CONNECT WITH US  

ಒಲವಿನ ಜಾತ್ರೆಗೆ ಸಜ್ಜಾಯ್ತು ಉದ್ಯಾನನಗರಿ

ಸುದ್ದಿ ಸುತ್ತಾಟ

ಬೆಂಗಳೂರಿನ ವೈಶಿಷ್ಟವೇ ಅಂತಹದ್ದು. ಇಲ್ಲಿ ಕರಗ ಉತ್ಸವ, ಅಣ್ಣಮ್ಮನ ಜಾತ್ರೆಯಂತಹ ಐತಿಹಾಸಿಕ ಉತ್ಸವಗಳಷ್ಟೇ ಸಡಗರ-ಸಂಭ್ರಮ ಪ್ರೇಮಿಗಳ ದಿನದಂತಹ ಪಾಶ್ಚಾತ್ಯ ಸಂಸ್ಕೃತಿ ಆಚರಣೆಯಲ್ಲೂ ಕಂಡುಬರುತ್ತದೆ. ಕಾರಣ, ಇದೊಂದು ಕಾಸ್ಮೋಪಾಲಿಟನ್‌ ಸಿಟಿ. ಎಲ್ಲ ವರ್ಗದ ಜನರೂ ಇಲ್ಲಿದ್ದಾರೆ. ಹಾಗಾಗಿ ಸಂಸ್ಕೃತಿಯ ಸಮಾಗಮವೂ ಇಲ್ಲಿದೆ. ಈಗ ವ್ಯಾಲೆಂಟೈನ್ಸ್‌ ಡೇಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಅದನ್ನು ಬರಮಾಡಿಕೊಳ್ಳಲು ನಗರವೂ ಸಜ್ಜಾಗಿದೆ. "ಒಲವಿನ ಉಡುಗೊರೆ' ಕೊಟ್ಟು ಓಲೈಸಿಕೊಳ್ಳಲು ಪ್ರೇಮಿಗಳು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿದ್ದಾರೆ.  

ಸಮೀಪದ ದೊಡ್ಡಬಳ್ಳಾಪುರದ ಒಬ್ಬ ಸಣ್ಣ ರೈತನ ಜಮೀನಿನಲ್ಲಿ ಬೆಳೆದ ಗುಲಾಬಿ ಹೂವುಗಳು ಹೈಟೆಕ್‌ ಸಿಟಿ ಸಿಂಗಪುರದ ಯುವಕನೊಬ್ಬನ ಕೈಯಲ್ಲಿ ಪ್ರೀತಿಯ ನಿವೇದನೆಗೆ ಸಂಕೇತವಾಗಲು ಪ್ರಯಾಣ ಬೆಳೆಸುತ್ತಿವೆ. ಆನೇಕಲ್‌ನಲ್ಲಿ ಅರಳಿದ ಹೂವು ಆಸ್ಟ್ರೇಲಿಯದಲ್ಲಿ ಪ್ರೇಮಿಗಳಿಬ್ಬರ ಸಮ್ಮಿಲನಕ್ಕೆ ಸಾಕ್ಷಿಯಾಗಲು ಹೊರಟಿವೆ! ಹೌದು, ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಉದ್ಯಾನ ನಗರಿಯ ಹೂವುಗಳು ಪ್ರೇಮಿಗಳ ನಿವೇದನೆಗೆ ನೆರವಾಗಲು ಸಜ್ಜಾಗಿವೆ. ಬರೀ ಹೂವುಗಳಲ್ಲ; ಇಡೀ ನಗರ ಈಗ ಪ್ರೇಮದ ಅಲೆಯಲ್ಲಿ ತೇಲುತ್ತಿದೆ.

