ನಾಡಿನ ಚರಿತ್ರೆಯ ಕುರುಹು ಸಂರಕ್ಷಿಸಿ

ನೆಲಮಂಗಲ: ನಾಡಿನ ಚರಿತ್ರೆಯ ಕುರುಹುಗಳಾದ ದೇವಾಲಯ, ಕಲ್ಯಾಣಿ, ಕಟ್ಟಡ, ಶಾಸನ ಮತ್ತು ಸ್ಥಳಗಳನ್ನು ಸಂರಕ್ಷಿಸುವುದು ಇಂದಿನ ಯುವ ಜನತೆಯ ಆದ್ಯ ಕರ್ತವ್ಯವಾಗಬೇಕು ಎಂದು ಕೆ.ಎಸ್.ತಾಂತ್ರಿಕ ಮಹಾದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪೊ›.ಎಂ.ಆರ್.ಚೌಡಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಗಂಗರ ರಾಜಧಾನಿಯಾದ ಮಣ್ಣೆ (ಮಾನ್ಯಪುರ)ಗ್ರಾಮದಲ್ಲಿನ ಶ್ರೀಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಕೆ.ಎಸ್.ತಾಂತ್ರಿಕ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವತ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಣ್ಣೆ ಗ್ರಾಮವನ್ನು ಗಂಗರು ಆಳ್ವಿಕೆ ಮಾಡಿರುವುದು ಹೆಮ್ಮೆಯ ಸಂಗತಿ. ಆದರೆ, ಅವರು ನಿರ್ಮಿಸಿರುವ ದೇವಾಲಯ ಮತ್ತು ಕಲ್ಯಾಣಿಗಳು ಇಂದು ನಶಿಸುವ ಹಂತಕ್ಕೆ ಬಂದಿವೆ. ಇವುಗಳನ್ನು ಅನೇಕ ಬಾರಿ ಕಾಲೇಜಿನ ವಿದ್ಯಾರ್ಥಿಗಳು ಸ್ವತ್ಛಗೊಳಿಸಿದರೂ ಸಂರಕ್ಷಿಸಲು ಸರ್ಕಾರದ ವತಿಯಿಂದ ಯಾವುದೇ ಪ್ರಯತ್ನ ನಡೆಯದಿರುವುದು ಬೇಸರ ಸಂಗತಿ. ನಾಡಿನ ಇತಿಹಾಸ ಸಾರುವ ಕುರುಹುಗಳನ್ನು ರಕ್ಷಿಸಿ ನಾಡಿನ ಹಿರಿಮೆ ಹೆಚ್ಚಿಸಬೇಕಾಗಿದೆ ಎಂದರು.
ಸ್ವತ್ಛತಾ ಕಾರ್ಯಕ್ರಮದಲ್ಲಿ ವಿಶ್ವನಾಥ್, ಶಿಕ್ಷಕರಾದ ಬಾಳೇಗೌಡ, ಕಾಂತರಾಜು, ಕಲಾವಿದ ವೆಂಕಟೇಶ್, ಮದನ್, ಲೇಪಾಕ್ಷಿ, ಶಣ್ಮುಖಸ್ವಾಮಿ, ಶಶಿಕುಮಾರ್, ಮಧು, ಚೇತನ್, ಪ್ರದೀಪ್, ಶ್ರೀ ಸೋಮೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರಿದ್ದರು.