CONNECT WITH US  

ಗಡಿ ಜಿಲ್ಲೆಯಲ್ಲಿ ತಾರತಮ್ಯದ್ದೇ ಅಸಮಾಧಾನ 

ಕಚೇರಿ ಸ್ಥಳಾಂತರ ಬದಲು ಇದ್ದ ಕಚೇರಿಗಳೇ ಎತ್ತಂಗಡಿ, ಆಯುಷ್‌ ಘಟಕ ಸ್ಥಾಪನೆ ನಿರ್ಣಯ ರದ್ದು 

ಬೆಳಗಾವಿ: ಸಾಕಷ್ಟು ನಿರೀಕ್ಷೆಗಳ ಮಧ್ಯೆ ಅಧಿಕಾರ ರಚನೆ ಮಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಈಗ 100 ದಿನಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ಸರಕಾರದಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿವೆ. ಅಭಿವೃದ್ಧಿಯ ಬದಲು ತಾರತಮ್ಯ ಧೋರಣೆ ಮಾಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ಹೆದ್ದಾರಿ ಆಭಿವೃದ್ಧಿ ಯೋಜನೆ (ಕೆಶಿಪ್‌) ಕಚೇರಿಗಳು ಸಿಬ್ಬಂದಿ ಸಮೇತ ಹಾಸನಕ್ಕೆ ಸ್ಥಳಾಂತರ, ಆಯುಷ್‌ ಔಷಧಿ ತಯಾರಿಕಾ ಘಟಕ ಸ್ಥಾಪನೆ ನಿರ್ಣಯ ರದ್ದು ಈ ಸಮ್ಮಿಶ್ರ ಸರ್ಕಾರದ 100 ದಿನಗಳ ಅಡಳಿತದಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ಸಿಕ್ಕ ದೊಡ್ಡ ಕಾಣಿಕೆಗಳು. ಈ ಕಚೇರಿಗಳು ಬೆಳಗಾವಿಯಿಂದ ಸ್ಥಳಾಂತರವಾದಾಗ ಕೆಲ ಕನ್ನಡ ಸಂಘಟನೆಗಳು ಹೋರಾಟ ಮಾಡಿದವು. ಪ್ರತ್ಯೇಕ ರಾಜ್ಯದ ಬೇಡಿಕೆ ಕೇಳಿಬಂತು. ಆದರೆ ಸಂಘಟನೆಗಳಿಂದ ಬಂದಷ್ಟು ಒತ್ತಡ, ಹೋರಾಟ ಈ ಭಾಗದ ಜನಪ್ರತಿನಿಧಿಗಳಿಂದ ಕಾಣಲೇ ಇಲ್ಲ. ಶಾಸಕರೂ ಸರಕಾರದ ಮೇಲೆ ಒತ್ತಡ ಹಾಕುವ ಕಾರ್ಯ ಮಾಡಲಿಲ್ಲ. ಇದರಿಂದಾಗಿ ಇವತ್ತಿನವರೆಗೂ ಸರಕಾರ ಕಚೇರಿಗಳ ಸ್ಥಳಾಂತರದ ಬಗ್ಗೆ ತನ್ನ ನಿರ್ಧಾರ ಪ್ರಕಟ ಮಾಡಿಲ್ಲ.

