CONNECT WITH US  

6 ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿದ ನಿರ್ವಾಹಕ

ಬೆಂಗಳೂರು: ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟುಹೋಗಿದ್ದ ಆರು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಸಾವಿರ ರೂ. ನಗದು ಇದ್ದ ಬ್ಯಾಗ್‌ ಅನ್ನು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ನಿರ್ವಾಹಕ ಆರ್‌.ಶ್ರೀಧರ್‌ ಅವರಿಗೆ ನಿಗಮದಿಂದ ಗುರುವಾರ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಶಿರಾ ಘಟಕದ ನಿರ್ವಾಹಕ ಶ್ರೀಧರ್‌, ಜ.8ರಂದು ಶಿರಾ-ಬೆಂಗಳೂರು-ಪಾವಗಡ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬ್ಯಾಗನ್ನು ಬಸ್ಸಿನಲ್ಲೇ ಬಿಟ್ಟುಹೋಗಿದ್ದರು. 6 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4 ಸಾವಿರ ನಗದು ಇದ್ದ ಬ್ಯಾಗ್‌ ದೊರೆತ ಬಗ್ಗೆ ನಗರದ ಕೆಂಪೇಗೌಡ ಬಸ್‌ ನಿಲ್ದಾಣದ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದ ಶ್ರೀಧರ್‌, ನಂತರ ಅದನ್ನು ಸಂಬಂಧಪಟ್ಟ ಪ್ರಯಾಣಿಕರಿಗೆ ಹಿಂದಿರುಗಿಸಿದ್ದರು.

ಪ್ರಾಮಾಣಿಕತೆ ಮೆರೆದ ಶ್ರೀಧರ್‌ ಅವರಿಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು, 5000 ರೂ. ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ನಂತರ ಮಾತನಾಡಿದ ಶಿವಯೋಗಿ ಕಳಸದ, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ನಮ್ಮೆಲ್ಲರ ಕರ್ತವ್ಯ.

ಶ್ರೀಧರ್‌ ಅವರ ನಿಸ್ವಾರ್ಥ ಸೇವೆ ಇತರರಿಗೆೆ ಸ್ಫೂರ್ತಿಯಾಗಿದೆ. ಸಾರ್ವಜನಿಕರಿಗೆ ವಿಶ್ವಾಸಾರ್ಹ ಸೇವೆ ನೀಡುವ ನಿಟ್ಟಿನಲ್ಲಿ ಶ್ರೀಧರ್‌ ಅವರ ಈ ಕಾರ್ಯ ಪ್ರೇರಣೆಯಾಗಲಿ ಎಂದರು. ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ (ಸಿಬ್ಬಂದಿ) ಬಿ.ಸಿ.ರೇಣುಕೇಶ್ವರ್‌ ಉಪಸ್ಥಿತರಿದ್ದರು.

Trending videos

Back to Top