ನೆಚ್ಚಿನ ತಾಣಕ್ಕೆ ಕರೆದೊಯ್ಯುವುದು, ಉದ್ಯಾನ ಅಥವಾ ರೆಸ್ಟೋರೆಂಟ್‌ಗೆ ತೆರಳಿ ಏಕಾಂತದಲ್ಲಿ ಮನಸ್ಸಿನ ಮಾತುಗಳನ್ನು ಹೊರಹಾಕುವುದು, "ಒಲವಿನ ಉಡುಗೊರೆ' ಮೂಲಕ ಓಲೈಸಿಕೊಳ್ಳುವುದು ಸೇರಿದಂತೆ ಹೀಗೆ ಒಂದಿಲ್ಲೊಂದು ಲೆಕ್ಕಾಚಾರಗಳು ನಡೆದಿವೆ. ಇದಕ್ಕೆ ಪೂರಕವಾಗಿ ನಗರದ ಹಾಟ್‌ಸ್ಪಾಟ್‌ಗಳು, ಫೆಬ್ರವರಿಗೆ ಸರಿಯಾಗಿ ಕಟಾವಿಗೆ ಬರುವಂತೆ ಹೂವುಗಳ ವ್ಯವಸ್ಥೆ, ವಿದೇಶಿ ಸಂಸ್ಕೃತಿ ಎಂಬ ಕಾರಣಕ್ಕೆ ಇದನ್ನು ವಿರೋಧಿಸುವ ಬಣದ ಸಿದ್ಧತೆ, ಅದಕ್ಕೆ ಪ್ರತಿಯಾಗಿ ಭದ್ರತೆ ಸೇರಿದಂತೆ ಪ್ರೇಮಿಗಳ ದಿನವನ್ನು ಬರಮಾಡಿಕೊಳ್ಳಲು ನಗರವೂ ಸಜ್ಜಾಗಿದೆ. ಇದರ ಒಂದು ನೋಟ ಈ ಬಾರಿಯ "ಸುದ್ದಿ ಸುತ್ತಾಟ'ದಲ್ಲಿ...  

ಪ್ರೇಮಿಗಳ ದಿನಕ್ಕೆ ರಂಗು ರಂಗಿನ ಗುಲಾಬಿಗಳು: ಸಾವಿರಾರು ರೂ. ಬೆಲೆಯ ಉಡುಗೊರೆ ಮಾಡದ ಕೆಲಸವನ್ನು ಒಂದು ಗುಲಾಬಿ ಹೂ ಸಲೀಸಾಗಿ ಮಾಡಿ ಮುಗಿಸುತ್ತದೆ. ಹೀಗಾಗಿಯೇ ಗುಲಾಬಿಗೆ ಪ್ರೇಮಿಗಳ ದಿನದಂದು ಹೆಚ್ಚಿನ ಬೇಡಿಕೆ. ಪ್ರೇಮಿಗಳ ದಿನಕ್ಕೆ ಈ ಬಾರಿಯೂ ಬೆಂಗಳೂರು ಗ್ರಾಮಾಂತರ ಭಾಗಗಳಾದ ದೊಡ್ಡಬಳ್ಳಾಪುರ, ಆನೇಕಲ್‌ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಭಾಗಗಳಿಂದ ಹತ್ತಾರು ತಳಿಯ ಗುಲಾಬಿಗಳು ನಗರಕ್ಕೆ ಲಗ್ಗೆ ಇಟ್ಟಿದ್ದು, ಇದರಿಂದ ಪ್ರಮುಖ ಮಾರುಕಟ್ಟೆಗಳು ಕಲರ್‌ಫ‌ುಲ್‌ ಆಗಿ ಕಂಗೊಳಿಸುತ್ತಿವೆ.

ಸಾಮಾನ್ಯವಾಗಿ ತೆರೆದ ತೋಟಗಳಲ್ಲಿ ಬೆಳೆಯುವ ಸ್ಥಳೀಯ ಗುಲಾಬಿಗಿಂತ ಪಾಲಿಹೌಸ್‌ನಲ್ಲಿ ನಿರ್ದಿಷ್ಟ ತಾಪಮಾನದಲ್ಲಿ ಅರಳುವ ಡಚ್‌ಮಾದರಿಯ ಗುಲಾಬಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆ ಪೈಕಿ ತಾಜ್‌ಮಹಲ್‌ (ಕೆಂಗುಲಾಬಿ), ಸಮುರಾಯ್‌, ಗ್ರಾಂಡ್‌ ಗಾಲಾ, ಗೋಲ್ಡ್‌ ಸ್ಪ್ರೆಕ್‌ ಯೆಲ್ಲೊ, ಬಿಳಿ ಹೌಲಚ್‌, ಪೀಚ್‌ ಹೌಲಚ್‌, ನೋಬ್ಲೆಸ್‌ ಪಿಂಕ್‌, ಹಾಟ್‌ ಶಾಟ್‌, ಬೋನಿಯರ್‌, ಸೌರನ್‌, ಜ್ಯುಮಿಲಿಯಾ, ರಾಕ್‌ ಸ್ಟರ್‌ ಅನ್ನು ಸುತ್ತಮುತ್ತಲ ಭಾಗಗಳಲ್ಲಿ ಬೆಳೆಯುತ್ತಾರೆ.

