CONNECT WITH US  

ಯಕ್ಷಗಾನ, ಚಿತ್ರಕಲೆ ಮಧ್ಯೆ ಅವಿನಾಭಾವ ಸಂಬಂಧ

ಬೆಂಗಳೂರು: ಯಕ್ಷಗಾನ ಹಾಗೂ ಚಿತ್ರಕಲೆ ಒಂದಕ್ಕೊಂದು ಪೂರಕವಾಗಿದ್ದು ಇವೆರಡರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಂ. ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಮಂಗಳವಾರದಿಂದ 3ದಿನಗಳ ಕಾಲ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ತಿಂಗಳ ಚಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಪುರಾತನವಾದ ಕಲೆ ಚಿತ್ರಕಲೆಯಾಗಿದೆ. ಮನುಷ್ಯನ ಹುಟ್ಟಿನೊಂದಿಗೆ ಈ ಕಲೆಯೂ ಹುಟ್ಟಿದೆ ಎಂದರೆ ತಪ್ಪಾಗಲಾರದು. ಎಲ್ಲ ಕಲೆಗಳಿಗಿಂತ ಮೊದಲು ಜನಿಸಿದ್ದು ಚಿತ್ರಕಲೆ ಎಂದರು.

ಯಕ್ಷಗಾನಕ್ಕೂ ಚಿತ್ರಕಲೆಗೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದವರಿಗೆ ಚಿತ್ರಕಲೆಯ ಅಗತ್ಯವಿದೆ. ಚಿತ್ರಕಲಾವಿದರಿಗೂ ಯಕ್ಷಗಾನ ಕಲೆ ಬೇಕು. ಇವೆರಡು ಒಂದಕ್ಕೊಂದು ಪೂರಕವಾಗಿರುವಂತಹದು. ಯಕ್ಷಗಾನ ಹಾಗೂ ಚಿತ್ರಕಲೆಗಳ ಅವಿನಾಭಾವ ಸಂಬಂಧದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮಾತನಾಡಿ, ಚಿತ್ರಕಲೆ ಸಂಬಂಧಿಸಿದ ಕೋರ್ಸ್‌ಗಳನ್ನು ಮುಗಿಸಿ ನೂರಾರು ಮಂದಿ ಹೊರಬರುತ್ತಿದ್ದಾರೆ. ಅವರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿಕೊಡಬೇಕು. ಯುವ ಕಲಾವಿದರು ಮುಂದೆ ಬರುವಂತಹ ಅವಕಾಶಗಳನ್ನು ಹಿರಿಯ ಕಲಾವಿದರು ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟರು. ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ ಹಾಜರಿದ್ದರು.

Trending videos

Back to Top