CONNECT WITH US  

ಮಳೆ ನಿಂತು ಹೋದ ಮೇಲೆ ಇದು.. ಧೂಳಗಾವಿ

ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ-ಧೂಳಿನದ್ದೇ ಕಾರುಬಾರು, ಸ್ಮಾರ್ಟ್‌ ಸಿಟಿ ರಸ್ತೆಗಳ ಸುಧಾರಣೆ ಯಾವಾಗ?

ಮಳೆ ಕಡಿಮೆ ಆಗುತ್ತಿದಂತೆ ನಗರದ ಬಹುತೇಕ ರಸ್ತೆಗಳು ಧೂಳುಮಯ

ಬೆಳಗಾವಿ: ಮಳೆ ಸ್ವಲ್ಪ ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆದರೆ ಸಾಕು ನಗರದ ಬಹುತೇಕ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗುತ್ತದೆ. ಮಳೆ ನಿಂತು ಹೋದ ಮೇಲೆ ಎಲ್ಲ ರಸ್ತೆಗಳೂ ಧೂಳುಮಯವಾಗುತ್ತವೆ. ಕಣ್ಣು ತೆರೆಯಲು ಸಾಧ್ಯವಾಗದಷ್ಟು ಧೂಳು ಆವರಿಸಿಕೊಳ್ಳುತ್ತದೆ. ಧೂಳಿನಿಂದಾಗಿ ಕೇವಲ ಕಣ್ಣಿಗೆ ಹಾನಿ ಮಾಡುವುದಷ್ಟೇ ಅಲ್ಲದೇ ರಸ್ತೆ ಅಪಘಾತಕ್ಕೂ ಕಾರಣವಾಗಿದೆ. 

ಕಳೆದ 15 ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾದಾಗಿನಿಂದ ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ರಸ್ತೆಗಳ ತುಂಬ ಆವರಿಸುವ ಧೂಳು ಜನರ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಳಪೆ ಮಟ್ಟದ ಕಾಮಗಾರಿಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ನಗರದ ಬಹುತೇಕ ಪ್ರಮುಖ ರಸ್ತೆಗಳ ಸ್ಥಿತಿ ಇದೇ ರೀತಿಯಾಗಿದೆ. ಗುಂಡಿಗಳಿಂದ ಅಪಘಾತ: ಮಳೆಯಿಂದಾಗಿ ಎಲ್ಲ ರಸ್ತೆಗಳೂ ಅಧೋಗತಿಗೆ ಹೋಗಿವೆ. ಎಲ್ಲಿ ನೋಡಿದರಲ್ಲಿ ಧೂಳು, ರಸ್ತೆ ಗುಂಡಿಗಳನ್ನೇ ನೋಡುವುದಾಗಿದೆ. ಧೂಳಿನಿಂದ ಕಣ್ಣು ಉಜ್ಜಿಕೊಳ್ಳುತ್ತ ಬೈಕ್‌ ಸವಾರರು ಸಂಚರಿಸುವಾಗ ಅನೇಕ ಅಪಘಾತಗಳೂ ಸಂಭವಿಸಿವೆ. ಒಂದೆಡೆ ರಸ್ತೆ ರಿಪೇರಿಯ ಕಾಟವಾದರೆ, ಇನ್ನೊಂದೆಡೆ ಧೂಳಿನ ಸಮಸ್ಯೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ಜನರ ಆರೋಪ.

ಬೆಳಗಾವಿಯ ಮಳೆ ಎಂದರೆ ಒಮ್ಮೆ ಶುರುವಾದರೆ ಕಡಿಮೆಯಾಗೋದು ವಿರಳ. ಸುಮಾರು 2-3 ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಮಳೆ ಕಡಿಮೆ ಆಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಧೂಳಿನ ಕಾರುಬಾರು ಹೆಚ್ಚಾಗಿದೆ. ಮಳೆ ಇದ್ದರೆ ಧೂಳು ಹಾರುವುದಿಲ್ಲ. ಆದರೆ ಕಡಿಮೆ ಆಯಿತೆಂದರೆ ರಸ್ತೆ ಮೇಲೆ ಎದ್ದು ನಿಲ್ಲುವ ಸಣ್ಣ ಸಣ್ಣ ಕಲ್ಲುಗಳು ಚೂರುಗಳಾಗಿ ಧೂಳಿನ ಪ್ರಮಾಣ ಮತ್ತಷ್ಟು ಹೆಚ್ಚಿಸುತ್ತವೆ.

ಬೈಕ್‌ ಸ್ಕಿಡ್‌ ಜಾಸ್ತಿ
ಮಳೆ ನಿಂತಾಗ ರಸ್ತೆಗಳ ಮೇಲಿನ ಚಿಕ್ಕ ಚಿಪ್ಪು ಕಲ್ಲುಗಳು ಎದ್ದು ನಿಲ್ಲುತ್ತವೆ. ವಾಹನಗಳು ವೇಗವಾಗಿ ಸಂಚರಿಸಿದಾಗ ರಸ್ತೆ ಪಕ್ಕ ಕಲ್ಲು ಚಿಪ್ಪುಗಳು ಬಂದು ಬೀಳುತ್ತವೆ. ಇದರಿಂದ ರಸ್ತೆ ಬದಿಯಿಂದ ವಾಹನಗಳು ಸಂಚರಿಸುವಾಗ ಜಾರಿ ಬೀಳುವುದು ಗ್ಯಾರಂಟಿ. ಹೀಗೆ ಅನೇಕ ಬೈಕ್‌ ಸವಾರರು ಸ್ಕಿಡ್‌ ಆಗಿ ಬಿದ್ದು ಕೈ-ಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ.