ಅವುಗಳಲ್ಲಿ ಪ್ರೇಮಿಗಳ ದಿನ ಸಮೀಪಿಸಿರುವುದರಿಂದ "ತಾಜ್‌ಮಹಲ್‌'ಗೆ ತುಸು ಬೇಡಿಕೆ ಹೆಚ್ಚು ಎನ್ನುತ್ತಾರೆ ಹೆಬ್ಟಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ (ಐಫ್ಯಾಬ್‌) ಅಧಿಕಾರಿಗಳು.  ಇದು ನಗರದಲ್ಲಿ ಪುಷ್ಪ ಉದ್ಯಮ ಬೆಳವಣಿಗೆಗೆ ಅನುಕೂಲವಾಗಿದ್ದು, ರೈತರಿಗೂ ಹೆಚ್ಚಿನ ಆದಾಯ ತಂದುಕೊಡುತ್ತಿದೆ. ಸ್ಥಳೀಯ ಗುಲಾಬಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಈ ಗುಲಾಬಿ ಇದೆ.  ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗುಲಾಬಿ ದರ ಹೆಚ್ಚಾಗಿದೆ. ಒಂದಕ್ಕೆ ಸಗಟು ದರದಲ್ಲಿ ಗುಣಮಟ್ಟದ ಆಧಾರದ ಮೇಲೆ 15 ರೂ.ನಿಂದ 20 ರೂ.ವರೆಗೆ ಇದೆ.  

ವಿದೇಶದಲ್ಲಿ ನಗರದ ಗುಲಾಬಿ ಕಂಪು: ಬೆಂಗಳೂರು ಗ್ರಾಮಾಂತರ ಭಾಗಗಳಾದ ಆನೇಕಲ್‌ ಹಾಗೂ ದೊಡ್ಡಬಳ್ಳಾಪುರದಲ್ಲಿ ಬೆಳೆಯುವ ವಿಶೇಷ ತಳಿ ಗುಲಾಬಿಗೆ ಬೇಡಿಕೆಯಿದ್ದು, ದೆಹಲಿ, ಕೊಲ್ಕತ್ತ, ಚೆನ್ನೈ, ಹೈದರಾಬಾದ್‌ ಸೇರಿದಂತೆ ದೇಶದ ಗಡಿದಾಟಿ ಆಸ್ಟ್ರೇಲಿಯ, ನ್ಯೂಜಿಲೆಂಡ್‌, ಜಪಾನ್‌, ಸಿಂಗಪುರ, ಮಲೇಶಿಯ ಸೇರಿದಂತೆ ಗಲ್ಫ್  ರಾಷ್ಟ್ರಗಳಿಗೆ ರಫ್ತಾಗುತ್ತವೆ. ಈ ಬಾರಿ ವಿದೇಶಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಲಕ್ಷ ಗುಲಾಬಿಗಳನ್ನು ರಫ್ತು ಮಾಡಲಾಗಿದೆ. ಇದಲ್ಲದೆ ದೇಶಿಯ ಮಾರುಕಟ್ಟೆಯಲ್ಲೂ ಸುಮರು 25-30 ಲಕ್ಷ ಗುಲಾಬಿ ಹೂವುಗಳು ಮಾರಾಟವಾಗುವ ನಿರೀಕ್ಷೆ ಇದೆ ಎಂದು ಐಫ್ಯಾಬ್‌ ಅಭಿವೃದ್ಧಿ ವ್ಯವಸ್ಥಾಪಕ ಎ.ಎಸ್‌. ಮಿಥುನ್‌ ಮಾಹಿತಿ ನೀಡುತ್ತಾರೆ.

