CONNECT WITH US  

ಸಮಾಜ ಒಳಿತಿಗಾಗಿ ದುಡಿಯಿರಿ

ಬೆಂಗಳೂರು: ಸಮಾಜದಿಂದ ಆಶ್ರಯ ಪಡೆದುಕೊಂಡವರು ತಮ್ಮ ಏಳ್ಗೆಯ ನಂತರ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಬನಶಂಕರಿ 2ನೇ ಹಂತದ ಕನಕ ಬಡಾವಣೆಯಲ್ಲಿ ಭಾನುವಾರ ಭುವನೇಶ್ವರಿ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮರವು ಭೂಮಿಯಿಂದ ಕೆಲ ಅಂಶ ಪಡೆದು ಮಾನವ ಸಮುದಾಯಕ್ಕೆ ಎಲ್ಲವನ್ನೂ ನೀಡುತ್ತದೆ. ನಮ್ಮ ಕಾರ್ಯಗಳೂ ಅದೇ ರೀತಿ ಇರಬೇಕು ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಗಳು ಯಾವತ್ತೂ ಜಾತಿ ಆಧಾರಿತವಾಗಿರಬಾರದು. ಸಮುದಾಯ ನೆಪವಷ್ಟೇ, ಯಾವತ್ತೂ ಸಮುದಾಯವನ್ನು ಮೀರಿ ಸಾಮಾಜಿಕ ಸೇವೆ ನಡೆಯಬೇಕು. ಹೀಗೆ ಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು. ಆದಿಚುಂಚನಗಿರಿ ಸಂಸ್ಥಾನ ಕೇವಲ ಒಕ್ಕಲಿಗ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಧರ್ಮದವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಎಲ್ಲರನ್ನೂ ಮಹಾಸಂಸ್ಥಾನ ಮಾತಾ ವಾತ್ಸಲ್ಯದಿಂದ ನೋಡುತ್ತದೆ ಎಂದು ನುಡಿದರು.

ಮಹಿಳೆ ಸಮರ್ಥಳು: ಮೇಯರ್‌ ಗಂಗಾಂಬಿಕೆ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ತೋರುತ್ತಿದ್ದು ಪುರುಷರಷ್ಟೇ ಸಮರ್ಥರು ಎಂಬುವುದನ್ನು ತೋರ್ಪಡಿಸುತ್ತಿದ್ದಾರೆ. ಸೇವಾ ಕ್ಷೇತ್ರದಲ್ಲೂ ಮತ್ತಷ್ಟು ಉತ್ತಮ ಕೆಲಸ ಮಾಡಲಿ ಎಂದು ಆಶಿಸಿದರು.

ಮೇಯರ್‌ ಪಟ್ಟ ನನಗೆ ಒಲಿದು ಬಂದಾಗ ಕೇವಲ 2 ಬಾರಿ ಆಯ್ಕೆಯಾದ ಇವರು ಉತ್ತಮ ಆಡಳಿತ ನೀಡುತ್ತಾರಾ? ಎಂಬ ಅನುಮಾನ ಹಲವರಲ್ಲಿತ್ತು. ಆದರೆ ಹಿಂಜರಿಕೆಯನ್ನು ಮೆಟ್ಟಿನಿಂತು ಅಧಿಕಾರ ನಡೆಸುತ್ತಿದ್ದು, ಜನ ಮೆಚ್ಚುವ ಕೆಲಸ ಮಾಡುವುದಾಗಿ ಹೇಳಿದರು.

ಅದಮ್ಯ ಚೇತನ ಸಂಸ್ಥೆ ಗೆ 25 ಸಾವಿರ ರೂ.: ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷೆ ಮಹಾದೇವಮ್ಮ, ಸಂಘದ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರ ಆರ್ಥಿಕ ನೆರವಿದೆ. ಅದಮ್ಯ ಚೇತನ ಸಂಸ್ಥೆಯು ಹಸಿದ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದು, ಆ ಸಂಸ್ಥೆಗಾಗಿ ಸಂಘದಿಂದ 25 ಸಾವಿರ ರೂ. ನೀಡುವುದಾಗಿ ಹೇಳಿದರು. ಮಾಜಿ ಉಪ ಮೇಯರ್‌ ಎಲ್‌.ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಉಪಸ್ಥಿತರಿದ್ದರು.


Trending videos

Back to Top