CONNECT WITH US  

ತೈಲ ಬೆಲೆ ಇಳಿಕೆಗೆ ಬಂದ್‌ ಪರಿಹಾರವಲ್ಲ

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿರುವ ಹೊತ್ತಿನಲ್ಲಿ ಬಂದ್‌ ಆಚರಣೆ ಸ್ವಾಭಾವಿಕ. ಆದರೆ ಬಂದ್‌ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯದ ಕಾರಣ ಬಂದ್‌ ಆಚರಣೆಯೊಂದೇ ಪರಿಹಾರವಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ಹೇಳಿದ್ದಾರೆ.

ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ದರ 83.69 ಹಾಗೂ ಡೀಸೆಲ್‌ ದರ 74.84 ರೂ.ಗೆ ಹೆಚ್ಚಳವಾಗಿದೆ. ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಇದರಿಂದ ರೈತರು, ಕೈಗಾರಿಕೋದ್ಯಮಿಗಳು, ವ್ಯಾಪಾರಿ, ವಹಿವಾಟುದಾರರು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವುದು ನಿಜ. ಆದರೆ ಇದಕ್ಕೆ ಬಂದ್‌ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.

ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹೊತ್ತಿನಲ್ಲೇ ಬಂದ್‌ಗೆ ಕರೆ ನೀಡಿದ್ದರಿಂದ ವ್ಯಾಪಾರ- ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗುತ್ತದೆ. ಕೈಗಾರಿಕೆಗಳು ಹಾಗೂ ವ್ಯಾಪಾರ ವಲಯದಿಂದ ವಾರ್ಷಿಕ ಸುಮಾರು 65,000 ಕೋಟಿ ರೂ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಸಂದಾಯವಾಗುತ್ತಿದೆ. ಅಂದರೆ ನಿತ್ಯ ಸರ್ಕಾರಕ್ಕೆ 160 ಕೋಟಿ ರೂ. ತೆರಿಗೆ ಸಂದಾಯವಾಗುತ್ತದೆ ಎಂಬುದು ಸ್ಪಷ್ಟ. ಬಂದ್‌ನಿಂದಾಗಿ ರಾಜ್ಯ ಸರ್ಕಾರಕ್ಕೆ 160 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ ಪೆಟ್ರೋಲ್‌ ಹಾಗೂ ಡೀಸೆಲ್‌ ದರದ ಮೇಲೆ ವಿಧಿಸುವ ತೆರಿಗೆಯಿಂದ ರಾಜ್ಯ ಸರ್ಕಾರ ವಾರ್ಷಿಕ ಸುಮಾರು 11,000 ಕೋಟಿ ರೂ. ಆದಾಯ ಪಡೆಯುತ್ತಿದೆ. ಆದರೆ ಬಂದ್‌ನಿಂದ ಸುಮಾರು 30.6 ಕೋಟಿ ರೂ. ತೆರಿಗೆ ಖೋತಾ ಆಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ ಕೇಂದ್ರ ಸರ್ಕಾರ 19.48 ರೂ. (ಶೇ.23.27) ಹಾಗೂ ಡೀಸೆಲ್‌ ದರದಲ್ಲಿ 15.33 ರೂ. (ಶೇ.20.58) ಪಡೆಯುತ್ತಿದೆ. ರಾಜ್ಯ ಸರ್ಕಾರವು ಕ್ರಮವಾಗಿ ಶೇ.32 ಹಾಗೂ ಶೇ.21ರಷ್ಟು ತೆರಿಗೆ ಸಂಗ್ರಹಿಸುತ್ತಿದೆ. ಇದರಿಂದ ಹೊರೆಯಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ-ರಾಜ್ಯ ಸರ್ಕಾರ ತೆರಿಗೆ ಇಳಿಸಬೇಕು: ರಾಜ್ಯ ಸರ್ಕಾರ ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರದ ಮೇಲೆ ಶೇ.2ರಷ್ಟು ತೆರಿಗೆ ಹೆಚ್ಚಳ ಮಾಡಿದ್ದು, ಕೈಗಾರಿಕೆಗಳು, ವ್ಯಾಪಾರ- ವಹಿವಾಟುದಾರರ ಸಮೂಹ, ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗುಜರಾತ್‌, ಮಹಾರಾಷ್ಟ್ರ, ರಾಜಸ್ತಾನವು ತೈಲದ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಿದೆ. ರಾಜ್ಯ ಸರ್ಕಾರವೂ ತೆರಿಗೆ ಇಳಿಕೆ ಮಾಡಿದರೆ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರವು ತನ್ನ ಧೋರಣೆ ಬದಲಿಸಿಕೊಂಡು ತೆರಿಗೆ ಪ್ರಮಾಣ ತಗ್ಗಿಸಿದರೆ ಉಪಯುಕ್ತವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಸ್ಪಂದಿಸಬೇಕೆ ಹೊರತು ಬಂದ್‌ಗೆ ಪ್ರಚೋದನೆ ನೀಡುವುದರಿಂದ ತೆರಿಗೆ ಆದಾಯ ಖೋತಾ ಆಗಲಿದೆ ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವರು ಬಸ್‌ ಪ್ರಯಾಣ ದರವನ್ನು ಶೇ. 18ರಷ್ಟು ಹೆಚ್ಚಳ ಮಾಡುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇದು ಸಹ ಸಾರ್ವಜನಿಕರು ಸೇರಿದಂತೆ ಉದ್ಯಮ ವಲಯಕ್ಕೆ ಹೊರೆಯಾಗಲಿದೆ ಎಂದು ಹೇಳಿದ್ದಾರೆ.


Trending videos

Back to Top