CONNECT WITH US  

ಜು. 15: ಬಂಟ್ವಾಳ ಟೌನ್‌ ರೋಟರಿ ಕ್ಲಬ್‌ ಪದಗ್ರಹಣ

ಬಂಟ್ವಾಳ : ರೋಟರಿ ಕ್ಲಬ್‌ ಬಂಟ್ವಾಳ ಟೌನ್‌ ಇದರ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜು. 15ರಂದು ರಾತ್ರಿ 7ಕ್ಕೆ ಬಿ.ಸಿ. ರೋಡ್‌ನ‌ ರೋಟರಿ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ನಡೆಯಲಿದ್ದು, ರೋಟರಿ ಜಿಲ್ಲೆ-3181ರ ಜಿಲ್ಲಾ ಸಹ ತರಬೇತುದಾರ ಬಿ. ಶೇಖರ್‌ ಶೆಟ್ಟಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ರೋಟರಿ ಕ್ಲಬ್‌ ಬಂಟ್ವಾಳ ಟೌನ್‌ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಸಮಾರಂಭದಲ್ಲಿ ರೋಟ ಟೌನ್‌ ಗೃಹ ಪತ್ರಿಕೆಯನ್ನು ವಲಯ-4ರ ಅಸಿಸ್ಟೆಂಟ್‌ ಗವರ್ನರ್‌ ಎನ್‌. ಪ್ರಕಾಶ್‌ ಕಾರಂತ್‌ ಬಿಡುಗಡೆಗೊಳಿಸಲಿದ್ದಾರೆ. ಝೋನಲ್‌ ಲೆಫ್ಟಿನೆಂಟ್‌ ಕೆ. ಸಂಜೀವ ಪೂಜಾರಿ ಅವರು ಬಂಟ್ವಾಳ ತಾಲೂಕಿನ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಬಂಟ್ವಾಳ ರೋಟರಿ ಕ್ಲಬ್‌ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇದರ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಿಸಲಿದ್ದಾರೆ ಎಂದರು.

2018-19ರ ಸಾಲಿಗೆ ಅಧ್ಯಕ್ಷರಾಗಿ ಉಮೇಶ್‌ ನಿರ್ಮಲ್‌, ಕಾರ್ಯದರ್ಶಿಯಾಗಿ ಜಯರಾಜ್‌ ಎಸ್‌. ಬಂಗೇರ, ಉಪಾಧ್ಯಕ್ಷರಾಗಿ ಪಲ್ಲವಿ ಕಾರಂತ್‌, ಕೋಶಾಧಿಕಾರಿಯಾಗಿ ಆಶಾಮಣಿ ಡಿ. ರೈ, ಜತೆ ಕಾರ್ಯದರ್ಶಿಯಾಗಿ ಸತೀಶ್‌ ಕುಮಾರ್‌, ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಆಡಳಿತ ಮಂಡಳಿಯಲ್ಲಿ ಕ್ಲಬ್‌ ಸರ್ವೀಸ್‌ ನಿರ್ದೇಶಕರಾಗಿ ಶಂಕರ್‌ ಶೆಟ್ಟಿ, ಸಮುದಾಯ ಸೇವೆ ನಿರ್ದೇಶಕರಾಗಿ ಶಾಂತರಾಜ್‌, ವೊಕೇಶನಲ್‌ ಸರ್ವೀಸ್‌ ನಿರ್ದೇಶಕರಾಗಿ ಮುಹಮ್ಮದ್‌ ಮುನೀರ್‌, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ಜೀವನ್‌ ಲಾಯ್ಡ ಪಿಂಟೋ, ಯುವಜನ ಸೇವೆ ನಿರ್ದೇಶಕರಾಗಿ ಶನ್‌ಪ್ಪತ್‌ ಶೆರೀಫ್‌, ಟಿ.ಆರ್‌.ಎಫ್‌. ನಿರ್ದೇಶಕರಾಗಿ ದಯಾನಂದ ಶೆಟ್ಟಿ, ಸದಸ್ಯತನ ಅಭಿವೃದ್ಧಿ ನಿರ್ದೇಶಕರಾಗಿ ಸುಧಾಕರ್‌ ಸಾಲ್ಯಾನ್‌, ಪಲ್ಸ್‌ ಪೋಲಿಯೋ ವಿಭಾಗದ ನಿರ್ದೇಶಕರಾಗಿ ಡಾ| ಸಂತೋಷ್‌ ಬಾಬು ಅವರು ಆಯ್ಕೆಗೊಂಡಿದ್ದಾರೆ. ಈ ವರ್ಷದ ರೋಟರಿ-3181ರ ಜಿಲ್ಲಾ ಗರ್ವನರ್‌ ರೋಹಿನಾಥ್‌ ಇವರ ಜಿಲ್ಲೆಯ ವಿಶೇಷ ಯೋಜನೆ ಆಶಾ ಸ್ಫೂರ್ತಿ ಯೋಜನೆಯಡಿ ಜಿಲ್ಲೆಯ ಅಂಗನವಾಡಿಗಳಿಗೆ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷ ಬಾರಿ ರಶೀನ್‌ ಇವರ ಸ್ಫೂರ್ತಿಯ ಚೆಲುಮೆ ಎನ್ನುವ ಸಂದೇಶದಂತೆ ಪ್ರಪಂಚಾದ್ಯಂತ ರೋಟರಿಗಳು ಒಗ್ಗೂಡಿ ಪರಸ್ಪರ ವಿಚಾರ ವಿನಿಮಯದ ಮೂಲಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಈ ವರ್ಷದ ಆರಂಭಕ್ಕೆ ಮುನ್ನುಡಿ ನೀಡಿದ್ದಾರೆ ಎಂದು ನಿಯೋಜಿತ ಅಧ್ಯಕ್ಷ ಉಮೇಶ್‌ ನಿರ್ಮಲ್‌ ಅವರು ತಿಳಿಸಿದ್ದಾರೆ.

ವಲಯ-4ರ ಅಸಿಸ್ಟೆಂಟ್‌ ಗವರ್ನರ್‌ ಎನ್‌. ಪ್ರಕಾಶ್‌ ಕಾರಂತ್‌, ನಿಯೋಜಿತ ಕಾರ್ಯದರ್ಶಿ ಜಯರಾಜ್‌ ಎಸ್‌. ಬಂಗೇರ, ನಿಯೋಜಿತ ಕೋಶಾಧಿಕಾರಿ ಆಶಾಮಣಿ ಡಿ. ರೈ, ಪದಾಧಿಕಾರಿ ಸುರೇಶ್‌ ಸಾಲ್ಯಾನ್‌ ಉಪಸ್ಥಿತರಿದ್ದರು


Trending videos

Back to Top