CONNECT WITH US  

ಏಷ್ಯನ್‌ ಗೇಮ್ಸ್‌ನಲ್ಲಿ  ಬೆಳಗಾವಿಯ ಕುವರಿಗೆ ಕಂಚು

ಪ್ರಥಮ ಬಾರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಸೇರ್ಪಡೆಗೊಂಡ ಖುರಾಷ್‌ ಕುಸ್ತಿಯಲ್ಲಿ ಅಪೂರ್ವ ಸಾಧನೆ 

ಬೆಳಗಾವಿ: ಜಿಲ್ಲೆಯ ಪ್ರತಿಭಾವಂತ ಕುಸ್ತಿಪಟು ಮಲಪ್ರಭಾ ಯಲ್ಲಪ್ಪ ಜಾಧವ ಏಷ್ಯನ್‌ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾಳೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಯಾಗಿದ್ದ ಖುರಾಷ್‌ ಕುಸ್ತಿಯಲ್ಲಿ ಭಾರತಕ್ಕೆ ಪದಕ ಬಂದಿದ್ದು ಅದೂ ಸಹ ಬೆಳಗಾವಿಗೆ ದೊರೆತಿರುವುದು ಹೆಗ್ಗಳಿಕೆಯ ವಿಷಯವಾಗಿದೆ. ಬೆಳಗಾವಿ ತಾಲೂಕಿನ ತುರಮುರಿ ಗ್ರಾಮದ ಮಲಪ್ರಭಾ ಜಾಧವ 52 ಕೆಜಿ ಖುರಾಷ್‌ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಕುಟುಂಬದವರು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಜುಡೋ ಹಾಗೂ ಜುಡೋದ ಅವಳಿ ಸ್ವರೂಪವಾದ ಖರಾಷ್‌ ಕುಸ್ತಿಯಲ್ಲಿ ಕಠಿಣ ಅಭ್ಯಾಸ ನಡೆಸಿರುವ ಮಲಪ್ರಭಾ ಜಾಧವ ಬೆಳಗಾವಿ ಕ್ರೀಡಾ ಶಾಲೆಯ ವಿದ್ಯಾರ್ಥಿ. ಇಲ್ಲಿ ಅವರಿಗೆ ತ್ರಿವೇಣಿ ಹಾಗೂ ಜಿತೇಂದ್ರ ಸಿಂಗ್‌ ತರಬೇತಿ ನೀಡಿದ್ದಾರೆ. ಅರ್ಥಿಕವಾಗಿ ಸ್ಥಿತಿವಂತವಲ್ಲದಿದ್ದರೂ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂಬ ಮಹದಾಸೆ ಹೊಂದಿದ್ದ ಮಲಪ್ರಭಾ ಜಾಧವ ಆರಂಭದಲ್ಲಿ ಖೋಖೊ, ನಂತರ ಜುಡೋ ಈಗ ಖುರಾಷ್‌ ಕುಸ್ತಿಯಲ್ಲಿ ತರಬೇತಿ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತ ತಂಡಕ್ಕೆ ಆಯ್ಕೆಯಾಗಲು ಉಜ್ಬೇಕಿಸ್ತಾನದಲ್ಲಿ ಹೆಚ್ಚಿನ ತರಬೇತಿ ಸಹ ಪಡೆದುಕೊಂಡಿದ್ದ ಮಲಪ್ರಭಾ ಜಾಧವ ಅವರನ್ನು ಭಾರತ ಸರಕಾರವೇ ತರಬೇತಿಗಾಗಿ ಅಲ್ಲಿಗೆ ಕಳಿಸಿತ್ತು.