ಬೆಂಗಳೂರಿನಲ್ಲಿ ಐದು ಲಕ್ಷ ಗುಲಾಬಿ ಹೂವುಗಳು ಬಿಕರಿಯಾಗಬಹುದು ನಿರೀಕ್ಷಿಸಲಾಗಿದೆ. ಇನ್ನು ರಫ್ತಾದ ಗುಲಾಬಿಗಳಲ್ಲಿ ತಾಜ್‌ಮಹಲ್‌ ತಳಿಯೇ ಶೇ.95ರಷ್ಟಿದೆ. ಗುಲಾಬಿಯನ್ನು ಕೊಯ್ಲು ಮಾಡಿದ ತಕ್ಷಣ ಸಂರಕ್ಷಣಾ ರಾಸಾಯನಿಕ ದ್ರಾವಣ ಮಿಶ್ರಣದ ನೀರಿನಲ್ಲಿ ಒಂದಿಷ್ಟು ಗಂಟೆ ಹೂವನ್ನು ಇಟ್ಟು, ಅನಂತರ ಎಲೆ ಮತ್ತು ಮುಳ್ಳು ತೆಗೆದು 20 ಗುಲಾಬಿಗೆ ಒಂದು ಬಂಚ್‌ ಮಾಡಿ, ಸುತ್ತಲು ದಪ್ಪನೆಯ ರಟ್ಟು ಸುತ್ತಿ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಈ ಮೂಲಕ ಗುಲಾಬಿ ಕನಿಷ್ಠ 10 ದಿನ ತಾಜಾ ಇರುತ್ತದೆ.  

ಈ ಬಾರಿ ಎಷ್ಟಿದೆ ದರ: ಚಳಿಯ ವಾತಾವರಣ ಹೆಚ್ಚಿರುವುದರಿಂದ ಬೆಳೆಯ ಪ್ರಮಾಣ ಕುಸಿದಿದೆ. ಹೀಗಾಗಿ, ಶೇ. 30ರಷ್ಟು ದರ ಹೆಚ್ಚಳವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ 35ರಿಂದ 40 ರೂ. ಇದ್ದರೆ, ಬೆಂಗಳೂರಿನಲ್ಲಿ 30 ರೂ.ಗೆ ಒಂದು ಗುಲಾಬಿ ದೊರೆಯುತ್ತಿದೆ.  

ಕಳೆದ ವರ್ಷ ರಫ್ತು ಎಷ್ಟಾಗಿತ್ತು?: ಕಳೆದ ಬಾರಿ 52 ಲಕ್ಷ ಸ್ಟೆಮ್‌ಗಳ ರೂಪದಲ್ಲಿ 25 ದೇಶಗಳಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಫ್ತು ಆಗಿದ್ದವು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೇ ಪ್ರೇಮದ ನಿವೇದನೆಗೆ ಬಹುತೇಕರು ಈಗಲೂ "ಪ್ರೇಮದ ಸಂಕೇತ' ಗುಲಾಬಿ ಹೂವುಗಳನ್ನು ಅವಲಂಬಿಸಿದ್ದಾರೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ರಫ್ತಾದ ವಸ್ತುಗಳಲ್ಲಿ ರೋಸ್‌ ಸ್ಟೆಮ್‌ ಕೂಡ ಸೇರಿದೆ ಎಂದು ಬಿಐಎಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.  

