CONNECT WITH US  

ಮೀಸಲು ಕ್ಷೇತ್ರದ ಮುಕುಟ ಯಾರಿಗೆ?

ನೆಲಮಂಗಲ: ತಾಲೂಕು ಮೀಸಲು ಕ್ಷೇತ್ರವಾದರಿಂದ ಅಭ್ಯರ್ಥಿಗಳಲ್ಲಿ ಪೈಪೋಟಿ ತೀವ್ರವಾಗಿದೆ. ಕ್ಷೇತ್ರದಲ್ಲಿ ಚುನಾವಣೆ ಪೂರ್ವದಲ್ಲಿಯೇ ರಾಜಕೀಯದ ಚದುರಂಗದಾಟ ಶುರುವಾಗಿದೆ.

ನಾಮಪತ್ರ ಸಲ್ಲಿಸಲು ದಿನಗಳು ಉರುಳುತ್ತಿದ್ದರೂ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಣದಲ್ಲಿ ಇಳಿಸಿಲ್ಲ. ಪ್ರಮುಖ ಮೂರು ಪಕ್ಷಗಳಲ್ಲೂ ರಾಜಕಾರಣ ಚುರುಕುಗೊಂಡಿದೆ. ಸೂರ್ಯ, ಚಂದ್ರನನ್ನು ಸಾಕ್ಷಿಗೆ ಎಳೆದುತಂದು ಭೂಮಂಡಲ (ನೆಲಮಂಗಲ)ದಲ್ಲಿ ರಾಜಕಾರಣ ಮಾಡುವ ತಂತ್ರಗಾರಿಕೆಯಲ್ಲಿ ರಾಜಕೀಯ ನಿಸ್ಸೀಮರು ತಾಲೀಮು ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ಪೂರ್ವ ಚಟುವಟಿಕೆ ಮತ್ತು ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಮೀಸಲು ಕ್ಷೇತ್ರವಾದರೂ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿತರ ಪಟ್ಟಿ ದಿನದಿಂದ ದಿನಕ್ಕೆ ಏರುತ್ತಿದೆ.

ಜೆಡಿಎಸ್‌: ಪಕ್ಷದಲ್ಲಿ ಹಾಲಿ ಶಾಸಕರಾಗಿರುವ ಡಾ.ಕೆ.ಶ್ರೀನಿವಾಸ್‌ಮೂರ್ತಿ ಈ ಬಾರಿಯೂ ಅವರೆ ಅಭ್ಯರ್ಥಿ ಎಂದು ಘೋಷಣೆಯಾಗಿದ್ದು, ಈಗಾಗಲೇ ಕ್ಷೇತ್ರದಲ್ಲಿ "ಮನೆ ಮನೆಗೆ ಕುಮಾರಣ್ಣ' ವೆಂಬ ಕಾರ್ಯಕ್ರಮ ಹಮ್ಮಿಕೊಂಡು ತಾಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ 60,492 ಮತಗಳು ಪಡೆದು ಆಯ್ಕೆಯಾಗಿದ್ದು ಈ ಬಾರಿಯು ಶಾಸಕರಾಗಬೇಕೆಂದು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ: ಮಾಜಿ ಶಾಸಕ ಎಂ.ವಿ.ನಾಗರಾಜು ಕಳೆದ ಚುನಾವಣೆಯಲ್ಲಿ 19,368 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಈ ಬಾರಿಯೂ ತಂಡ ಕಟ್ಟಿಕೊಂಡು ಕ್ಷೇತ್ರ ಸುತ್ತುವುದರೊಂದಿಗೆ ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಬಿಡದೆ ಹಾಜರಾಗಿ ಜನರ ಓಲೈಕೆಗೆ ಮುಂದಾಗಿದ್ದಾರೆ. ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ. ಹೊಂಬಯ್ಯ ಕ್ಷೇತ್ರದಲ್ಲಿ ರಾಜಸ್ವನಿರೀಕ್ಷಕರಾಗಿ, ಉಪತಹಶೀಲ್ದಾರ್‌ ಆಗಿ ಕಳೆದ 25 ವರ್ಷಗಳ ಕಾಲ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸಾಕಷ್ಟು ಜನೋಪಕಾರಿ ಕೆಲಸ ಮಾಡಿರುವ ಹೆಗ್ಗಳಿಕೆ ಯಿಂದಾಗಿ ತಮ್ಮದೇ ಪಡೆ ಕಟ್ಟಿ ಕೊಂಡು ಸಾಮಾಜಿಕ ಸೇವೆಗೆ ಮುಂದಾಗುವ ಮೂಲಕ ಪಕ್ಷದ ಮುಖಂಡರನ್ನು ಓಲೈಸುವ ಎಲ್ಲಾ ರೀತಿಯ ಕಸರತ್ತುಗಳಲ್ಲಿ ಮಗ್ನರಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಕೆಲದಿನಗಳ
ಹಿಂದೆಯಷ್ಟೆ ಶ್ರೀನಿವಾಸ್‌ ಎಂಬುವರು ಕ್ಷೇತ್ರದ ಸ್ಥಳೀಯ ಮುಖಂಡರನ್ನು ಭೇಟಿಮಾಡುವ ಮೂಲಕ ತಾವೊಬ್ಬ ಆಕಾಂಕ್ಷಿ ಎಂದು ಪರಿಚಯಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌: ಮಾಜಿ ಸಚಿವ ಅಂಜನಮೂರ್ತಿ 4 ದಶಗಳಿಂದಲೂ ಕಾಂಗ್ರೆಸ್‌ನಲ್ಲಿದ್ದಾರೆ. ಮೂರು ಬಾರಿ ಶಾಸಕರಾಗಿ, ಉಪಸಭಾಪತಿ ಹಾಗೂ ವಸತಿ ಸಚಿವರಾಗಿದ್ದರು. ಕಳೆದ ಚುನಾವಣೆಯಲ್ಲಿ 45,389 ಮತ ಪಡೆದು ಪರಭಾವಗೊಂಡಿದ್ದರು. ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಚಿವ ಪ್ರಭಾಕರ್‌ ಪುತ್ರ ಜಿಪಂ ಮಾಜಿ ಸದಸ್ಯ ಎಚ್‌. ಪಿ.ಚಲುವರಾಜು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅಂಜನಮೂರ್ತಿ ಅವರು ತಮಗೆ ಟಿಕೆಟ್‌ ಕೊಡದಿದ್ದರೆ ನನ್ನ ಮಗ ದೀಪಕ್‌ ಕಿರಣ್‌ಗಾದರೂ ಟಿಕೆಟ್‌ ಪಡೆದುಕೊಂಡು ಅದೃಷ್ಟ ಪರೀಕ್ಷೆ ಮಾಡಬೇಕೆಂಬ ಹಠ ಅಂಜನ ಮೂರ್ತಿಯವರದ್ದಾಗಿದೆ.

