CONNECT WITH US  

"ನಾವು ಕಲಿಯದೆ ಇದ್ದರೆನೇ ಒಳ್ಳೆಯದಿತ್ತು'

ಬೆಂಗಳೂರು: "ಮನುಷ್ಯನ ಮನಸ್ಸಿನಿಂದ ಹಿಡಿದು ಎಲ್ಲವೂ ಇಂದು ಪ್ರದೂಷಣಗೊಂಡಿದೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ. ಆದ್ದರಿಂದ ನಾವು ಕಲಿಯದೆ ಇದ್ದರೆನೇ ಒಳ್ಳೆಯದಿತ್ತು ಅನಿಸುತ್ತಿದೆ'

ಕಳೆದ ನಾಲ್ಕು ದಶಕಗಳಿಂದ ಹಳ್ಳಿಗಳಲ್ಲಿ ಸೈಕಲ್‌ ತುಳಿದು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಬೆಳಗಾವಿ ಜಿಲ್ಲೆ ಕಟ್ಟಣಬಾವಿಯ ಶಿವಾಜಿ ಛತ್ರೆಪ್ಪ ಕಾಗಣೇಕರ ಅವರ ಬೇಸರದ ನುಡಿಗಳಿವು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2018-19ನೇ ಸಾಲಿನ "ಡಿ. ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು. 

ಪರಿಸರ ಮಾಲಿನ್ಯ, ಶಿಷ್ಟಾಚಾರಗೊಂಡ ಭ್ರಷ್ಟಾಚಾರ, ಅರಣ್ಯ ನಾಶ ಸೇರಿದಂತೆ ಇಂದಿನ ದುಃಸ್ಥಿತಿಗೆ ಶಿಕ್ಷಣ ಪದ್ಧತಿ ಕಡೆಗೇ ಬೊಟ್ಟುಮಾಡಿದ ಶಿವಾಜಿ ಕಾಗಣೇಕರ, ಶ್ರಮ ಜೀವನ ಇರುವುದು ಕಲಿತವರಿಗಲ್ಲ; ಕಲಿಯದವರಿಗಾಗಿ ಮಾತ್ರ. ಹಾಗಾಗಿ, "ಸ್ವಲ್ಪ ಓದಿ ಊರು ಬಿಡಿ, ಜಾಸ್ತಿ ಓದಿ ದೇಶ ತೊರೆಯಿರಿ' ಎನ್ನುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ. ಗಾಳಿ, ನೀರು, ಮಣ್ಣು ಹೀಗೆ ಪ್ರತಿಯೊಂದು ಮಲೀನಗೊಂಡಿದೆ. ಮನುಷ್ಯ ಮನಸ್ಸು ಕೂಡ ಪ್ರದೂಷಣವಾಗಿದೆ. ಇದೆಲ್ಲವನ್ನೂ ನೋಡಿದಾಗ, ನಾವು ಕಲಿಯದಿದ್ದರೆ ಒಳ್ಳೆಯದಿತ್ತು ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ.33ರಷ್ಟು ಅರಣ್ಯ ಇರಬೇಕು ಎಂದು ನಿಯಮ ಹೇಳುತ್ತದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಅರಣ್ಯ ಇಲಾಖೆಯೂ ಇದೆ. ಆದರೆ, ಸದ್ಯ ಉಳಿದಿರುವುದು ಶೇ.11ರಷ್ಟು ಹಸಿರು. ಹಾಗಿದ್ದರೆ, ಉಳಿದ ಮರಗಳನ್ನು ಯಾರು ಕದ್ದರು? ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರೆ, ಏನು ಮಾಡೋದು? ಭ್ರಷ್ಟಾಚಾರ ಎನ್ನುವುದು ಶಿಷ್ಟಾಚಾರವಾಗಿಬಿಟ್ಟಿದೆ. ಸಣ್ಣ-ದೊಡ್ಡ ರಾಜಕೀಯ ಪಕ್ಷಗಳು ಕಿತ್ತಾಡುತ್ತಿವೆ. ಇದನ್ನು ಬಿಟ್ಟು ಎಲ್ಲರೂ ದೇಶದ ಸೇವಕರು ಎಂಬ ಭಾವನೆಯಿಂದ ಕೆಲಸ ಮಾಡಬೇಕು ಎಂದು ಸೂಚ್ಯವಾಗಿ ಹೇಳಿದರು.

ಪ್ರಕೃತಿ ವಿಪತ್ತಿಗೆ ಶಿಕ್ಷಣ ಕಾರಣ - ಸಿಎಂ: ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಶಿಕ್ಷಣವು ಪ್ರಕೃತಿಯ ವಿಪತ್ತಿಗೆ ಕಾರಣವಾಗುತ್ತಿದೆ ಎಂಬ ಮಾತುಗಳು ಇತ್ತೀಚೆಗೆ ಕೇಳಿಬರುತ್ತಿದೆ. ವೈಯಕ್ತಿಕ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಸೀಮಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಬಿಎಸ್ಸಿ ಪೂರೈಸಿ, ಹಳ್ಳಿಗೆ ಹೋಗಿ ನೂರಾರು ಮಹಿಳೆಯರ ಬದುಕು ಹಸನುಗೊಳಿಸುವಲ್ಲಿ ನಿರತರಾದ ಶಿವಾಜಿ ಕಾಗಣೇಕರ ಎಲ್ಲರಿಗೂ ಮಾದರಿ ಆಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಶಿವಾಜಿ ಒಬ್ಬ ವ್ಯಕ್ತಿಯಾಗಿ ಮತ್ತು ಶಕ್ತಿಯಾಗಿ ಮಾಡಿದ್ದಾರೆ. ಆ ಮೂಲಕ ಸರ್ಕಾರ ಮತ್ತು ಸಮಾಜಕ್ಕೆ ದಾರಿದೀಪವಾಗಿದ್ದಾರೆ.

ಅಂತಹವರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಡಿ. ದೇವರಾಜ ಅರಸು ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಕೇವಲ 13 ನಿಮಿಷದಲ್ಲಿ ಸಮಿತಿಯು ಸರ್ವಾನುಮತದಿಂದ ಶಿವಾಜಿ ಕಾಗಣೇಕರ ಅವರನ್ನು ಆಯ್ಕೆ ಮಾಡಿತು. ಅವರು ಸ್ವಂತ ಮನೆ ಹೊಂದಿಲ್ಲ, ವಾಹನ ಇಲ್ಲ.

ಫೋನ್‌ ಅಂತೂ ಇಲ್ಲವೇ ಇಲ್ಲ. ಸಾಮಾಜಿಕ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಸರ್ಕಾರದ ಅನೇಕ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಸಚಿವರಾದ ವೆಂಕಟರಮಣಪ್ಪ, ಎಚ್‌.ಡಿ. ರೇವಣ್ಣ, ಪುಟ್ಟರಂಗಶೆಟ್ಟಿ, ಸಾ.ರಾ. ಮಹೇಶ್‌, ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಮತ್ತಿತರರು ಉಪಸ್ಥಿತರಿದ್ದರು.


Trending videos

Back to Top