CONNECT WITH US  

ಬಾಕಿ ವೇತನ ವಾರದೊಳಗೆ ಪಾವತಿ

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಕಸ ವಿಲೇವಾರಿ ಮಾಡುವ ಆಟೋ ಹಾಗೂ ಲಾರಿ ಚಾಲಕ, ಸಹಾಯಕ ಹಾಗೂ ಕಸ ತುಂಬುವ ನೌಕರರ ಬಾಕಿ ಉಳಿಸಿಕೊಂಡಿರುವ ವೇತನವನ್ನು ವಾರದಲ್ಲಿ ಪಾವತಿಸಲಾಗುವುದು ಎಂದು ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಶೇಷ ಆಯುಕ್ತ ರಣದೀಪ್‌ ಭರವಸೆ ನೀಡಿದರು. 

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಕಸ ನಿರ್ವಹಣೆ ಆಟೋ ಮತ್ತು ಲಾರಿ ಚಾಲಕ, ಸಹಾಯಕ ಹಾಗೂ ಕಸ ತುಂಬುವ ಸಿಬ್ಬಂದಿ ಮಂಗಳವಾರ ಬಾಕಿ ಉಳಿಸಿಕೊಂಡ ವೇತನ ಬಿಡುಗಡೆಗೆ ಆಗ್ರಹಿಸಿ  ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ವಿಶೇಷ ಆಯುಕ್ತರು ಬಾಕಿ ವೇತನ ಪಾವತಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ಮಹಾಸಂಘದ ಅಧ್ಯಕ್ಷ ಶ್ರೀನಿವಾಸುಲು, ಆಟೋ ಹಾಗೂ ಲಾರಿ ಚಾಲಕ, ಸಹಾಯಕ ಮತ್ತು ಕಸ ತುಂಬುವ ಆರು ಸಾವಿರ ಗುತ್ತಿಗೆ ನೌಕರರು, ನಿತ್ಯ ಕಸ ವಿಲೇವಾರಿ ಮಾಡಲು ಶ್ರಮ ವಹಿಸುತ್ತಿದ್ದಾರೆ. ಆದರೆ, ಅವರಿಗೆ 6 ತಿಂಗಳ ವೇತನ ಪಾವತಿಸಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಗೌರಿ-ಗಣೇಶ ಹಬ್ಬ ಆಚರಣೆಗೂ ಹಣ ಇಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ, ತ್ಯಾಜ್ಯ ನಿರ್ವಹಣೆ ಮಾಡುವ ಆಟೋ, ಲಾರಿಗಳನ್ನು ನಿಲ್ಲಿಸಿ ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Trending videos

Back to Top