CONNECT WITH US  

ಪರಿಸರ ರಕ್ಷಿಸಿ ಜೀವರಾಶಿ ಉಳಿಸಿ

ವಿದ್ಯಾರ್ಥಿಗಳಿಗೆ 5000 ಸಸಿ ವಿತರಣೆ, ಜಾಗೃತಿ ಮೂಡಿಸಲು ಸಲಹೆ

ಅಥಣಿ: ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ನಿಮಿತ್ತ ಹಸಿರು ಕರ್ನಾಟಕ ಕಾರ್ಯಕ್ರಮದಡಿ 5000 ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಸಮಾರಂಭ ಜರುಗಿತು.

ಅಥಣಿ: ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಕೈ ಜೋಡಿಸಿ ಹಸಿರು ವಾತಾವರಣ ನಿರ್ಮಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಡಾ| ಎಸ್‌.ಬಿ. ಹೊಸಮನಿ ಹೇಳಿದರು. ಭೋಜರಾಜ ಕ್ರೀಡಾಂಗಣದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಘಟಪ್ರಭಾ ವಿಭಾಗ, ಗೋಕಾಕ ಪ್ರಾದೇಶಿಕ ವಲಯ ಅಥಣಿ ಸಹಭಾಗಿತ್ವದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆಯ ನಿಮಿತ್ತ ರಾಜ್ಯ ಸರ್ಕಾರದ ಹಸಿರು ಕರ್ನಾಟಕ ಕಾರ್ಯಕ್ರಮದಡಿ 5000 ವಿದ್ಯಾರ್ಥಿಗಳಿಗೆ ಉಚಿತ ಸಸಿ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡಿ ಇಡಿ ಮನುಕುಲಕ್ಕೆ ಕಂಟಕವಾಗಿದ್ದಾನೆ. ಇದರಿಂದಾಗಿ ಮಾನವ ಮತ್ತು ಪರಿಸರದ ನಡುವೆ ಯುದ್ಧ ನಡೆದಿದೆ. ಇದನ್ನು ತಪ್ಪಿಸಲು ಇಂದಿನ ಯುವ ಪೀಳಿಗೆಯೊಂದಿಗೆ ಹಿರಿಯ ತಲೆಮಾರಿನವರು ಕೈ ಜೋಡಿಸುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವ ಕುರಿತು ಚಿಂತನೆ ಮಾಡಬೇಕಾಗಿದೆ. ಆದ್ದರಿಂದ ಗಿಡಮರಗಳನ್ನು ನಾಶ ಮಾಡದೆ ಅವುಗಳನ್ನು ಸಂರಕ್ಷಿಸಿ ಜೀವರಾಶಿಯನ್ನು ಉಳಿಸೋಣ ಎಂದರು.

ಬೆಳಗಾವಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ. ಕರುಣಾಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಸಿರು ಕರ್ನಾಟಕ ಎಂಬ ಧ್ಯೇಯದೊಂದಿಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಿದ್ದೇವೆ. ಮನುಷ್ಯನು ದುರಾಸೆಯಿಂದ ತನ್ನನ್ನು ತಾನು ಸಂಕಷ್ಟಕ್ಕೀಡು ಮಾಡಿಕೊಳ್ಳುತ್ತಿದ್ದಾನೆ. ಅದಕ್ಕೆ ಉದಾಹರಣೆಯಾಗಿ ಕೊಡಗಿನಲ್ಲಿ ಆದ ಘಟನೆಯೆ ಸಾಕ್ಷಿ. ಆದ್ದರಿಂದ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದರು.

ಜೆ.ಇ. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಅರವಿಂದ ದೇಶಪಾಂಡೆ ಮಾತನಾಡಿ, ಪರಿಸರದ ಜಾಗೃತಿ ಶಾಲಾ ಮಕ್ಕಳಲ್ಲಿ ಅವಶ್ಯವಾಗಿದೆ. ಸಸಿ ವಿತರಣಾ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹಸಿರು ಧ್ವಜವನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿಶೇಷ ಆಹ್ವಾನಿತರಾಗಿ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಪರಿಸರ ತಜ್ಞ ಅನಂತ ಹೆಗಡೆ ಆಶಿಸರ ಆಗಮಿಸಿದ್ದರು. ಈ ವೇಳೆ ಡಾ| ರಾಮ ಕುಲಕರ್ಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ, ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಸತೀಶ ಕುಲಕರ್ಣಿ, ಅನಿಲ ದೇಶಪಾಂಡೆ, ಆರ್‌.ಎಂ.ದೇವರಡ್ಡಿ ಸೇರಿದಂತೆ ಇತರರು ಇದ್ದರು. ಸಾಹಿತಿ ವಾಮನ ಕುಲಕರ್ಣಿ ನಿರೂಪಿಸಿ, ವಂದಿಸಿದರು.


Trending videos

Back to Top