CONNECT WITH US  

ತಾರತಮ್ಯ ಮೆಟ್ಟಿ ನಿಂತ ಮಹಿಳೆಯರು: ಪ್ರೊ| ಜಯಶ್ರೀ

ಒತ್ತಡದಿಂದ ಹೊರಬರಲು ಅಧ್ಯಾತ್ಮ ಅವಶ್ಯ 

ಬೆಳಗಾವಿ: ನಗರದ ಕಾರಂಜಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಸತ್ಕರಿಸಲಾಯಿತು.

ಬೆಳಗಾವಿ: ಶಿಕ್ಷಣ ಎನ್ನುವ ಆಯುಧದಿಂದ ಮಹಿಳೆ ತನ್ನ ಸುತ್ತಲಿನ ನಿರ್ಬಂಧ ಹಾಗೂ ತಾರತಮ್ಯ ಮೆಟ್ಟಿ ನಿಂತು ಉನ್ನತ ಸ್ಥಾನಮಾನ ಪಡೆಯುತ್ತಿದ್ದಾಳೆ ಎಂದು ಪ್ರೊ| ಜಯಶ್ರೀ ಅಬ್ಬಿಗೇರಿ ಹೇಳಿದರು. ಶಿವಬಸವ ನಗರದ ಕಾರಂಜಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಆಧುನಿಕ ಮಹಿಳೆಯ ಸವಾಲುಗಳು ಕುರಿತು ಉಪನ್ಯಾಸ ನೀಡಿದ ಅವರು, ಹೆಣ್ಣು ಅಂದ್ರೆ ನಂದಾದೀಪ ಎನ್ನುವ ಕಾಲವಿತ್ತು, ಆದರೆ ಈಗ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಆಡುತ್ತಾರೆ. ಕುಟುಂಬದಲ್ಲಿ, ಸಮಾಜದಲ್ಲಿ ಎಲ್ಲಾ ನೀತಿ ನಿಯಮಗಳು, ನಿರ್ಬಂಧಗಳು ಕೇವಲ ಮಹಿಳೆಯರಿಗೆ ಮೀಸಲಾಗಿರುತ್ತವೆ. ಇದನ್ನು ಮೆಟ್ಟಿ ನಿಂತು ಉತ್ತಮ ಮಹಿಳೆಯಾಗಿ ಪುರುಷರಿಗೆ ಸಮಾನಳಾಗಿ ಬೆಳೆಯುತ್ತಿದ್ದಾಳೆ ಎಂದರು.

ಭಾರತ ಉತ್ತಮ ಸಂಸ್ಕೃತಿಗೆ ಪ್ರಸಿದ್ಧಿ ಹೊಂದಿದೆ. ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿ ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಉಮಾ ಸಾಲಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ಬಾರಿ ಮಹಿಳೆಯೇ ಮಹಿಳೆಗೆ ಶತ್ರುವಾಗಿ ಪರಿಣಮಿಸುತ್ತಾಳೆ. ಜೊತೆಗೆ ಆಧುನಿಕ ಕಾಲದಲ್ಲಿ ಮಹಿಳೆ ಬಹಳಷ್ಟು ಒತ್ತಡ ಎದುರಿಸಿತ್ತಿದ್ದಾಳೆ. ಈ ಒತ್ತಡದಿಂದ ಹೊರಬರಬೇಕಾದರೆ ಅಧ್ಯಾತ್ಮ ಅವಶ್ಯಕ ಎಂದರು.

ಜ್ಯೋತಿ ಬದಾಮಿ, ಪಾರ್ವತಿ ಪಿಟಗಿ, ವಿದ್ಯಾ ಹುಂಡೇಕಾರ, ಜಯಶ್ರೀ ನಿರಾಕಾರಿ, ದೀಪಿಕಾ ಚಾಟೆ ಅವರನ್ನು ಸನ್ಮಾನಿಸಲಾಯಿತು. ಪ್ರಿಯಾಂಕಾ ಅರೆಸಿದ್ದಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾ ಹುಂಡೇಕರ ನಿರೂಪಿಸಿದರು. ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ವಿಜಯಾ ಪುಟ್ಟಿ, ಡಾ| ನಿರ್ಮಲಾ, ದೊಡ್ಡಮನಿ, ಪಾಲಿಕೆ ಸದಸ್ಯೆ ಸರಳಾ ಹೇರೇಕರ ಸೇರಿದಂತೆ ಇತರರು ಇದ್ದರು.

Trending videos

Back to Top