CONNECT WITH US  

ಭಾರತ "ವಿಶ್ವ ಗುರು'; ಭಾರತೀಯರು ವಿಶ್ವ ಪ್ರಜೆ ಆಗಬೇಕು

ಬೆಂಗಳೂರು: ಶಿಕ್ಷಣ ಮತ್ತು ಜ್ಞಾನ ಕ್ಷೇತ್ರದ ತನ್ನ ಗತ ವೈಭವ ಮರಳಿ ಗಳಿಸುವ ಮೂಲಕ ಭಾರತ "ವಿಶ್ವ ಗುರು' ಆಗಬೇಕು; ದೇಶದ ನಾಗರಿಕತೆ, ಸಂಸ್ಕೃತಿ, ಸಹಬಾಳ್ವೆ, ಧಾರ್ಮಿಕ ಮತ್ತು ಸಾಮಾಜಿಕ ವೈವಿಧ್ಯತೆಯ ಭದ್ರ ಬೇರುಗಳ ಜತೆಗೆ ಭಾರತೀಯರು "ವಿಶ್ವ ಪ್ರಜೆ'ಗಳಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.

ಸಿಎಂಆರ್‌ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೆಣ್ಣೂರು-ಬಾಗಲೂರು ರಸ್ತೆಯ ಚಾಗಲಟ್ಟಿಯಲ್ಲಿ ಸಿಎಂಆರ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌, ವಸತಿ ನಿಲಯದ ಸಮುತ್ಛಯ ಉದ್ಘಾಟನೆ ಹಾಗೂ ಸಿಎಂಆರ್‌ ಬೋಧಕ ವರ್ಗಕ್ಕೆ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಾಚೀನ ನಾಗರಿಕತೆಗಳ ತೊಟ್ಟಿಲು ಭಾರತಕ್ಕೆ ಪ್ರಪಂಚದ ಶಿಕ್ಷಣ ಮತ್ತು ಜ್ಞಾನದ ಪೀಠದಲ್ಲಿ "ವಿಶ್ವ ಗುರು'ವಿನ ಸ್ಥಾನ ನೀಡಲಾಗಿತ್ತು. ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾಲ ಎನಿಸಿಕೊಂಡ ತಕ್ಷಶಿಲಾ ವಿವಿಯಲ್ಲಿ ಆ ಕಾಲದಲ್ಲಿ 65 ಕೋರ್ಸ್‌ಗಳಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ನಳಂದಾ ವಿಶ್ವವಿದ್ಯಾಲಯದ ಬೃಹತ್‌ ಗ್ರಂಥಾಲಯ ಇದಕ್ಕೆ ಪುರಾವೆ. ನಮ್ಮ ಈ ವಿಶ್ವ ಗುರುವಿನ ಸ್ಥಾನವನ್ನು ಮರಳಿ ಪಡೆಯಬೇಕಾಗಿದೆ ಎಂದರು.

ದೇಶದ ನಾಗರಿಕತೆ, ಸಂಸ್ಕೃತಿ, ಸಹಬಾಳ್ವೆ, ಧಾರ್ಮಿಕ ಮತ್ತು ಸಾಮಾಜಿಕ ವೈವಿಧ್ಯತೆಯಂತಹ ಬೇರುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವುದರ ಜತೆಗೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಪರಿಣಾಮವಾಗಿ ನಮ್ಮ ಮುಂದೆ ಎದುರಾಗಿರುವ ಸವಾಲುಗಳಿಗೆ ಮುಖಾಮುಖೀಯಾಗುವ ಮೂಲಕ ಭಾರತೀಯರು ವಿಶ್ವ ಪ್ರಜೆಗಳಾಗಬೇಕು ಎಂದು ಉಪರಾಷ್ಟ್ರಪತಿ ಕರೆ ನೀಡಿದರು.

ಭಾರತದ ಶೈಕ್ಷಣಿಕ ಸಾಧನೆಗೆ ಸುದೀರ್ಘ‌ ಹಿನ್ನೆಲೆಯಿದೆ. ಪ್ರಾಚೀನ ಭಾರತದ ಶಿಕ್ಷಣವು ವೇದಗಳಿಂದ ಪ್ರಭಾವಿತವಾಗಿದೆ. ಶಿಕ್ಷಣ ಮತ್ತು ಜ್ಞಾನದ ಉದಾತ್ತ ಅಂಶಗಳನ್ನು ಹೊಂದಿರುವ ವೇದಗಳು ಪ್ರಬುದ್ಧ ಸಂಸ್ಕೃತಿಯ ಅಭಿವ್ಯಕ್ತಿ ಆಗಿವೆ. ಶ್ರೇಷ್ಠತೆಯೊಂದಿಗೆ ಪರಿಪೂರ್ಣ ಜೀವನ ಸಾಗಿಸಲು ವೇದಗಳು ನಮಗೆ ಶಾಶ್ವತವಾಗಿ ಪ್ರೇರಣೆ ನೀಡಲಿವೆ. ಸದೃಢ ಪ್ರಾಚೀನ ಶಿಕ್ಷಣ ಪದ್ಧತಿಯ ಮೂಲಕ ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿಕೊಂಡು ಅದನ್ನು ಪಸರಿಸಿದ್ದೇ ಇಂದಿಗೂ ಬಹು ವಿಸ್ತಾರ ಉಪಖಂಡದಲ್ಲಿ ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಏಕತೆಗೆ ಕಾರಣವಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

ಸಂಕುಚಿತ ಗಡಿ ದಾಟಿ: ಈಗಿನ ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ. ಇವುಗಳನ್ನು ಮೆಟ್ಟಿ ನಿಲ್ಲಲು ಜ್ಞಾನಾರ್ಜನೆ ನಿರಂತರವಾಗಿಸಿಕೊಳ್ಳಬೇಕು. ರಚನಾತ್ಮಕ ಟೀಕೆಗಳಿಗೆ ಮುಕ್ತವಾಗಿರಬೇಕು, ಪರಸ್ಪರ ಸಹಕಾರ ಮತ್ತು ಸಂಘಟಿತ ಜೀವನದ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಕಲ ಜೀವರಾಶಿಗಳು ಮತ್ತು ಪ್ರಕೃತಿ ನಿಯಮಗಳನ್ನು ಗೌರವಿಸಬೇಕು.

