CONNECT WITH US  

50 ಲಕ್ಷ ಕೋಟಿ ರೂ. ಹೂಡಿಕೆ ಅಗತ್ಯ

ಬೆಂಗಳೂರು: ದೇಶದ ದೂರಗಾಮಿ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ 2022ರ ವೇಳೆಗೆ ಮೂಲಸೌಕರ್ಯ ಕ್ಷೇತ್ರದಲ್ಲಿ 50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಅವಶ್ಯಕತೆಯಿದೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಕರ್ನಾಟಕ ಅಧ್ಯಕ್ಷ ಡಾ. ಎನ್‌. ಮುತ್ತುಕುಮಾರ್‌ ತಿಳಿಸಿದರು.

ಸಿಐಐ-ಕರ್ನಾಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ "ವಾರ್ಷಿಕ ಮೂಲಸೌಕರ್ಯ ಅಭಿವೃದ್ಧಿ ಸಮಾವೇಶ-2018'ರಲ್ಲಿ ಮಾತನಾಡಿದ ಅವರು, ಮುಂಬರುವ ವರ್ಷಗಳಲ್ಲಿ ವಿದ್ಯುತ್‌ ಪ್ರಸರಣ, ರಸ್ತೆ ಮತ್ತು ಹೆದ್ದಾರಿ, ನವೀಕರಿಸಬಹುದಾದ ಇಂಧನ ವಲಯಗಳು ಬಂಡವಾಳ ಹೂಡಿಕೆಯನ್ನು ಮುನ್ನಡೆಸಲಿವೆ ಎಂದರು.

ಕೈಗಾರಿಕೆಗಳು ಮೂಲಸೌಕರ್ಯಗಳು ಮತ್ತು ಭೂಮಿಯ ಸರಿಯಾದ ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆ ಮೇಲಿನ ಮೂಲಸೌಕರ್ಯ ವಲಯದ ಅಭಿವೃದ್ಧಿಯ ಪ್ರಭಾವವನ್ನು ಶೇ.40ಕ್ಕೆ ತಗ್ಗಿಸಬಹುದು ಎಂದರು.

ವೊಲ್ವೋ ಕಂಪೆನಿ ಮುಖ್ಯಸ್ಥ ಕಮಲ್‌ ಬಾಲಿ ಮಾತನಾಡಿ, ಆರೋಗ್ಯಕರ ಆರ್ಥಿಕತೆಗೆ ಉತ್ತಮ ಮೂಲಸೌಕರ್ಯ ಹಾಗೂ ಸಾರಿಗೆ ವ್ಯವಸ್ಥೆ ಅತ್ಯವಶ್ಯಕ. ಈ ವಿಚಾರದಲ್ಲಿ ಭಾರತ ಬಹಳ ದೂರ ಸಾಗಬೇಕಿದೆ. ಭಾರತದ ಮೂಲಸೌಕರ್ಯ ನಿರ್ವಾಹಕರಿಗೆ ಅಗತ್ಯ ಮಾನವ ಸಂಪನ್ಮೂಲ, ಕಾಯ್ದೆಗಳು ಮತ್ತು ತಂತ್ರಜ್ಞಾನ ಪೂರೈಸಿದರೆ, ಇವರು ಜಗತ್ತಿನ ಬೇರೆ ಮೂಲಸೌಕರ್ಯ ನಿವಾರ್ಹಕರನ್ನು ಹಿಮ್ಮೆಟ್ಟಿಸುತ್ತಾರೆ ಎಂದರು.

ಶ್ರೀ ಸಿಟಿ ಕಂಪೆನಿ ಅಧ್ಯಕ್ಷ ಸತೀಶ್‌ ಕಾಮತ್‌ ಮಾತನಾಡಿ, ನಗರೀಕರಣ ಅಭಿವೃದ್ಧಿಶೀಲ ಆರ್ಥಿಕತೆಯ ಕುರುಹು. ಅಭಿವೃದ್ಧಿ ಮತ್ತು ನಗರೀಕರಣದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಸೂಕ್ತ ತಂತ್ರಜ್ಞಾನ ಬಳಸಿ ಸರಿಯಾದ ಮೂಲಸೌಕರ್ಯಗಳನ್ನು ಸಕಾಲದಲ್ಲಿ ಅಭಿವೃದ್ಧಿಗೊಳಿಸುವ ಮೂಲಕ ದೇಶದ ಸದೃಢ ಭವಿಷ್ಯವನ್ನು ಖಾತರಿಗೊಳಿಸಬೇಕಿದೆ ಎಂದರು.

ಕುಶ್‌ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಂಶುಲ್‌ ಜೈನ್‌, ಬ್ಯಾರಿ ಸಮೂಹ ಸಂಸ್ಥೆಯ ಅಧ್ಯಕ್ಷ ಸೈಯದ್‌ ಮೊಹಮ್ಮದ್‌ ಬ್ಯಾರಿ ಇತರರಿದ್ದರು.


Trending videos

Back to Top