ಸಿದ್ಧತೆ ಜೋರು: ನಗರದ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಪ್ರೇಮಿಗಳ ಹಬ್ಬಕ್ಕೆ ಸಜ್ಜಾಗುತ್ತಿವೆ. ಕೋರಮಂಗಲ, ಇಂದಿರಾನಗರ ವೈಟ್‌ಫಿಲ್ಡ್‌, ಎಚ್‌.ಎಸ್‌.ಆರ್‌ ಬಡಾವಣೆ, ದೊಮ್ಮಲೂರು, ಅಶೋಕ ನಗರ, ಹಳೇ ವಿಮಾನ ನಿಲ್ದಾಣ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಮಲ್ಲೇಶ್ವರ ಸುತ್ತಮುತ್ತಲು ಇರುವಂತಹ ಐಶಾರಾಮಿ ಹೋಟೆಲ್‌ಗ‌ಳಲ್ಲಿ ಹಾಗೂ ಪಬ್‌, ಡಿಸ್ಕೋಥೆಕ್‌ಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇವುಗಳಲ್ಲಿ ಡಿಜೆ ನೈಟ್ಸ್‌, ಕ್ಯಾಂಡಲ್‌ಲೈಟ್‌ ಡಿನ್ನರ್‌, ಮೂಸಿಕ್‌ ಲೈಟ್‌ ಡಿನ್ನರ್‌, ಹೆಲ್ತಿ ಡಿನ್ನರ್‌ ಎಂಬ ವಿಶೇಷಗಳು ನಡೆಯುತ್ತಿವೆ. ಭಾಗವಹಿಸಲು 1,000ದಿಂದ 10,000ವರೆಗೂ ಶುಲ್ಕ ನಿಗದಿ ಪಡೆಸಿ ಮುಂಗಡ ಬುಕ್ಕಿಂಗ್‌ ಆರಂಭಿಸಿವೆ.

ಉಡುಗೊಡೆ ಖರೀದಿ ಭರಾಟೆ: ನಗರದ ಹೂವಿನ ಮಾರುಕಟ್ಟೆಗಳು ಈಗಾಗಲೇ ರಂಗೇರಿದ್ದು, ವಾರಾಂತ್ಯದಲ್ಲಿ ಮಾಲ್‌ಗ‌ಳು ಹಾಗೂ ಶಾಪಿಂಗ್‌ ಮಳಿಗೆಗಳು, ಕಮರ್ಷಿಯಲ್‌ ಸ್ಟ್ರೀಟ್‌ಗಳಲ್ಲಿ ಹುಡುಗ- ಹುಡುಗಿಯರು ಗಿಫ್ಟ್ಗಳ ಖರೀದಿಗೆ ಮುಗಿಬಿದ್ದಿದ್ದು ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳು, ಫೋಟೋ ಫ್ರೆàಮ್‌ಗಳು, ಹೃದಯಾದಾಕಾರದಲ್ಲಿ ವಿನ್ಯಾಸಗೊಳಿಸಲಾದ ಚಿನ್ನದ ಆಭರಣಗಳು, ಬೆಳ್ಳಿಯ ಚೈನ್‌, ಪಿಲ್ಲೋಗಳು, ಬೊಂಬೆಗಳು, ಕೀ ಬಂಚ್‌, ತಾಜಮಹಲ್ ಆಕೃತಿಗಳು, ಹೆಸರಿನ ಮೊದಲ ಅಕ್ಷರ ಇರುವ ಬ್ರೇಸ್‌ ಲೈಟ್‌ ಸೇರಿದಂತೆ ವಿವಿಧ ಉಡುಗೊರೆಗಳು ಮಾರಾಟವಾಗುತ್ತಿದ್ದು, ವಿದೇಶಿ ಚಾಕೋಲೇಟ್‌ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಬ್ರಿಗೇಡ್‌ ರಸ್ತೆಯ ಮಳಿಗೆಯೊಂದರ ವ್ಯಾಪಾರಿ.

ವೇದಿಕೆ ಆಗಲಿರುವ ಉದ್ಯಾನಗಳು: ಈ ಮಧ್ಯೆ ನಗರದಲ್ಲಿ ಯುವಕ-ಯುವತಿಯರ ಪ್ರೇಮ ನಿವೇದನೆಗೆ ಪ್ರಮುಖ ಉದ್ಯಾನಗಳು, ನಂದಿಬೆಟ್ಟ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ನಗರದ ವಿವಿಧ ಕೆರೆಗಳು, ಕಾಫಿ ಮಳಿಗೆಗಳು, ಕೆಲ ಕಾಲೇಜುಗಳು, ಚಿತ್ರಮಂದಿರಗಳು ಸಾಕ್ಷಿಯಾಗಲಿವೆ.

