CONNECT WITH US  

ಪಾರ್ಕಿಂಗ್‌ ಜಗಳ: ವೃದ್ಧನ ಕೊಲೆ

ಬೆಂಗಳೂರು: ಟಾಟಾ ಏಸ್‌ ವಾಹನವನ್ನು ನಿಲುಗಡೆ ಮಾಡುವ ವಿಚಾರವಾಗಿ ಮೂವರು ಯುವಕರು ಹಾಗೂ ಚಾಲಕನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಈ ಸಂಬಂಧ ಓಕಳೀಪುರ ನಿವಾಸಿ ಕಾರ್ತಿಕ್‌ (27), ಕಾಮಾಕ್ಷಿಪಾಳ್ಯದ ರಾಜಶೇಖರ್‌ (28), ಜನಾರ್ದನ್‌ (27) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು ಟಾಟಾ ಏಸ್‌ ಚಾಲಕ, ಪ್ರಕಾಶ್‌ ನಗರದ ನಿವಾಸಿ ಶ್ರೀರಾಮ್‌
(62) ಎಂಬುವರ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಕಾರ್ತಿಕ್‌ ಹಾಗೂ ಜನಾರ್ದನ್‌ ವೈದ್ಯಕೀಯ ಉಪಕರಣಗಳ ಪೂರೈಸುವ ಕಂಪನಿಯ
ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ರಾಜಶೇಖರ್‌ ಇಂಟೀರಿಯರ್‌ ಡಿಸೈನರ್‌ ಕೆಲಸ ಮಾಡುತ್ತಿದ್ದ. ಹತ್ಯೆಗೀಡಾದ ಶ್ರೀರಾಮ್‌, ರಾಜಾಜಿನಗರದ ಸುರೇಶ್‌ ಎಂಬುವರ ಟಾಟಾ ಏಸ್‌ ವಾಹನ ಚಾಲಕರಾಗಿದ್ದಾರೆ.

ಗುರುವಾರ ಬೆಳಗ್ಗೆ ಎಂದಿನಂತೆ ಶ್ರೀರಾಮ್‌ ವಾಹನ ಕೊಂಡೊಯ್ದಿದ್ದಾರೆ. ರಾತ್ರಿ 9.30ರ ಸುಮಾರಿಗೆ ವಾಪಸ್‌
ಬಂದಿದ್ದು, ಎಂದಿನಂತೆ ಡಾ ರಾಜ್‌ ಕುಮಾರ್‌ ರಸ್ತೆಯ ಪಾಪ್ಯುಲರ್‌ ಟಯರ್‌ ಅಂಗಡಿ ಸಮೀಪದ ನವರಸ
ಬಾರ್‌ ಬಳಿಯ ರಸ್ತೆ ಬದಿ ವಾಹನ ನಿಲ್ಲಿಸಲು ಮುಂದಾಗಿದ್ದಾರೆ. 

ಇದೇ ವೇಳೆ ಬಾರ್‌ನಲ್ಲಿ ಮದ್ಯ ಸೇವಿಸಿ ಹೊರಬಂದ ಆರೋಪಿಗಳು, ವಾಹನ ಪಾರ್ಕಿಂಗ್‌ ಮಾಡುವ ಸ್ಥಳದಲ್ಲಿ ನಿಂತಿದ್ದರು. ಇದನ್ನು ಕಂಡ ಶ್ರೀರಾಮ್‌ ಪಕ್ಕಕ್ಕೆ ಹೋಗುವಂತೆ ಕೋರಿದ್ದಾರೆ. ಇದೇ ವಿಚಾರವಾಗಿ ಕಾರ್ತಿಕ್‌ ಹಾಗೂ ಶ್ರೀರಾಮ್‌ ನಡುವೆ ಮಾತಿನ ಚಕಮಕಿ ನಡೆದಿದೆ.

ಕೋಪಗೊಂಡ ಕಾರ್ತಿಕ್‌ ಶ್ರೀರಾಮ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶ್ರೀರಾಮ್‌
ವಾಹನದಲ್ಲಿದ್ದ ಸ್ಪಾನರ್‌ನಿಂದ ಕಾರ್ತಿಕ್‌ ತಲೆಗೆ ಹೊಡೆದಿದ್ದು, ರಕ್ತ ಬಂದಿದೆ. ಪರಿಣಾಮ, ಜಗಳ ಇನ್ನಷ್ಟು ವಿಕೋಪಕ್ಕೆ
ಹೋಗಿದ್ದು, ಮೂವರೂ ಆರೋಪಿಗಳು ಶ್ರೀರಾಮ್‌ ಮೇಲೆ ಹಲ್ಲೆ ನಡೆಸಿದ್ದಾರೆ. 

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದ ಶ್ರೀರಾಮ್‌ರನ್ನು ಸ್ಥಳೀಯರು ಕೂಡಲೇ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೂವರು
ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಶ್ರೀರಾಮ್‌ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Trending videos

Back to Top