CONNECT WITH US  

ಕಾರ್ಪೋರೇಷನ್‌ ಬ್ಯಾಂಕ್‌ ಎದುರು ಧರಣಿಗೆ ಸಿದ್ಧರಾಗಿ

ದೊಡ್ಡಬಳ್ಳಾಪುರ: ಸರ್ಕಾರದ ಸೂಚನೆ ಅನ್ವಯ ರೈತರಿಗೆ ಸಾಲ ನೀಡದೆ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿರುವ ದೊಡ್ಡಬೆಳವಂಗಲ ಕಾರ್ಪೋರೇಷನ್‌ ಬ್ಯಾಂಕ್‌ ಕ್ರಮ ಖಂಡನೀಯವಾಗಿದ್ದು, ಬ್ಯಾಂಕ್‌ ಎದುರು ಪಕ್ಷಾತೀತವಾಗಿ ಧರಣಿ ನಡೆಸಲು ದಿನಾಂಕ ನಿಗದಿಪಡಿಸಿ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ರೈತರ ಸಮಸ್ಯೆ ತಿಳಿಸುವಂತೆ ಸೂಚಿಸಿದ ವೇಳೆ ನಾರನಹಳ್ಳಿ ರಂಗಸ್ವಾಮಿ, ದೊಡ್ಡಬೆಳವಂಗಲ ಹಾಗೂ ಕನಸವಾಡಿಯಲ್ಲಿನ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ರೈತರಿಗೆ ಸಮರ್ಪಕ ಸಾಲ ಸೌಲಭ್ಯ ದೊರೆಯುತ್ತಿಲ್ಲ.

ಈ ಕುರಿತು ಪದೇ ಪದೇ ಮನವಿ ಸಲ್ಲಿಸಿದರೂ ಅಧಿಕಾರಿಗಳು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿದರು. ಅದಕ್ಕೆ ಉತ್ತರಿಸಿದ ಶಾಸಕ ಟಿ.ವೆಂಕಟರಮಣಯ್ಯ, ಕಾರ್ಪೊರೇಷನ್‌ ಬ್ಯಾಂಕ್‌ ಸಿಬ್ಬಂದಿ ಬೇಜವಾಬ್ದಾರಿ ಕುರಿತು ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸಮಸ್ಯೆ ಬಗೆ ಹರಿದಿಲ್ಲ.

ಈ ಹಿನ್ನೆಲೆಯಲ್ಲಿ ಧರಣಿ ನಡೆಸಲು ತೀರ್ಮಾನಿಸಿದ್ದು ಖುದ್ದು ತಾನೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವೆ ಎಂದರು. ರೈತ ಕೀರ್ತಿಶ್‌ ಮಾತನಾಡಿ, ರಕ್ತಚಂದನ ಬೆಳೆಯಲು ಅರಣ್ಯ ಇಲಾಖೆಯಲ್ಲಿ ಅವಕಾಶ ಇದೆಯೇ. ಇದ್ದರೆ ಮಾಹಿತಿ ನೀಡಿ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕಾನೂನು ಪ್ರಕಾರವಾಗಿ ರಕ್ತಚಂದನ ಬೆಳೆಯಲು ಅವಕಾಶವಿದ್ದು ಕಟಾವಿನ ವೇಳೆ ಇಲಾಖೆ ಅನುಮತಿ ಕಡ್ಡಾಯ ಇಲ್ಲವಾದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುವುದು ಎಂದರು.

ರಸೀದಿ ನೀಡದೆ ರಸಗೊಬ್ಬರ ಮಾಡುವವರ ವಿರುದ್ಧ ಕ್ರಮ, ಸಬ್ಸಿಡಿ ನೀಡದ ಇಲಾಖೆ ವಿರುದ್ಧ ಸದನದಲ್ಲಿ ಮಾತನಾಡುವಂತೆ ಒತ್ತಾಯ ಸೇರಿದಂತೆ ಹಲವು ಪ್ರಶ್ನೆಗಳು ಕಾರ್ಯಕ್ರಮದಲ್ಲಿ ಕೇಳಿಬಂದವು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆವಿಕೆ ವಿಜ್ಞಾನಿ ವೆಂಕಟೇಗೌಡ, ಪ್ರಸ್ತುತ ಸನ್ನಿವೇಶದಲ್ಲಿ ತಾಲೂಕಿನ ಹಾಡೋನಹಳ್ಳಿ ಕೆವಿಕೆ ಕೇಂದ್ರದಲ್ಲಿ ಮಣ್ಣಿನ ಪರೀಕ್ಷೆಯನ್ನು ಕೇವಲ 150ರೂ.,ಗಳಿಗೆ ಮಾಡಲಾಗುತ್ತಿದೆ. ಅಲ್ಲದೆ ರೈತರ ಬೆಳೆೆಗಳಿಗೆ ಕಾಡುವ ಕೀಟಗಳ, ರೋಗಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

ನಂತರ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ತಾಪಂ ಅಧ್ಯಕ್ಷ ಶ್ರೀವತ್ಸ, ಸದಸ್ಯರಾದ ಶಶಿಧರ್‌, ಮಂಜುನಾಥ್‌, ಹುಲಿಕುಂಟೆ ಗ್ರಾಪಂ ಅಧ್ಯಕ್ಷೆ ಗಂಗಲಕ್ಷ್ಮಮ್ಮ, ಉಪಾಧ್ಯಕ್ಷೆ ಶೋಭಾ, ಕೃಷಿಕ ಸಮಾಜದ ನಿರ್ದೇಶಕ ಜಯರಾಂ, ಪ್ರಗತಿಪರ ರೈತ ಉಗ್ರಯ್ಯ, ತಿಮ್ಮೇಗೌಡ, ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ಬೈರೇಗೌಡ ಮತ್ತಿತರರಿದ್ದರು.


Trending videos

Back to Top