ಕಣ್ಗಾವಲಿನಲ್ಲಿ ಪ್ರೀತಿ!: ಪ್ರೇಮಿಗಳ ಪಾರ್ಕ್‌ ಪ್ರವೇಶಕ್ಕೆ ನಿರ್ಬಂಧವಿಲ್ಲ. ಆದರೆ, ಪೊಲೀಸರ ಕಣ್ಗಾವಲಿನಲ್ಲಿ ಪ್ರೀತಿಯನ್ನು ಹಂಚಿಕೊಳ್ಳಬೇಕಿದೆ. ನಗರದ ಪ್ರಸಿದ್ಧ ಉದ್ಯಾನಗಳಾದ ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿಲ್ಲ. ಉದ್ಯಾನಕ್ಕೆ ಬರುವ ಪ್ರೇಮಿಗಳಿಗೆ ಯಾವುದೇ ತೊಂದರೆಯಾಗದಂತೆ ಉದ್ಯಾನ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ. ಯಾವುದೇ ಸಂಘಟನೆಗಳು ದಾಳಿ ಮಾಡುವುದು, ನೈತಿಕ ಪೋಲಿಸ್‌ಗಿರಿಗೆ ಅವಕಾಶವಿಲ್ಲ ಎಂದು ಉದ್ಯಾನ ಅಧಿಕಾರಿಗಳು ತಿಳಿಸಿದ್ದಾರೆ. ಲಾಲ್‌ಬಾಗ್‌ ಉದ್ಯಾನಗಳಲ್ಲಿ 100 ಸಿಸಿಟಿವಿ ಕ್ಯಾಮೆರಾ, 10 ಮಹಿಳಾ ಹಾಗೂ 23 ಪುರುಷ ಭದ್ರತಾ ಸಿಬ್ಬಂದಿ ಇದ್ದಾರೆ.

ಇದರಿಂದ ಸಂಪೂರ್ಣ ಉದ್ಯಾನದ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತದೆ ಎಂದು ಲಾಲ್‌ಬಾಗ್‌ ಉದ್ಯಾನದ ಉಪನಿರ್ದೇಶಕ ಎಂ.ಆರ್‌. ಚಂದ್ರಶೇಖರ್‌ ಹೇಳಿದರು. ಅದೇ ರೀತಿ, ಕಬ್ಬನ್‌ ಉದ್ಯಾನದಲ್ಲಿ 10 ಸಿಸಿಟಿವಿ ಕ್ಯಾಮೆರಾ ಹಾಗೂ 24 ಭದ್ರತಾ ಸಿಬ್ಬಂದಿಯಿದ್ದು, ಹೆಚ್ಚಿನ ಭದ್ರತೆಗಾಗಿ ಸ್ಥಳೀಯ ಪೊಲೀಸ್‌ ಠಾಣೆಗೆ ಮನವಿ ಮಾಡಲಾಗಿದೆ. ನೈತಿಕ ಪೊಲೀಸ್‌ಗಿರಿ ಸೇರಿದಂತೆ ಯಾವುದೇ ರೀತಿಯ ಅಸಹಜ ಘಟನೆಗಳು ನಡೆಯದಂತೆ ತಡೆಯಬೇಕೆಂದು ಪೊಲೀಸರಿಗೆ ಕೋರಿದ್ದೇವೆ ಎಂದು ಕಬ್ಬನ್‌ ಉದ್ಯಾನ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರುಗೋಡ ತಿಳಿಸಿದ್ದಾರೆ.  