ವಿಶೇಷವಾಗಿ ನಮ್ಮನ್ನು ವಿಭಜಿಸುತ್ತಿರುವ ಜಾತಿ, ಜನಾಂಗ, ಲಿಂಗ ಮತ್ತು ಆರ್ಥಿಕ ಸ್ಥಾನಮಾನ ಹಾಗೂ ವೃತ್ತಿಯ ಸಂಕುಚಿತ ಗಡಿಗಳನ್ನು ದಾಟಿ ಯುವ ಸಮುದಾಯ ಬೆಳೆಯಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದೇಶದ ಆರ್ಥಿಕತೆ ಬೆಳೆಯಬೇಕಾದರೆ ಸರ್ಕಾರಗಳ ಶಾಲಾ ಶಿಕ್ಷಣದ ಮೇಲಿನ ಹೂಡಿಕೆ ಮತ್ತು ಕಾಳಜಿ ಹೆಚ್ಚಾಗಬೇಕು. ಉದ್ಯೋಗ ಪಡೆಯುವುದೊಂದೇ ಶಿಕ್ಷಣದ ಅಂತಿಮ ಗುರಿಯಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಕಿವಿ ಮಾತು ಹೇಳಿದರು.

ನ್ಯಾಷನಲ್‌ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷ ಡಾ. ಕೆ.ಪಿ.ಗೋಪಾಲಕೃಷ್ಣ ಮಾತನಾಡಿ, ಭಾರತದಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ಶಾಲಾ ಶಿಕ್ಷಣ ವ್ಯವಸ್ಥೆ ದುರ್ಬಲವಾಗಿದೆ. ನಮ್ಮಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿಫ‌ಲವಾಗಿವೆ. ಈ ವಿಚಾರವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದರು.

ಸಿಎಂಆರ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಸಿಎಂಆರ್‌ ವಿವಿ ಕುಲಾಧಿಪತಿ ಡಾ.ಸಬೀತಾ ರಾಮಮೂರ್ತಿ, ಕುಲಪತಿ ಪ್ರೊ. ಎಂ.ಎಸ್‌. ಶಿವಕುಮಾರ್‌ ಮತ್ತಿತರರು ಇದ್ದರು. 

ಯೋಗಕ್ಕೆ ಧರ್ಮದ ಲೇಪ ಬೇಡ: "ನಮ್ಮ ಪ್ರಾಚೀನ ಮತ್ತು ಪಾರಂಪರಿಕ ಯೋಗಕ್ಕೆ ಇಂದು ಜಾಗತಿಕ ಮನ್ನಣೆ ಸಿಕ್ಕಿದೆ. ಜಗತ್ತೇ ಗೌರವಿಸುತ್ತಿರುವ ನಮ್ಮ ಯೋಗವನ್ನು ನಮ್ಮವರೇ ಕೆಲವರು ಕೇವಲ ರಾಜಕೀಯ ಕಾರಣಕ್ಕಾಗಿ ಹೀಗೆಳೆಯುತ್ತಿದ್ದಾರೆ. ಆದರೆ, ಯೋಗಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಯೋಗಕ್ಕೆ ಧರ್ಮದ ಲೇಪ ಸಲ್ಲ. ಅದೊಂದು ವ್ಯಾಯಾಮ ಕಲೆ. ಯೋಗ, ಸ್ವತ್ಛ ಭಾರತ, "ಬೇಟಿ ಪಡಾವೊ, ಬೇಟಿ ಬಚಾವೊ' ಇವೆಲ್ಲ ಸಾಮಾಜಿಕ ಆಂದೋಲನಗಳು.

ಇವುಗಳನ್ನು ಪಕ್ಷ ಅಥವಾ ವ್ಯಕ್ತಿಯ ಹಿನ್ನೆಲೆಯಲ್ಲಿ ನೋಡುವುದು ಸರಿಯಲ್ಲ. ಪ್ರಪಂಚದ ಎಲ್ಲಾ ಜ್ಞಾನ ಪಡೆದುಕೊಳ್ಳಿ, ಎಷ್ಟು ಬೇಕಾದರೂ ಭಾಷೆಗಳನ್ನು ಕಲಿಯಿರಿ. ಆದರೆ, ಜನ್ಮ ಕೊಟ್ಟ ತಾಯಿ, ಮಾತೃ ಭೂಮಿ, ಮಾತೃ ಭಾಷೆಯನ್ನು ಯಾವತ್ತೂ ಮರೆಯಬೇಡಿ. ಮಾತೃ ಭಾಷೆ ಕಣ್ಣಿನ ದೃಷ್ಟಿಯಂತಿದ್ದರೆ, ಬೇರೆ ಭಾಷೆ ಕನ್ನಡಕ ಇದ್ದಂತೆ' ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.


Trending videos

Back to Top