CONNECT WITH US  

ನಂದಿಬೆಟ್ಟ: ಶಿಕ್ಷಕಿ ದೇಹದಾನ

ವೇಣೂರು: ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ನಂದಿಬೆಟ್ಟದ ನವಪಲ್ಲವಿ ನಿವಾಸಿ ಮಹಾಬಲ ಭಟ್‌ ಅವರ ಪತ್ನಿ ಸಾಮಾಜಿಕ ಕಾರ್ಯಕರ್ತೆ, ಗ್ರಾ.ಪಂ. ಮಾಜಿ ಸದಸ್ಯೆ ಶಂಕರಿ ಎಂ. ಭಟ್‌ (75) ಅವರ ದೇಹವನ್ನು ಮಂಗಳೂರು ಕೆಎಂಸಿ ಆಸ್ಪತ್ರೆ ಕಾಲೇಜು ಅತ್ತಾವರಕ್ಕೆ ದಾನ ಮಾಡಲಾಗಿದೆ. ಮೃತರ ಪುತ್ರ ಉದಯಶಂಕರ್‌ ಮೈಸೂರಿನಲ್ಲಿ ಕರ್ಣಾಟಕ ಬ್ಯಾಂಕ್‌ನಲ್ಲಿ ಉದ್ಯೋಗಿ. ಪುತ್ರಿಯನ್ನು ಮದುವೆ  ಮಾಡಿ ಕೊಡಲಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಮಹಾಬಲ ಭಟ್‌ ಕಟೀಲು ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದು, ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ. ಶಂಕರಿ ಅವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾರೆ.

ಹೃದಯಾಘಾತ: ಬುಧವಾರ ಮುಂಜಾನೆ ಶಂಕರಿ ಭಟ್‌ ಅವರ ಪುತ್ರಿ ದೂರವಾಣಿ ಕರೆ ಮಾಡಿದಾಗ ತಾಯಿ ಕರೆ ಸ್ವೀಕರಿಸಲಿಲ್ಲ. ಸಂಶಯಗೊಂಡು ನೆರೆಮನೆಗೆ ಕರೆ ಮಾಡಿ ತಿಳಿಸಿದ್ದು, ನೆರೆಮನೆಯವರು ಶಂಕರಿ ಭಟ್‌ ಅವರ ಮನೆಗೆ ಬಂದು ನೋಡಿದಾಗ ಬಾಗಿಲ ಒಳಗೆ ಚಿಲಕ ಹಾಕಲಾಗಿತ್ತು. ಬಾಗಿಲು ಒಡೆದು ನೋಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ರಾತ್ರಿ ಮಲಗಿದ್ದವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಬುಧವಾರ ರಾತ್ರಿ ಮಂಗಳೂರು ಕೆಎಂಸಿ ಆಸ್ಪತ್ರೆಯವರು ಆಗಮಿಸಿ ಮೃತದೇಹವನ್ನು ಕೊಂಡೊಯ್ದಿದ್ದಾರೆ.

ಸ್ವ ಇಚ್ಛೆಯಿಂದ ದಾನ: 2017ರ ಆಗಸ್ಟ್‌ನಲ್ಲಿ ಅವರು ದೇಹವನ್ನು ಮಂಗಳೂರು ಕೆಎಂಸಿ ಆಸ್ಪತ್ರೆ ಕಾಲೇಜಿಗೆ ಸ್ವ ಇಚ್ಛೆಯಿಂದ ಕಾನೂನಾತ್ಮಕವಾಗಿ ದಾನ ನೀಡುವುದಾಗಿ ಘೋಷಿಸಿದ್ದರು. ವೈದ್ಯ ಕಲಿಯುವ ವಿದ್ಯಾರ್ಥಿಗಳಿಗೆ ತನ್ನಿಂದ ಸಹಾಯವಾಗಲೆಂದು ಸಾವಿನ ಬಳಿಕ ತನ್ನ ದೇಹವನ್ನು ದಾನ ನೀಡುವುದಾಗಿ ಮಕ್ಕಳಲ್ಲಿ, ಕುಟುಂಬಿಕರಲ್ಲಿ ವಿಷಯ ತಿಳಿಸಿದ್ದರು. ಸುಮಾರು 1989-90ರಲ್ಲಿ ಸರಕಾರ ಜಾರಿಗೆ ತಂದಿದ್ದ ವಯಸ್ಕರ ಶಿಕ್ಷಣದ ಶಿಕ್ಷಕಿಯಾಗಿ ನಂದಿಬೆಟ್ಟ ದೇವಸ್ಥಾನದಲ್ಲಿ ಊರಿನ ಮಹಿಳೆಯರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದರು. ಸರಕಾರದ ಈ ಯೋಜನೆ ಸ್ತಬ್ಧಗೊಂಡ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನದೀಪ ಯೋಜನೆಯಡಿ ಕರ್ತವ್ಯವನ್ನು ಮುಂದು
ವರಿಸಿದರು. ಆ ಬಳಿಕ ಪಡಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,  ನಿಟ್ಟಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Trending videos

Back to Top