ಐ ಲವ್‌ ಪಿಎಂ ಕ್ಯಾಂಪೇನ್‌!: ಟೀಂ ಮೋದಿ ವತಿಯಿಂದ ಪ್ರೇಮಿಗಳ ದಿನದ ಅಂಗವಾಗಿ "ಐ ಲವ್‌ ಪಿಎಂ" ಎಂಬ ಕ್ಯಾಂಪೇನ್‌ ಹಮ್ಮಿಕೊಳ್ಳಲಾಗಿದೆ. ಪ್ರೇಮಿಗಳ ದಿನದಂದು ಕೇವಲ ಹುಡುಗ ಹುಡುಗಿ ಪ್ರೀತಿ ವಿನಿಮಯ ಮಾಡಿಕೊಳ್ಳುವುದಲ್ಲ. ಬದಲಾಗಿ ನಮ್ಮ ಹೆಮ್ಮೆಯ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿಯವರನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ತಿಳಿಸುವ ಉದ್ದೇಶಕ್ಕಾಗಿ ಈ ಕ್ಯಾಂಪೇನ್‌ ಆಯೋಜಿಸಿದ್ದು, ನಾವು ಏಕೆ ನಮ್ಮ ಪ್ರಧಾನಿ ಮೋದಿಯವರನ್ನು ಇಷ್ಟ ಪಡುತ್ತೇವೆ? ಎಂಬ ಕುರಿತು ಒಂದು ನಿಮಿಷದ ವಿಡಿಯೋ ಸಿದ್ಧಪಡಿಸಿ ಟೀಂ ಮೋದಿ ತಂಡಕ್ಕೆ ಕಳಿಸಿಕೊಡಬೇಕು. ಸಲ್ಲಿಕೆಯಾದ ವಿಡಿಯೋಗಳಲ್ಲಿ ಅತ್ಯುತ್ತಮ ವಿಡಿಯೋವನ್ನು ಗುರುತಿಸಿ 10,000 ರೂ. ಬಹುಮಾನ ನೀಡುವುದಾಗಿ ವಕ್ತಾರರು ತಿಳಿಸಿದ್ದಾರೆ. ಇದರಲ್ಲಿ ಭಾಗವಹಿಸುವವರು ವ್ಯಾಟ್ಸ್‌ಆ್ಯಪ್‌ ನಂ 91136 59033 ಸಂಪರ್ಕಿಸಬಹುದು.

ಪ್ರೇಮಿಗಳಿಗೆ ವಾಟಾಳ್‌ ನಾಗರಾಜ್‌ ಬೆಂಬಲ: ಪ್ರತಿ ವರ್ಷದಂತೆ ಈ ವರ್ಷವೂ ಪ್ರೇಮಿಗಳಿಗೆ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಪ್ರೇಮಿಗಳ ಸಾವಿನ ಸಂಖ್ಯೆ ಹೆಚ್ಚಾಗಿರುವ ಈ ಪರಿಸ್ಥಿತಿಯಲ್ಲಿ ಅವರ ಬೆಂಬಲಕ್ಕೆ ನಿಲ್ಲಬೇಕಾದ ಕೆಲಸವನ್ನು ನಮ್ಮ ಸಂಘಟನೆಗಳು ಮಾಡಬೇಕು. ಆ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನದಂದು ಬೆಳಗ್ಗೆ 10.30ಕ್ಕೆ ಕಬ್ಬನ್‌ ಉದ್ಯಾನ ಬಳಿ ಗುಲಾಬಿ ಹೂವನ್ನು ರಥದಲ್ಲಿ ಇಟ್ಟು ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ನಂತರ ಸಾವಿರಾರು ಗುಲಾಬಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.  

ಆತಂಕದ ವಾತಾವರಣ: ಶ್ರೀರಾಮ ಸೇನೆಯು ನಗರದ ಉದ್ಯಾನಗಳಿಗೆ ತೆರಳಿ ಪ್ರೇಮಿಗಳಿಗೆ ಅಡಚಣೆ ಮಾಡಿ ಪ್ರೇಮಿಗಳ ದಿನವನ್ನು ವಿರೋಧಿಸಲು ಮುಂದಾಗುತ್ತಿದೆ. ಪ್ರೀತಿಗೆ ನಮ್ಮ ವಿರೋಧ ಇಲ್ಲ. ಯಾರೋ ಗೊತ್ತಿಲ್ಲದವರನ್ನು ಪ್ರೀತಿಸಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇದರ ಬದಲಿಗೆ ತಂದೆ-ತಾಯಿಯನ್ನು ಪ್ರೀತಿಸಿ. ಗಂಡ-ಹೆಂಡತಿ ಆ ದಿನ ದೇವಸ್ಥಾನಕ್ಕೆ ಹೋಗಿ ಬರಲಿ. ಉದ್ಯಾನಗಳಲ್ಲಿ ಮರಗಿಡಗಳ ನಡುವಿನ ಪ್ರೀತಿಗೆ ನಮ್ಮ ವಿರೋಧವಿದೆ. ಹೀಗಾಗಿ, ಅಂದು ಉದ್ಯಾನಗಳಿಗೆ ತೆರಳಿ ಪ್ರೇಮಿಗಳಿಗೆ ಮದುವೆ ಮಾಡಿಸಿ ಮನೆಗೆ ಬಿಡುವುದಾಗಿ ಶ್ರೀರಾಮ ಸೇನೆ ಬೆಂಗಳೂರು ನಗರ ಅಧ್ಯಕ್ಷ ವಿನಯ್‌ ಗೌಡ ಎಚ್ಚರಿಸಿದ್ದಾರೆ.  

