CONNECT WITH US  

'ಕಂದಾಯ-ಪಿಂಚಣಿ ಅದಾಲತ್‌ ಅವಶ್ಯ'

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಕಂದಾಯ ಮತ್ತು ಪಿಂಚಣಿ ಅದಾಲತ್‌ ಉದ್ಘಾಟಿಸಿದರು.

ಬಂಟ್ವಾಳ : ಆಧುನಿಕ ಗಣಕೀಕರಣ ವ್ಯವಸ್ಥೆಯಲ್ಲಿ ಅನೇಕ ವ್ಯತ್ಯಾಸಗಳು ಆಗುತ್ತವೆ. ಇಂತಹ ತೊಂದರೆಗಳನ್ನು ನಿವಾರಿಸಿಕೊಳ್ಳಲು ಕಂದಾಯ ಅದಾಲತ್‌ ಅವಶ್ಯ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ಜು. 27ರಂದು ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆದ ಪಾಣೆಮಂಗಳೂರು ಫಿರ್ಕಾ ವ್ಯಾಪ್ತಿಯ ಕಂದಾಯ ಮತ್ತು ಪಿಂಚಣಿ ಅದಾಲತ್‌ ಉದ್ಘಾಟಿಸಿ ಮಾತನಾಡಿದರು.

ಎಲ್ಲರಿಗೂ ಅದಾಲತ್‌ನ ಪ್ರಯೋಜನ ಮುಟ್ಟಬೇಕು. ಸರಕಾರದ ಯೋಜನೆಗಳು ಜನ ಸಾಮಾನ್ಯರಿಗೆ ಅದಾಲತ್‌ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ತಲುಪಲು ಸಾಧ್ಯ. ಸರಕಾರದ ಪ್ರತಿ ಯೋಜನೆಯೂ ಜನಸಾಮಾನ್ಯನಿಗೆ ಮುಟ್ಟುವಲ್ಲಿ ಕೆಲಸ ಮಾಡುತ್ತೇನೆ. ಜನರ ಸಮಸ್ಯೆಗೆ ಸ್ಪಂದಿಸಿ, ಕಾನೂನು ಚೌಕಟ್ಟಿನಲ್ಲಿ ಉಪಯೋಗ ಆಗುವ ಕೆಲಸ ನಡೆಯಲಿ ಎಂದರು.ತಾ| ಕಚೇರಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ದೂರುಗಳು ಬಾರದಂತೆ ಕೆಲಸಗಳು ಆಗಬೇಕು. ಜನರಿಗೆ ಸವಲತ್ತುಗಳು ಅರ್ಹವಾಗಿ ಮುಟ್ಟಿಸಲು ಸರಕಾರಿ ಅಧಿಕಾರಿಗಳಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು. ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ತಾಲೂಕು ಪಂಚಾಯತ್‌ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ಮೊದಲಾದವರು ಮಾತನಾಡಿದರು.

ಜಿಲ್ಲಾ ಪಂಚಾಯತ್‌ ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ, ರವೀಂದ್ರ ಕಂಬಳಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಲೂಕು ಪಂಚಾಯತ್‌ ಸದಸ್ಯರಾದ ಗಣೇಶ ಸುವರ್ಣ, ಯಶವಂತ ಪೊಳಲಿ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಎನ್‌. ಸಾಲ್ಯಾನ್‌, ಪುರಸಭಾ ಸದಸ್ಯರು, ವಿವಿಧ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಸ್ವಾಗತಿಸಿ, ಪ್ರಭಾರ ಉಪತಹಶೀಲ್ದಾರ್‌ ಗ್ರೆಟ್ಟಾ ಮಸ್ಕರೇನಸ್‌, ಕಂದಾಯ ನಿರೀಕ್ಷಕ ಪಿ. ರಾಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದಾಶಿವ ಕೈಕಂಬ, ಸುಂದರ ಮತ್ತಿತರರು ಸಹಕರಿಸಿದರು.

ಸವಲತ್ತು ವಿತರಣೆ
ಅದಾಲತ್‌ನಲ್ಲಿ ರಾಷ್ಟ್ರೀಯ ಕುಟುಂಬ ಸಹಾಯಧನ-20 ಮಂದಿಗೆ 3.40 ಲಕ್ಷ ರೂ. ಚೆಕ್‌ ವಿತರಣೆ, ಅಂತ್ಯ ಸಂಸ್ಕಾರ ಪರಿಹಾರ-20 ಮಂದಿಗೆ 1 ಲಕ್ಷ ರೂ. ಚೆಕ್‌ ವಿತರಣೆ, ಪ್ರಾಕೃತಿಕ ವಿಕೋಪ ಪರಿಹಾರ-33 ಮಂದಿಗೆ 2.05 ಲಕ್ಷರೂ. ಚೆಕ್‌ ವಿತರಣೆ, ವಿಧವಾ ವೇತನ ಆದೇಶ ಪತ್ರ-19 ಮಂದಿಗೆ, ಅಂಗವಿಕಲ ವೇತನ-12 ಮಂದಿಗೆ, ಸಂಧ್ಯಾ ಸುರಕ್ಷಾ-22 ಮಂದಿಗೆ , ಮನಸ್ವಿನಿ-ಒಬ್ಬರಿಗೆ ವಿತರಿಸಲಾಯಿತು.


Trending videos

Back to Top