ಗ್ರಾಮದ ಹೆಮ್ಮೆಯ ಪುತ್ರಿಯ ಸಾಧನೆಗೆ ತುರಮರಿಯಲ್ಲಿ ಸಂತಸದ ಹೊನಲು ಹರಿದಿದ್ದು, ಗ್ರಾಮಸ್ಥರು ಪಟಾಕಿ ಹಾರಿಸಿ ಸಿಹಿ ಹಂಚಿದ್ದಾರೆ. ಸತತ ಪರಿಶ್ರಮದ ಮೂಲಕ ಮಲಪ್ರಭಾ ಈ ಮೊದಲು ಖುರಾಷ್‌ ಕುಸ್ತಿಯಲ್ಲಿ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದಲ್ಲದೆ ಏಷ್ಯನ್‌ ಇಂಡೋರ್‌ ಮಾರ್ಷಲ್‌ ಆರ್ಟ್ಸ್ದಲ್ಲಿ ಬೆಳ್ಳಿ ಹಾಗೂ ಏಷ್ಯನ್‌ ಜುಡೋದಲ್ಲಿ ಕಂಚಿನ ಪದಕ ಗಳಿಸಿ ಎಲ್ಲರ ಗಮನ ಸೆಳೆದಿದ್ದರು.

ಮಗಳ ಸಾಧನೆಯ ಬಗ್ಗೆ ಏನು ಮಾತನಾಡಬೇಕು ಎಂದು ಹೊಳೆಯುತ್ತಿಲ್ಲ. ಅವಳ ಕಠಿಣ ಶ್ರಮ ಹಾಗೂ ನಿರಂತರ ಅಭ್ಯಾಸ ಈ ಸಾಧನೆಗೆ ಕಾರಣವಾಗಿದೆ. ನಾವು ಪಟ್ಟ ಕಷ್ಟ ಶ್ರಮ ಸಾರ್ಥಕವಾಗಿ ಇಡೀ ದೇಶಕ್ಕೆ ಹೆಮ್ಮೆ ತರುವಂತಹ ಸಾಧನೆಯನ್ನು ನಮ್ಮ ಮಗಳು ಮಾಡಿದ್ದಾಳೆ. ಬಹಳ ಸಂತೋಷವಾಗಿದೆ ಎಂದು ಮಲಪ್ರಭಾ ತಂದೆ ಯಲ್ಲಪ್ಪ ಜಾಧವ ಹೇಳಿದರು. ಐದನೇ ತರಗತಿಯಲ್ಲಿದ್ದಾಗಲೇ ಆಟದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಳು. ನಾವೂ ಸಹ ಅವಳ ಸಾಧನೆಗೆ ಅಡ್ಡಿ ಬರಲಿಲ್ಲ. ಜುಡೋ ಕುಸ್ತಿಯ ಬಗ್ಗೆ ನಮಗೆ ತಿಳಿವಳಿಕೆ ಇಲ್ಲ. ಆದರೆ ಅವಳಿಗೆ ನಿರಾಸೆ ಮಾಡಲಿಲ್ಲ. ಹೊರಗಡೆ ಸ್ಪರ್ಧೆಗೆ ಹೋಗಲು ಹಿಂಜರಿದಿದ್ದಳು. ನಾವೇ ಧೈರ್ಯ ತುಂಬಿ ಕಳಿಸಿದ್ದೆವು. ಅದರಿಂದ ಈ ಸಾಧನೆ ಸಾಧವಾಗಿದೆ ಎಂದು ಯಲ್ಲಪ್ಪ ಜಾಧವ ಹೇಳಿದರು.

ಮಲಪ್ರಭಾ ಸಾಧನೆ ಇಡೀ ದೇಶಕ್ಕೆ ಗೌರವ ಹಾಗೂ ಕೀರ್ತಿ ತಂದುಕೊಟ್ಟಿದೆ. ಮೊದಲ ಬಾರಿಗೆ ಸೇರ್ಪಡೆಯಾದ ಸ್ಪರ್ಧೆಯಲ್ಲಿ ನಮ್ಮ ಬೆಳಗಾವಿ ಹುಡುಗಿ ಪದಕ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾಳೆ. ಅವಳ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ತ್ರಿವೇಣಿ 'ಉದಯವಾಣಿ'ಗೆ ತಿಳಿಸಿದರು.

Trending videos

Back to Top