CONNECT WITH US  

ರೈತರ ಸಾಲ ಮನ್ನಾ, ಸಮರ್ಪಕ ಬರ ನಿರ್ವಹಣೆಗಾಗಿ ಪ್ರತಿಭಟನೆ

ದೊಡ್ಡಬಳ್ಳಾಪುರ: ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಲ ಮನ್ನಾ, ಸಮರ್ಪಕ ಮೇವು ವಿತರಣೆ ಮಾಡುವುದರೊಂದಿಗೆ ತಾಲೂಕಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿತು.

ರೈತಸಂಘದ ತಾಲೂಕು ಅಧ್ಯಕ್ಷ ನಾಗಸಂದ್ರ ಪ್ರಸನ್ನ ಮಾತನಾಡಿ, ತಾಲೂಕಿನಲ್ಲಿ ಬರಗಾಲ ಆವರಿಸಿದ್ದು, ಜನಜಾನುವಾರುಗಳಿಗೆ ನೀರು ಮೇವು ಇಲ್ಲದಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಮೇವು ಬ್ಯಾಂಕ್‌ಗಳು ಮೇವು ಪೂರೈಕೆ ಅಸರ್ಪಕವಾಗಿದ್ದು, ಗುಣಮಟ್ಟದ ಮೇವು ಪೂರೈಕೆಯೂ ಆಗುತ್ತಿಲ್ಲ ಎಂದು ಆರೋಪಿಸಿದರು.

ಹೆಸರಿಗೆ ಮಾತ್ರ ಬರಗಾಲದ ಪರಿಹಾರ ಯೋಜನೆಗಳು ಜಾರಿಗಿವೆ. ನಿಜಕ್ಕೂ ರೈತರ ಮೇಲೆ ಕಾಳಜಿ ಇದ್ದಲ್ಲಿ ನೀವು ಜಾರಿ ಮಾಡಿರುವ ಯೋಜನೆಗಳನ್ನೇ ಸಮರ್ಪಕ ವಾಗಿ ಜಾರಿಗೊಳಿಸಿ. ಸರ್ಕಾರದ ಭಾಗ್ಯಗಳು ಜನಗಳಿಗೆ ಭಾಗ್ಯ ತಂದುಕೊಡುವ ಬದಲಾಗಿ ಸಂಕಷ್ಟಕ್ಕೀಡು ಮಾಡಿವೆ. ಸರ್ಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪದೆ ಜನರ ತೆರಿಗೆ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ರೈತರ ಸಂಘದ‌ ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್‌ ಮಾತನಾಡಿ, ರೈತರಿಗೆ ಪೂರೈಕೆ ಮಾಡುತ್ತಿರುವ ಮೇವು ಗುಣಮಟ್ಟವನ್ನು ಕಳೆದು ಕೊಂಡಿದ್ದು, ಇಂತಹ ಮೇವನ್ನು ದನಗಳು ಮೂಸಿಯೂ ನೋಡುತ್ತಿಲ್ಲ. ಹೀಗಾಗಿ ಇವರು ನೀಡುವ ಮೇವು ತಿಪ್ಪಿಗೆ ಹಾಕು ಪರಿಸ್ಥಿತಿ ಬಂದಿದೆ. ಹೀಗಾಗಿ ಸರ್ಕಾರ ಗುಣಮಟ್ಟದ ಮೇವನ್ನು ಪೂರೈಕೆ ಮಾಡಬೇಕು. ಇದರೊಂದಿಗೆ ಹೋಬಳಿ ಕೇಂದ್ರಗಳಲ್ಲಿ ಪೂರೈಕೆಯಾಗುತ್ತಿರುವ ಮೇವು ವಿತರಣೆ ಪ್ರತಿ ಪಂಚಾಯ್ತಿ ಕೇಂದ್ರಗಳು ಹಾಗೂ ಅಗತ್ಯವಿರುವ ಹಳ್ಳಿಗಳಿಗೂ ನೇರವಾಗಿ ಮೇವು ಪೂರೈಕೆಯಾಗಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಮೋಹನ್‌, ಈಗಾಗಲೇ ಒಂದು ಹಂತದ ಮೇವು ವಿತರಣೆ ಕಾರ್ಯ ಮುಗಿದಿದ್ದು, ಎರಡನೇ ಹಂತದ ಮೇವು ವಿತರಣೆ ನಾಳೆಯಿಂದ ನಡೆಯಲಿದೆ. ಸ್ಥಳೀಯ ಪಶು ವೈದ್ಯರ ನೆರವಿನೊಂದಿಗೆ ಅರ್ಹ ಫ‌ಲಾನುಭವಿಗಳಿಗೆ ಮೇವು ವಿತರಣೆ ನಡೆಯಲಿದೆ.  ತಮ್ಮ ಹಕ್ಕೋತ್ತಾಯಗಳ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.

ಹಕ್ಕೋತ್ತಾಯ: ಬರಗಾಲದ ಹಿನ್ನೆಲೆ ರೈತರ  ಸಾಲ ಮನ್ನಾ, ಮೇವು ವಿತರಣೆ, ಸರ್ಕಾರ ನೀಡುವ ಸಹಾಯ ಧನ ನೇರ ರೈತರಿಗೆ,   ಸ್ಥಳೀಯವಾಗಿ ನೀರು ಮರು ಪೂರಣಕ್ಕೆ ಕ್ರಮ, ಬರ ಪರಿಹಾರದ ಸಮರ್ಪಕ ವಿತರಣೆಗೆ ಕ್ರಮ, ಶಾಶ್ವತ ನೀರಾ ವರಿ ಯೋಜನೆ ಜಾರಿ ಮಾಡುವಂತೆ ಹಕ್ಕೋ ತ್ತಾಯ ಮಂಡಿಸಲಾಯಿತು. ಮುಖಂಡರಾದ ಸುಲೋಚನಮ್ಮ,  ಜಿಂಕೆಬಚ್ಚಹಳ್ಳಿ ಸತೀಶ್‌, ವಸಂತ್‌ಕುಮಾರ್‌, ಕೆ.ಪಿ.ಕುಮಾರ್‌ ಇದ್ದರು. 


Trending videos

Back to Top