CONNECT WITH US  

ಕಲ್ಲಡ್ಕ ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಂದ ಭತ್ತದ ಕೃಷಿ

ಸುದೆಕ್ಕಾರ್‌ನಲ್ಲಿರುವ 5 ಎಕ್ರೆ ಜಮೀನಿನಲ್ಲಿ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ 

ಭತ್ತ ಬೇಸಾಯವನ್ನು ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಬಂಟ್ವಾಳ : ಬದುಕು ಒಂದು ಪಾಠಶಾಲೆ. ತಲೆಮಾರಿನ ಹಿಂದೆ ಶೈಕ್ಷಣಿಕ ವ್ಯವಸ್ಥೆ ಆರಂಭವಾಗುವುದು ಗದ್ದೆ, ತೋಟ, ಕೃಷಿ, ಜಾನುವಾರುಗಳ ಜತೆಗಿನ ಬದುಕಿನೊಂದಿಗೆ. ಅದೇ ಮಾದರಿ ಕ್ರಮವನ್ನು ವಿದ್ಯಾರ್ಥಿಗಳ ಪಾಲಿಗೆ ಒದಗಿಸುವಲ್ಲಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯು ಭತ್ತದ ಕೃಷಿಯ ಅನುಭವ ಹಂಚುವ ಪ್ರಯೋಗ ಮಾಡಿದೆ.

ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ನೀಡುವುದರೊಂದಿಗೆ ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸುದೆಕ್ಕಾರ್‌ ನಲ್ಲಿರುವ 5 ಎಕ್ರೆ ಜಮೀನಿನಲ್ಲಿ ಭತ್ತ ಬೇಸಾಯವನ್ನು ಮಾಡುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ಅಲ್ಲಿ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್‌, ಕಾರ್ಯದರ್ಶಿ ಜಯರಾಮ್‌ ರೈ ಬೋಳಂತೂರು, ಜಯರಾಮ್‌ ನೀರಪಾದೆ ತರಬೇತಿ ನೀಡಿದರು. ಅನಂತರ ವಿದ್ಯಾರ್ಥಿಗಳೇ ನೇಜಿಯನ್ನು ತೆಗೆದು ಗದ್ದೆಯಲ್ಲಿ ನೆಟ್ಟು ಸಂತೋಷಪಟ್ಟರು. ಗದ್ದೆ ಉಳುವುದು, ಗದ್ದೆ ಹದ ಮಾಡುವುದು, ನೇಜಿ ತೆಗೆಯುವುದು, ಮತ್ತು ನೆಡುವುದು ಇವುಗಳ ಮಾಹಿತಿ ಕೊಡಲಾಯಿತು. ಗದ್ದೆಯಲ್ಲಿ ನೇಜಿ ನೆಟ್ಟ ಎಲ್ಲ ವಿದ್ಯಾರ್ಥಿಗಳಿಗೆ ವಿಶೇಷ ಉಪಾಹಾರ, ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಗದ್ದೆಯ ಬದಿಯಲ್ಲೇ ಕೃಷಿಕರಂತೆ ಊಟ ಉಪಾಹಾರ ಸೇವಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ವಿದ್ಯಾರ್ಥಿಗಳೊಂದಿಗೆ ನೇಜಿ ನೆಟ್ಟು ದಿನಪೂರ್ತಿ ಅವರೊಂದಿಗಿದ್ದು ಪ್ರೋತ್ಸಾಹಿಸಿದರು. ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಮುಖ್ಯ ಶಿಕ್ಷಕ ರವಿರಾಜ್‌ ಕಣಂತೂರು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಕೃಷಿ ಸಂಘ
ಮಕ್ಕಳಿಗೆ ನೇಜಿ ನೆಡುವುದಕ್ಕೆ ಸುಧೆಕಾರ್‌ ನಿವಾಸಿ ಜಯರಾಮ ಗದ್ದೆಯನ್ನು ಚೆನ್ನಾಗಿ ಉತ್ತು ಹದಗೊಳಿಸಿದ್ದರು. ಮಕ್ಕಳಿಗೂ ಇದರ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ಬದುಕಿನ ಅನುಭವ ಪಡೆದರು. ಇಂತಹ ಅನುಭವ ಹಂಚಿಕೊಳ್ಳಲು ಅವಕಾಶ ಆಗುವಂತೆ ಕೃಷಿ ಚಟುವಟಿಕೆಯ ಸಂಯೋಜನೆಗಾಗಿ ವಿದ್ಯಾರ್ಥಿಗಳ ಕೃಷಿ ಸಂಘ ಪ್ರಾರಂಭ ಮಾಡಲಾಗಿದೆ.


Trending videos

Back to Top