ ವಿಚ್ಛೇದನ ಕೋರುವುದು ಸಾಮಾನ್ಯ. ಆದರೆ, ವಿವಾಹದ ಸಂಧರ್ಭದಲ್ಲಿ ಆಕೆ ಹುಟ್ಟಿದ ದಿನಾಂಕದ ಬಗ್ಗೆ ಸುಳ್ಳು ಮಾಹಿತಿ ನೀಡಿ ವಂಚಿಸಿದ್ದಾಳೆ. ಹೀಗಾಗಿ, ಆಕೆ ಜತೆ ಜೀವನ ನಡೆಸಲು ಇಷ್ಟವಿಲ್ಲ ಎಂದು ವಿಚ್ಛೇದನ ನೀಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವುದು ಅಪರೂಪದ ಪ್ರಕರಣವಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕುಮಾರ್‌ (ಹೆಸರು ಬದಲಿಸಲಾಗಿದೆ) ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಹಾಗೂ ನ್ಯಾಯಮೂರ್ತಿ ಮೊಹಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿ ಪತ್ನಿಗೆ ಕಾನೂನು ಹೋರಾಟದ ಶುಲ್ಕವಾಗಿ 10 ಸಾವಿರ ರೂ. ನೀಡುವಂತೆ ಕುಮಾರ್‌ಗೆ ಆದೇಶಿಸಿ, ಅರ್ಜಿ ಸಂಬಂಧ ಆಕೆಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪದವೀಧರನಾಗಿರುವ ಹೊಸನಗರ ತಾಲೂಕಿನ ಕುಮಾರ್‌, 2013ರಲ್ಲಿ ವಧು ಹುಡುಕಾಟದಲ್ಲಿದ್ದರು. ಈ ವೇಳೆ ಸಂಬಂಧಿಕರೊಬ್ಬರ ಮೂಲಕ ಅದೇ ತಾಲೂಕಿನ ಹೇಮಾ (ಹೆಸರು ಬದಲಿಸಲಾಗಿದೆ) ಕುಟುಂಬದವರ ಪರಿಚಯವಾಗಿದ್ದು, ಹೇಮಾರನ್ನು ವರಿಸಲು ಒಪ್ಪಿಕೊಂಡಿದ್ದರು. ಈ ವೇಳೆ ಇಬ್ಬರಿಗೂ ಜಾತಕ ಕೂಡಿ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಲು ಹೇಮಾ ಅವರ ಜನ್ಮ ದಿನಾಂಕ ಕೇಳಿದ್ದರು. ಹೇಮಾ ಅವರು ನೀಡಿದ್ದ ಜನ್ಮ ದಿನಾಂಕ ಹಾಗೂ ಕುಮಾರ್‌ ಜನ್ಮ ದಿನಾಂಕಕ್ಕೆ ಜಾತಕ ಫ‌ಲ ಕೂಡಿ ಬಂದಿತ್ತು. ಹೀಗಾಗಿ 2013ರಲ್ಲಿ ಇಬ್ಬರೂ ವಿವಾಹ ಬಂಧನಕ್ಕೊಳಗಾಗಿದ್ದರು.

ಡೈವೋರ್ಸ್‌ ಯಾಕೆ?: ವಿವಾಹವಾದ ಕೆಲ ವರ್ಷಗಳವರೆಗೆ ಪತಿ ಪತ್ನಿ ಅನೂನ್ಯವಾಗಿದ್ದರು. ಈ ಮಧ್ಯೆ ಪತ್ನಿಯ ಶಾಲಾ
ದಾಖಲೆಗಳು ಹಾಗೂ ಅಂಕಪಟ್ಟಿಯನ್ನು ಕುಮಾರ್‌ ಪರಿಶೀಲಿಸಿದಾಗ, ವಿವಾಹ ಸಂದರ್ಭದಲ್ಲಿ ನೀಡಿದ್ದ ಜನ್ಮ ದಿನಾಂಕಕ್ಕೂ, ಶಾಲಾ ದಾಖಲೆಗಳಲ್ಲಿ ನಮೂದಾಗಿರುವ ದಿನಾಂಕಕ್ಕೂ ಎರಡು ವರ್ಷ ವ್ಯತ್ಯಾಸವಿತ್ತು. ಅಂದರೆ, ಮದುವೆ ವೇಳೆ ನೀಡಿದ್ದ ಮಾಹಿತಿಗಿಂತ ಹೇಮಾ ಎರಡು ವರ್ಷ ದೊಡ್ಡವರಾಗಿದ್ದರು.

ಇದರಿಂದ ಅಸಮಾಧಾನಗೊಂಡ ಕುಮಾರ್‌, ಜನ್ಮ ದಿನಾಂಕದ ಬಗ್ಗೆ ಸುಳ್ಳು ಮಾಹಿತಿ ನೀಡಿ ಮೋಸ ಮಾಡಿದ್ದಾರೆ. ಅಸಲಿ ಜನ್ಮ ದಿನಾಂಕಕ್ಕೆ ತಾಳೆ ಹಾಕಿದಾಗ ನಮ್ಮಿಬ್ಬರ ಜಾತಕ ಫ‌ಲ ಕೂಡಿಬರುವುದಿಲ್ಲ. ಹೀಗಾಗಿ ವಿವಾಹ ವಿಚ್ಛೇದನ ನೀಡಬೇಕು ಎಂದು ಕೋರಿ ಹೊಸನಗರ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿ ಡೈವೋರ್ಸ್‌ ನೀಡಲು ನಿರಾಕರಿಸಿ ಜ.16ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 


Trending videos

Back to Top