ಕಸರತ್ತು: ಮೂರು ಪಕ್ಷಗಳಲ್ಲೂ ಚುನಾವಣಾ ತಯಾರಿ ತುಸು ವೇಗ ಪಡೆದಿದೆ. ಗುಂಪುಗಾರಿಕೆ, ತಂತ್ರಗಾರಿಕೆ ಉಲ್ಬಣಗೊಳ್ಳುತ್ತಿದ್ದರೂ ಮತದಾರರ ಮನಗೆಲ್ಲುವ ಕಸರತ್ತಿಗೆ ಈಗಾಗಲೇ ಕೈ ಹಾಕಿದ್ದಾರೆ. ಜಾಗೃತ ಮತದಾರರನ್ನು ತಮ್ಮತ್ತ ಸೆಳೆಯುವ ವಿಭಿನ್ನ ಮಾರ್ಗೋಪಾಯಗಳನ್ನು ಕಂಡುಕೊಳ್ಳುವತ್ತ ಮೂರೂ ಪಕ್ಷಗಳ ಧುರೀಣರು ಮುಂದಾಗಿರುವುದು ಗೋಚರವಾಗುತ್ತಿದೆ. 

ತೀವ್ರ ಚರ್ಚೆ: ಒಟ್ಟಾರೆ ಕ್ಷೇತ್ರ ದಿಂದ ವಿಧಾನಸಭೆ ಶಾಸಕರಾಗಲು ರಾಜಕೀಯ ಪಕ್ಷಗಳಿಂದ ಆಕಾಂಕ್ಷಿತರಾಗಿರುವಂತೆ ಕೆಲವರು ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುವುದು ಖಚಿತವಾದರೂ, ತೀವ್ರ ಪೈಪೋಟಿಗಳ ನಡುವೆಯೂ
ಪಕ್ಷಗಳಿಂದ ಟಿಕೆಟ್‌ ವಂಚನೆಗೊಳಗಾಗುವವರು ಬಂಡಾಯ ಅಥವಾ ಸ್ವತಂತ್ರ ಅಭ್ಯರ್ಥಿಗಳಾಗಿ ನಿಲ್ಲುವರೋ ಎಂಬ ವಿಚಾರ ತಾಲೂಕಿನ ಜನನಿಬಿಡ ಪ್ರದೇಶಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ

ಈ ಬಾರಿ ಅವಕಾಶ ಸಿಗುವುದೇ?
ಈ ಹಿಂದೆ ಜನತಾ ಪಕ್ಷದಿಂದ ಬೋವಿ ಮತ್ತು ನಾಯಕ ಹಾಗೂ ಬಲಗೈ, ಛಲವಾದಿ ಸಮುದಾಯಕ್ಕೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಲಭಿಸಿತ್ತು. ಬಿಜೆಪಿಯಿಂದಲೂ ಬಲಗೈ, ಛಲವಾದಿ ಹಾಗೂ ಬೋವಿ ಸಮುದಾಯಕ್ಕೆ ಅವಕಾಶ ಲಭಿಸಿದೆ. ಆದರೆ ಕಾಂಗ್ರೆಸ್‌ ನಿಂದ ಮಾತ್ರ ಬಲಗೈ, ಛಲವಾದಿ ಸಮುದಾಯಕ್ಕೆ ಒಮ್ಮೆಯೂ ಸ್ಪರ್ಧಿಸುವ ಯೋಗ ಬಂದಿಲ್ಲ ಎಂಬ ದೂರಿದೆ.

Trending videos

Back to Top