ಸುವರ್ಣ ವಿಧಾನಸೌಧಕ್ಕೆ ಸರಕಾರದ ಪ್ರಮುಖ ಕಚೇರಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಮಠಾಧೀಶರು ಸುವರ್ಣ ವಿಧಾನಸೌಧದ ಬಳಿ ಹೋರಾಟ ಮಾಡಿದರು. ಇದರಿಂದ ಎಚ್ಚೆತ್ತುಕೊಂಡ ಸಿಎಂ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಪ್ರಕಟಿಸಿದರು. ಆದರೆ ಇದಾಗಿ ಒಂದು ತಿಂಗಳು ಕಳೆದರೂ ಕಚೇರಿಗಳ ಸ್ಥಳಾಂತರದ ಪ್ರಸ್ತಾವನೆ ಹೆಚ್ಚಿನ ಪ್ರಗತಿ ಕಂಡಿಲ್ಲ. ಮುಖ್ಯಮಂತ್ರಿಯಾದ ನಂತರ ಸುವರ್ಣ ವಿಧಾನಸೌಧದಲ್ಲಿ ಈ ಭಾಗದ ಅಭಿವೃದ್ಧಿಯ ಕುರಿತು ಸಭೆ ನಡೆಸಬೇಕು. ಕಚೇರಿಗಳ ಸ್ಥಳಾಂತರದ ಜೊತೆಗೆ ಸಚಿವ ಸಂಪುಟ ಸಭೆ ನಡೆಸಬೇಕು ಹಾಗೂ ಉತ್ತರ ಕರ್ನಾಟಕ ಪ್ರವಾಸ ಮಾಡಬೇಕು ಎಂದು ವಿವಿಧ ಸಂಘಟನೆಗಳು, ಹೋರಾಟಗಾರರು ಒತ್ತಾಯ ಮಾಡಿದ್ದರು. ಆದರೆ ಇದುವರೆಗೆ ಮುಖ್ಯಮಂತ್ರಿಯಾಗಲೀ ಅಥವಾ ಉಪ ಮುಖ್ಯಮಂತ್ರಿಗಳಾಗಲೀ ಈ ಕಡೆ ಪ್ರವಾಸ ಮಾಡಿಲ್ಲ. ಇದರಿಂದ ಗಡಿ ಭಾಗದ ಬಗ್ಗೆ ಉದಾಸೀನ ಮನೋಭಾವ ಮುಂದುವರಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸರ್ಕಾರ ಮಲಗಿದೆ: ಸರ್ಕಾರ ರಚನೆಯಾಗಿದೆಯಷ್ಟೆ. ಆದರೆ ಮಲಗಿಕೊಂಡಿದೆ. ಜನರು ನಿರೀಕ್ಷೆ ಮಾಡಿದಂತೆ ಶೇ. 10 ರಷ್ಟು ಕೆಲಸ ಸಹ ಆಗುತ್ತಿಲ್ಲ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸರ್ಕಾರ ಬಂದು ಮೂರು ತಿಂಗಳಾಯಿತು. ಆದರೆ ಒಂದಿಬ್ಬರು ಸಚಿವರನ್ನು ಬಿಟ್ಟರೆ ಉಳಿದ ಯಾವ ಸಚಿವರೂ ಈ ಕಡೆ ತಲೆಹಾಕಿಲ್ಲ. ಹೀಗಾಗಿ ಸರಕಾರ ಇರುವ ಬಗ್ಗೆಯೇ ಅನುಮಾನ ಕಾಣುತ್ತಿದೆ ಎಂಬುದು ಬಿಜೆಪಿ ಶಾಸಕರ ಅಸಮಾಧಾನ.

ಇದು ಜನಪರ ಸರಕಾರ ಎನ್ನುವುದಕ್ಕಿಂತ ಆಯಾ ಮತಕ್ಷೇತ್ರಗಳ ಮಂತ್ರಿಗಳ ಸರ್ಕಾರ ಆಗಿದೆ. ಸಚಿವರು ತಮ್ಮ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತಿಲ್ಲ. ಇನ್ನು ರಾಜ್ಯದ ಮಾತು ದೂರ ಉಳಿಯಿತು. ಬಹುತೇಕ ಸಚಿವರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಮೇಲಾಗಿ ಈ ಸರಕಾರದ ಮೇಲೆ ಯಾರ ನಿಯಂತ್ರಣ ಇದೆ ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ.

ಈ ಮೂರು ತಿಂಗಳ ಆಡಳಿತಾವಧಿಯಲ್ಲಿ ರೈತರ ಪಾಲಿಗೆ ಒಳ್ಳೆಯ ನಿರ್ಧಾರವನ್ನು ಸಮ್ಮಿಶ್ರ ಸರಕಾರ ಕೈಗೊಂಡಿದೆ. ಆದರೆ ಸರ್ಕಾರದ ನಿರ್ಣಯಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ಬರಬೇಕು. ಸಾಲಮನ್ನಾ ವಿಚಾರದಲ್ಲಿ ಈಗಲೂ ಗೊಂದಲ ಇದೆ. ಬ್ಯಾಂಕ್‌ಗಳು ಸಹಕಾರ ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಹಿಂದಿನ ಸರ್ಕಾರ ಮಾಡಿದ ಸೊಸೈಟಿಗಳ ಸಾಲ ಮನ್ನಾ ಇನ್ನೂ ಬಾಕಿ ಇದೆ. ಈ ಬಗ್ಗೆ ಗಮನಹರಿಸಬೇಕು ಎಂಬುದು ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಹೇಳಿಕೆ.

ಇನ್ನು ಜಿಲ್ಲೆಯ ವಿಷಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಸ್ಥಿರವಾದ ರಾಜಕೀಯ ಇಲ್ಲಿ ಇಲ್ಲ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದ ಕೆಲಸ ಅಳೆಯಲು ಮೂರು ತಿಂಗಳ ಕಾಲಾವಕಾಶ ಕಡಿಮೆ. ಆದರೆ ಯೋಜನೆಗಳಿಗೆ ಚಾಲನೆ ಸಿಗಬೇಕು. ಇಲ್ಲದಿದ್ದರೆ ಜನರು ಸರಕಾರದ ವಿರುದ್ಧ ಬೀದಿಗಿಳಿಯುವ ಸ್ಥಿತಿ ಬರಬಹುದು. ಈಗಾಗಲೇ ಉತ್ತರ ಕರ್ನಾಟಕ ಅದರಲ್ಲೂ ಗಡಿ ಜಿಲ್ಲೆ ಅಭಿವೃದ್ಧಿ ವಂಚಿತ ಎಂಬ ಆರೋಪ ಇದೆ. ಇದನ್ನು ಸರಕಾರ ನಿವಾರಿಸಲು ಪ್ರಯತ್ನಿಸಬೇಕು ಎಂಬುದು ಮಲ್ಲಿಕಾರ್ಜುನ ವಾಲಿ ಅಭಿಪ್ರಾಯ.

ಈ ಸಮ್ಮಿಶ್ರ ಸರಕಾರದಿಂದ ಇದುವರೆಗೆ ನಾವು ನಿರೀಕ್ಷೆ ಮಾಡಿದ ಕೆಲಸಗಳು ಆಗಿಲ್ಲ. ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಮಾಡಬೇಕು ಎಂದು ನಾವು ಧರಣಿ ಮಾಡಿದಾಗ ಮುಖ್ಯಮಂತ್ರಿಗಳು ಅದಕ್ಕೆ ಭರವಸೆ ಸಹ ನೀಡಿದ್ದರು. ಆದರೆ ಇಲ್ಲಿಗೆ ಕಚೇರಿಗಳು ಬರುವ ಬದಲು ಇಲ್ಲಿಂದ ಕಚೇರಿಗಳು ಸ್ಥಳಾಂತರವಾಗಿವೆ. ಈಗ ಸರ್ಕಾರ ರೈತರ ಸಾಲಮನ್ನಾ ಹಾಗೂ ಕೊಡಗು ಜನರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ನಿರತವಾಗಿದೆ. ಹೀಗಾಗಿ ನಾವೂ ಒತ್ತಡ ಹಾಕಿಲ್ಲ. ಈ ಕಾರ್ಯ ಮುಗಿದ ನಂತರ ಮತ್ತೆ ಸರಕಾರವನ್ನು ಒತ್ತಾಯ ಮಾಡುತ್ತೇವೆ ಎಂದು ನಾಗನೂರು ಡಾ| ಸಿದ್ಧರಾಮ ಸ್ವಾಮೀಜಿ ಹೇಳುತ್ತಾರೆ.

ಸಾಲಮನ್ನಾ ಐತಿಹಾಸಿಕ ನಿರ್ಧಾರ
ಸರ್ಕಾರ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಮಾತ್ರ ಆಗಿದೆ. ಸರಿಯಾಗಿ ಕೆಲಸ ಮಾಡುತ್ತದೆಯೋ ಇಲ್ಲವೋ ಎಂಬುದನ್ನು ನೋಡಲು ಇನ್ನೂ ಕಾಲಾವಕಾಶ ಬೇಕು. ಆದರೆ ಈಗ ನಮ್ಮ ಎಲ್ಲ ಕೆಲಸಗಳು ಆಗುತ್ತಿವೆ. ರೈತರ ಸಾಲಮನ್ನಾ ಐತಿಹಾಸಿಕ ನಿರ್ಧಾರ. ಸರಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು.
ಮಹೇಶ ಕುಮಟಳ್ಳಿ ಅಥಣಿ ಶಾಸಕ

ಕೇಶವ ಆದಿ

Trending videos

Back to Top