CONNECT WITH US  

ಹಸಿರು ಕರ್ನಾಟಕ ಯೋಜನೆಗೆ ಚಾಲನೆ 

ಹೊಸಕೋಟೆ: ಪ್ರಾಕೃತಿಕ ಸಮತೋಲನ ಕಾಪಾಡಿಕೊಂಡಲ್ಲಿ ಮಾತ್ರ ಕಾಲಕಾಲಕ್ಕೆ ಸಮರ್ಪಕವಾಗಿ ಮಳೆಯಾಗಿ ಬರಗಾಲ ಸಂಭವಿಸುವುದನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.  

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ ವ್ಯಾಪ್ತಿಯಲ್ಲಿ ತಲಾ 3 ಲಕ್ಷದಂತೆ ಒಟ್ಟು 12 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. 3 ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಖಾಲಿ ಇರುವ ಸ್ಥಳ ಗುರುತಿಸಿ ಸಸಿ ನೆಡಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಪೋಷಣೆ ಬಗ್ಗೆ ಕಾಳಜಿವಹಿಸಬೇಕು ಎಂದು ಹೇಳಿದರು.

ನೈಸರ್ಗಿಕವಾಗಿ ಭೂಪ್ರದೇಶದ ಶೇ.30 ಹಸಿರಾಗಿರಬೇಕಾಗಿತ್ತು. ಆದರೆ, ಪ್ರಸ್ತುತ ಇದರ ಪ್ರಮಾಣ ಶೇ.11.4ರಷ್ಟಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯವನ್ನು ಹಸಿರು ಪ್ರದೇಶವನ್ನಾಗಿಸಲು ಸರ್ಕಾರ ಈ ಯೋಜನೆಯನ್ನು ಕೈಗೊಂಡಿದೆ ಎಂದು ಹೇಳಿದರು.

ಸಸಿಗಳನ್ನು ಬೆಳೆಸಿದಲ್ಲಿ ಮಾತ್ರ ಪ್ರಾಕೃತಿಕ ಸಮತೋಲನದೊಂದಿಗೆ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗಲಿದೆ. ನಗರೀಕರಣ ಹೆಚ್ಚಾಗುತ್ತಿರುವ ಪರಿಣಾಮವಾಗಿ ಮರ ಗಿಡಗಳ ಬೆಳವಣಿಗೆಗೆ ತೀವ್ರ ಧಕ್ಕೆಯಾಗುತ್ತದೆ. ಮಳೆಯ ಪ್ರಮಾಣ ಸಹ ಕುಂಠಿತಗೊಂಡು ಕುಡಿಯುವ ನೀರಿಗಷ್ಟೆ ಅಲ್ಲದೆ ಕೃಷಿ ಚಟುವಟಿಕೆಗೂ ತೀವ್ರ ಅಭಾವ ಉಂಟಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಶುದ್ಧ ನೀರು ಹಾಗೂ ಉತ್ತಮ ವಾತಾವರಣ ಒದಗಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. 

ಶಾಸಕ ಎನ್‌.ನಾಗರಾಜ್‌ ಮಾತನಾಡಿ, ಕೇವಲ ಪ್ರತಿಜ್ಞೆ ಮಾಡುವುದಕ್ಕಷ್ಟೇ ಸೀಮಿತಗೊಳ್ಳದೆ ನೆಡುವ ಸಸಿ ಬೆಳೆಸಲು ಆಸಕ್ತಿ ಹೊಂದಿದಲ್ಲಿ ಮಾತ್ರ ಯೋಜನೆ ಸಾರ್ಥಕಗೊಳ್ಳಲಿದೆ. ಅರಣ್ಯ ಪ್ರದೇಶ, ಸರಕಾರದ ಗೋಮಾಳ, ಗುಂಡುತೋಪುಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆಗೂ ಆದ್ಯತೆ ನೀಡಬೇಕಾದ್ದು ಅವಶ್ಯಕವಾಗಿದೆ. ವನಸಂಪತ್ತನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಎಲ್ಲರೂ ಕಾರ್ಯನಿರತರಾಗಬೇಕು ಎಂದರು. 

ವಲಯ ಅರಣ್ಯಾಧಿಕಾರಿ ಧನಲಕ್ಷ್ಮಿ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಸಿ ವಿತರಿಸಿದರು. ಜಿಲ್ಲಾಧಿಕಾರಿ ಕರೀಗೌಡ, ಜಿಪಂ ಸಿಇಒ ಆರ್‌.ಲತಾ, ಸದಸ್ಯರಾದ ಸಿ.ನಾಗರಾಜ್‌, ರೂಪಾ ಮರಿಯಪ್ಪ, ತಹಶೀಲ್ದಾರ್‌ ಕೆ.ರಮೇಶ್‌, ತಾಪಂ ಅಧ್ಯಕ್ಷ ಜಯದೇವಯ್ಯ, ನಗರಸಭೆ ಅಧ್ಯಕ್ಷ ನ್‌.ಟಿ.ಹೇಮಂತಕುಮಾರ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಸಿ ರಕ್ಷಿಸುವ ಬಗ್ಗೆ ಸಚಿವರು ಸಭಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 

Trending videos

Back to Top