ಎಲ್ಲೆಲ್ಲಿ ಗುಂಡಿ ?
ಕಾಲೇಜು ರಸ್ತೆಯಿಂದ ಸಾಗುವ ಬೋಗಾರ್‌ವೇಸ್‌, ಕ್ಯಾಂಪ್‌ ಮಾರ್ಗ, ಕಾಂಗ್ರೆಸ್‌ ರಸ್ತೆ, ಉದ್ಯಮಭಾಗವರೆಗೂ ಸಾಗುವ ರಸ್ತೆ, ನಗರ ಮಧ್ಯಭಾಗದ ಟಿಳಕ ಚೌಕ್‌, ಮಹಾತ್ಮಾ ಫುಲೆ ರಸ್ತೆ, ರಾಮಲಿಂಗ ಖೀಂಡ ಗಲ್ಲಿ, ಕೋನವಾಳ ಗಲ್ಲಿ, ಪಿ.ಬಿ. ರೋಡ್‌, ಮಹಾದ್ವಾರ ರೋಡ್‌, ಶನಿ ಮಂದಿರ ರಸ್ತೆ, ಹೇಮು ಕಲಾನಿ ಚೌಕ್‌, ಕೋರ್ಟ್‌ ರಸ್ತೆ, ರಾಣಿ ಚನ್ನಮ್ಮ ವೃತ್ತ, ಕ್ಲಬ್‌ ರಸ್ತೆ, ಆರ್‌ಟಿಒ ಸರ್ಕಲ್‌, ಬಾಕ್ಸೈಟ್‌ ರೋಡ್‌ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಸಂಚರಿಸುವ ಜನ ಧೂಳು ಹಾಗೂ ಗುಂಡಿಗಳಿಂದ ಬೇಸತ್ತಿದ್ದಾರೆ. 

ರಸ್ತೆ ಮೇಲಿನ ವಿಪರೀತ ಧೂಳಿನಿಂದ ಕಣ್ಣಿನ ಇಂಪೆಕ್ಶನ್‌ ಆಗುವ ಸಾಧ್ಯತೆ ಇದೆ. ಧೂಳು ಹೆಚ್ಚಾದಂತೆ ಕಣ್ಣಿನ
ವೈರಲ್‌ ಹಾಗೂ ಬ್ಯಾಕ್ಟಿರಿಯಲ್‌ ಇಂಪೆಕ್ಶನ್‌ ಕೂಡ ಆಗುತ್ತದೆ. ಮಳೆ ಕಡಿಮೆಯಾದಾಗ ರಸ್ತೆಗಳ ಮೇಲೆ ಹೆಚ್ಚಿನ ಧೂಳು ಕಂಡು ಬರುತ್ತದೆ. ಹೀಗಾಗಿ ಇಂಥ ಧೂಳಿನಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್‌ ಹಾಗೂ ಕನ್ನಡಕ ಬಳಸಬೇಕಾದ ಅಗತ್ಯವಿದೆ.
 ಡಾ| ಅಲ್ಫೇಶ್‌ ಟೋಪ್ರಾಣಿ,
ವೈದ್ಯರು, ನೇತ್ರದರ್ಶನ ಕಣ್ಣಿನ ಆಸ್ಪತ್ರೆ

ಬೆಳಗಾವಿ ಈಗ ಸ್ಮಾರ್ಟ್‌ ಸಿಟಿಯತ್ತ ದಾಪುಗಾಲು ಹಾಕುತ್ತಿದೆ. ಆದರೆ ಈ ಹೆಸರಿಗೆ ತಕ್ಕಂತೆ ರಸ್ತೆಗಳು ಆಗದಿರುವುದೇ ಬೇಸರ ತಂದಿದೆ. ಸ್ಮಾರ್ಟ್‌ ಸಿಟಿ ಎಂದರೆ ಕಳಪೆ ಮಟ್ಟದ ರಸ್ತೆಗಳು ಇರದೇ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಬೇಕು. ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾದರೆ ಇಂಥ ಧೂಳು-ಗುಂಡಿಗಳಿಂದ ಮುಕ್ತಿ ಪಡೆಯಬಹುದಾಗಿದೆ. 
. ಮುನಿರಾಜ ಜೈನ, ಸ್ಥಳೀಯ ನಿವಾಸಿ

ನಾವು ನಿತ್ಯವೂ ಬೈಕ್‌ ಮೇಲೆ ಸಂಚರಿಸುತ್ತೇವೆ. ಧೂಳಿನಿಂದ ಕಣ್ಣಿಗೆ ಸಮಸ್ಯೆಯಾಗುತ್ತಿದೆ. ಮಳೆ ನಿಂತ ಮೇಲೆ ಧೂಳು ಬರುವುದು ಸಹಜ. ಧೂಳು ಹಾರುವುದರಿಂದ ರೋಗ-ರುಜಿನಗಳು ಬರುತ್ತವೆ. ಮಳೆ ನಿಂತಾಗ ರಸ್ತೆ ಮಾಡುವುದಾಗಿ ಪಾಲಿಕೆ ಹೇಳಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
. ರಾಜೇಶ ಎಂ. ಗೌಡ,
  ವ್ಯಾಪಾರಿ

ಭೈರೋಬಾ ಕಾಂಬಳೆ 


Trending videos

Back to Top