CONNECT WITH US  

ವೈಜ್ಞಾನಿಕ ರೀತಿಯಲ್ಲಿ ಮರ ಸ್ಥಳಾಂತರಕ್ಕೆ ಆಗ್ರಹ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ಕಡಿಯದೇ ಟ್ರೀ ಟ್ರಾನ್ಸ್‌ಪ್ಲಾಂಟರ್‌ ಯಂತ್ರದ ಮೂಲಕ ವೈಜ್ಞಾನಿಕ ರೀತಿಯಲ್ಲಿ ಸ್ಥಳಾಂತರಿಸಬೇಕು. ಈಗಾಗಲೇ ಮರ ಕಡಿಯಲು ಸಿದ್ಧವಾಗಿರುವುದನ್ನು ಕೂಡಲೇ
ನಿಲ್ಲಿಸಬೇಕು ಎಂದು ಆಗ್ರಹಿಸಿ ಯುವ ಸಂಚಲನದ ಕಾರ್ಯಕರ್ತರು, ನಗರದ ತಾಲೂಕು ಕಚೇರಿ ರಸ್ತೆಯಲ್ಲಿ ಮರ ಕಡಿಯದಂತೆ ತಡೆ ಹಾಕಿ ಪ್ರತಿಭಟಿಸಿದರು.

ನಗರದ ಬಸವ ಭವನದಿಂದ ಕೆಸಿಪಿ ವೃತ್ತದವರೆಗೆ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ತಾಲೂಕು ಕಚೇರಿ ರಸ್ತೆಯಲ್ಲಿ ಈಗಾಗಲೇ ಹತ್ತಾರು ಮರಗಳನ್ನು ಕಡಿಯಲಾಗಿದೆ. ಶುಕ್ರವಾರ ಬೆಳಗ್ಗೆ ಉಳಿದ ಮರ ಕಡಿಯಲು ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಮುಂದಿನ ಮರಗಳನ್ನು ಕಡಿಯಲು ಬಿಡುವುದಿಲ್ಲವೆಂದು ಯುವ ಸಂಚಲನದ ಕಾರ್ಯಕರ್ತರು ತಡೆಯೊಡ್ಡಿದರು. ಸಂಜೆವರೆಗೂ ಮರ ಕಡಿಯದೇ ಸ್ಥಳದಲ್ಲಿಯೇ ಕಾರ್ಯಕರ್ತರು ಬೀಡುಬಿಟ್ಟಿದ್ದರು.
 
 ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ ಆರಾಧ್ಯ ಮಾತನಾಡಿ, ನಾವು ಅಭಿವೃದ್ಧಿ ವಿರೋಧಿಗಳಲ್ಲ. ಸುಸ್ಥಿರ ಅಭಿವೃದ್ಧಿ ಬಯಸುವವರು. ರಾಜ್ಯ ಅರಣ್ಯ ನೀತಿಯಂತೆ ಒಟ್ಟು ಭೂ ಪ್ರದೇಶದ ಶೇ.33 ರಷ್ಟು ಪ್ರದೇಶ ಹಸಿರು ಹೊದಿಕೆಯಿಂದ ಕೂಡಿರಬೇಕೆಂದು ತಿಳಿಸಿದೆ. ಆದರೆ, ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.8 ಅರಣ್ಯ ಪ್ರದೇಶವಿದೆ. ಇದು ಸರಾಸರಿಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಅರಣ್ಯ ಇಲಾಖೆ ಒತ್ತಿ ಹೇಳುತ್ತಿದೆ.

ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ರಸ್ತೆ ಅಗಲೀಕರಣಕ್ಕಾಗಿ 2,500 ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. ಮತ್ತೆ ಈಗ 68 ಮರಗಳನ್ನು ದೊಡ್ಡಬಳ್ಳಾಪುರ -ನೆಲಮಂಗಲ ಹೆದ್ದಾರಿ ವಿಸ್ತರಣೆಗಾಗಿ ಕಡಿಯಲು ಆರಂಭಿಸಲಾಗಿದೆ. ಆ ಮರಗಳನ್ನು ಕಡಿಯದಂತೆ ವೈಜ್ಞಾನಿಕ ರೀತಿಯಲ್ಲಿ ಸ್ಥಳಾಂತರಿಸಬಹುದಾಗಿದೆ. ಹಲವಾರು ಕಡೆ ಈ ಪ್ರಯತ್ನ ಯಶಸ್ವಿಯಾಗಿದೆ. ಶಿವಮೊಗ್ಗದಲ್ಲಿ ಸಣ್ಣ ಹಾಗೂ ದೊಡ್ಡಗಾತ್ರದ 80 ಮರಗಳನ್ನು ಅರಣ್ಯ ಇಲಾಖೆ ಸಹಯೋಗದೊಂದಿಗೆ ಸ್ಥಳಾಂತರಿಸ ಲಾಗಿತ್ತು. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಯೂ 30 ರಿಂದ 50 ವರ್ಷದ ಮರಗಳನ್ನು ಟ್ರೀ ರೀ ಪ್ಲಾಂಟೇಷನ್‌ ಪ್ರಯತ್ನ ನಡೆದಿದ್ದು ಯಶಸ್ವಿಯಾಗಿದೆ ಎಂದು ಹೇಳಿದರು.

 ಮರಗಳನ್ನು ಕಡಿಯದೇ ದಯಮಾಡಿ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಬೇಕೆಂದು ಯುವ ಸಂಚಲನದಿಂದ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು. ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಮಹೇಶ್‌ ಬಾಬು, ಮರಗಳನ್ನು ಉಳಿಸುವ ಕಾರ್ಯ ಪ್ರಸ್ತುತವಾಗಿದ್ದು ಟ್ರೀ ಟ್ರಾನ್ಸ್‌ಪ್ಲಾಂಟರ್‌ ಯಂತ್ರದ ಕುರಿತಾಗಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಯುವ ಸಂಚಲನದ ಕಾರ್ಯಕರ್ತರಾದ ದಿವಾಕರ್‌ನಾಗ್‌, ಸತೀಶ್‌, ನವೀನ್‌, ವಿನಯ್‌, ಪುನೀತ್‌, ಅರ್ಕಾವತಿ ಪುನಶ್ಚೇತನ ಸಮಿತಿ ಕಾರ್ಯಕರ್ತ ಮಂಜುನಾಥ್‌ ಇದ್ದರು 


Trending videos

Back to Top