ಪ್ರೇಮಿಗಳ ದಿನದಂದು ನಗರದ ಪ್ರಮುಖ ಉದ್ಯಾನ, ಮಾಲ್‌, ಚಿತ್ರಮಂದಿರಗಳು ಸೇರಿದಂತೆ ಹೆಚ್ಚು ಮಂದಿ ಸೇರುವ ಪ್ರದೇಶಗಳಲ್ಲಿ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. ಯಾವುದೇ ಸಂಘಟನೆಗಳು ಪ್ರತಿಭಟನೆ ಮಾಡುವುದು, ವಿರೋಧಿಸುವುದು, ನೈತಿಕ ಪೊಲೀಸ್‌ಗಿರಿ ಮೂಲಕ ಪ್ರೇಮಿಗಳಿಗೆ ತೊಂದರೆ ಕೊಡಲು ಮುಂದಾದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ. ಪ್ರೇಮಿಗಳು ಸಾರ್ವಜನಿಕ ಸ್ಥಳದಲ್ಲಿ ಸಭ್ಯತೆಯ ಎಲ್ಲೆ ಮೀರಬಾರದು.
-ಸೀಮಂತ್‌ ಕುಮಾರ್‌ ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ 

ಈ ಬಾರಿ ಪ್ರೇಮಿಗಳ ದಿನಕ್ಕೆ 45 ಲಕ್ಷ ಗುಲಾಬಿಗಳನ್ನು ಮಧ್ಯ ಪೂರ್ವ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದ್ದು, ಇನ್ನು ಬೇಡಿಕೆ ಬರುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 30 ಲಕ್ಷ ಗುಲಾಬಿಗೆ ಬೇಡಿಕೆ ಇದೆ. ಈ ಬಾರಿ ದರವು ಕಳೆದ ಬಾರಿಗಿಂತ ಶೇ.30ರಷ್ಟು ಹೆಚ್ಚಳವಾಗಿದೆ.
-ಎ.ಎಸ್‌. ಮಿಥುನ್‌, ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ಅಭಿವೃದ್ಧಿ ವ್ಯವಸ್ಥಾಪಕ  

ಡಚ್‌ ಗುಲಾಬಿಗೆ ಬೇಡಿಕೆ ಇದೆ ಎಂಬ ಮಾಹಿತಿ ಮೇರೆಗೆ ನಮ್ಮ ಪಾರ್ಮ್ನಲ್ಲಿ ಕಳೆದ ಐದಾರು ವರ್ಷಗಳಿಂದ ಬೆಳೆಯುತ್ತಿದ್ದೇವೆ. ನಮ್ಮ ಹಳ್ಳಿಯಲ್ಲಿ ಬೆಳೆದ ಹೂ ವಿದೇಶಕ್ಕೆ ಹೋಗುತ್ತದೆ ಎಂಬ ವಿಚಾರ ನಿಜಕ್ಕೂ ಖುಷಿ ನೀಡುತ್ತದೆ. ಬೆಲೆಯು ಹೆಚ್ಚಿರುವುದರಿಂದ ಲಾಭ ಹೆಚ್ಚಿದೆ.
-ಮಂಜಪ್ಪ, ರೈತ

* ಜಯಪ್ರಕಾಶ್‌ ಬಿರಾದಾರ್‌


Trending videos

Back to Top