CONNECT WITH US  

ಸರಕಾರಿ ಶಾಲೆ ಉಳಿಸಲು ಮಿಸ್ಡ್  ಕಾಲ್‌ ಆಂದೋಲನ 

ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಚಾಲನೆ 

ಬಂಟ್ವಾಳ: ಮಿಸ್ಡ್ ಕಾಲ್ ಕೊಡಿ. ಸರಕಾರಿ ಶಾಲೆ ಉಳಿಸಲು ಕೈಜೋಡಿಸಿ... ಹೀಗೊಂದು ಸಂದೇಶವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಜ್ಯ ಶಿಕ್ಷಣ ನೀತಿ ರೂಪಿಸುವಂತೆ ಆಗ್ರಹಿಸಿ ಅನಿಲ್‌ ಶೆಟ್ಟಿ, ಪ್ರಕಾಶ್‌ ಅಂಚನ್‌ ನೇತೃತ್ವ ದಲ್ಲಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಗೆ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಮೂಲಕ ಜನಾಂದೋಲನ ರೂಪಿಸಲು ಈ ಕ್ರಮ ನಡೆದಿದೆ.

ದಡ್ಡಲಕಾಡು ಹಿ.ಪ್ರಾ. ಶಾಲೆಯಲ್ಲಿ ಜು. 18ರಂದು ನಡೆದ ಕಾರ್ಯಕ್ರಮದಲ್ಲಿ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಸರಕಾರಿ ಶಾಲೆಗಳತ್ತ ಜನರ ಗಮನ ಸೆಳೆಯಲು, ಜನಪ್ರತಿನಿಧಿಗಳು ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ ಮಕ್ಕಳನ್ನು ಆಕರ್ಷಿಸುವಂತೆ ಮಾಡುವ ನೀತಿ ರೂಪಿಸುವ ಸಶಕ್ತ ಶಿಕ್ಷಣ ರೀತಿ ನಿರ್ಮಿಸಲು ಈ ಕ್ರಮ ಎನ್ನುತ್ತಾರೆ ಆಯೋಜಕರು. 

ಯಾಕೆ ಮಿಸ್ಡ್  ಕಾಲ್‌ ?
ಮಿಸ್ಡ್ ಕಾಲ್‌ ಉದ್ದೇಶ ಇಷ್ಟೇ. ಹಲವು ಸರಕಾರಿ ಶಾಲೆಗಳು ಮೂಲಸೌಕರ್ಯ ಕೊರತೆ ಹಾಗೂ ಮಕ್ಕಳು ಬಾರದೇ ಇರುವ ಕಾರಣಗಳಿಂದ ಮುಚ್ಚುತ್ತಿವೆ. ಕೆಲವು ಶಾಲೆ ಗಳಲ್ಲಿ ಶಿಕ್ಷಕರು ಇದ್ದರೆ. ಮಕ್ಕಳಿಲ್ಲ, ಕೆಲವು ಶಾಲೆಗಳಲ್ಲಿ ಮಕ್ಕಳಿದ್ದರೆ ಶಿಕ್ಷಕರ ಕೊರತೆ. ಎಲ್ಲವೂ ಇರುವ ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ. ಬಂಟ್ವಾಳ ತಾ|ನ ದಡ್ಡಲಕಾಡು ಎಂಬಲ್ಲಿ ಯುವಕರ ಸಂಘಟನೆಯೊಂದು ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಹೆಸರಲ್ಲಿ ಸರಕಾರಿ ಶಾಲೆ ದತ್ತು ತೆಗೆದುಕೊಂಡಿತ್ತು. ಕೇವಲ ನಾಲ್ಕು ವರ್ಷಗಳಲ್ಲಿ ಬೆರಳೆಣಿಕೆಯಷ್ಟಿದ್ದ ಮಕ್ಕಳ ಸಂಖ್ಯೆ ಪ್ರಸ್ತುತ 500ಕ್ಕೇರಿದೆ. ದಾನಿಗಳ ನೆರವಿನಿಂದ ಸ್ವಂತ ಕಟ್ಟಡ ಶಾಲೆಗೆ ನಿರ್ಮಿಸಲಾಗಿದೆ. ಇವೆಲ್ಲವೂ ಸರಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಹುಟ್ಟಿಕೊಂಡ ಆಂದೋಲನ. ಇದರ ಮುಂದುವರಿದ ಭಾಗವಾಗಿ ರಾಜ್ಯಾದ್ಯಂತ ಸರಕಾರಿ ಶಾಲೆ ಉಳಿಸಲು ಮಿಸ್ಡ್ ಕಾಲ್‌ ಅಭಿಯಾನ ಆರಂಭಿಸಲಾಗಿದೆ. ಈ ಕರೆ ನೀಡಿ ಎರಡು ದಿನಗಳಲ್ಲಿ 25 ಸಾವಿರಕ್ಕೂ ಅಧಿಕ ಮಿಸ್ಡ್ಕಾಲ್‌ ಬಂದಿವೆ ಎನ್ನುತ್ತಾರೆ ಶ್ರೀ ದುರ್ಗಾ ಫ್ರೆಂಡ್ಸ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌.

ಸೆ. 8: ಕಾಲಡಿಗೆ ಜಾಥಾ
ಸೆ.8ರಂದು ಬೆಳಗ್ಗೆ 11ಕ್ಕೆ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ನಡೆಯಲಿದೆ. ರಾಜ್ಯದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ 50 ಲಕ್ಷ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ. ಬನ್ನಿ ಆಂದೋಲನದಲ್ಲಿ ಭಾಗವಹಿಸಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸರಕಾರವನ್ನು ಆಗ್ರಹಿಸೋಣ. ಬೆಂಬಲಿಸಲು 7676444225 ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದು ಕರೆ ನೀಡುತ್ತಿದ್ದಾರೆ.

Trending videos

Back to Top