CONNECT WITH US  

ಜಾತಿ-ಕುಲ ನೋಡಿ ವಿದ್ಯೆಲಭಿಸೋಲ್ಲ

ಹೂವಿನಹಡಗಲಿ: ಜಾತಿ, ಕುಲ ನೋಡಿ ಯಾವುದೇ ವಿದ್ಯೆ ಲಭಿಸುವುದಿಲ್ಲ. ಬದಲಾಗಿ ಸತತ ಅಧ್ಯಯನದಿಂದ ಮಾತ್ರ ವಿದ್ಯೆ, ಜ್ಞಾನ ಲಭಿಸಲಿದೆ. ಅಂತಹ ಸಾಧನೆಯನ್ನು ನಮ್ಮ ಇಂದಿನ ವಿದ್ಯಾರ್ಥಿಗಳು ಮಾಡಬೇಕಾಗಿದೆ ಎಂದು ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಜ್ಜಯ್ಯ ಸ್ವಾಮೀಜಿ ಮಕ್ಕಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ರಂಗಭಾರತಿ ಮಂದಿರದಲ್ಲಿ ಬುಧವಾರ ರಾತ್ರಿ ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನ, ರಂಗಭಾರತಿ, ಎಂ.ಪಿ. ಪ್ರಕಾಶ್‌ ಸಮಾಜಮುಖೀ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ "ಎಂ.ಪಿ.ಪ್ರಕಾಶ್‌ ಸಮಾಜ ಸೇವಾ ಸಿರಿ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
 
"ಮ.ಮ.ಪಾಟೀಲ್‌ ಜನಸೇವಕ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಕಲುಬುರ್ಗಿಯ ನೀಲಾ, ಪ್ರಸ್ತುತ ರಾಜಕಾರಣಿಗಳು ಸೂಕ್ಷ್ಮಸಂವೇದನಶೀಲತೆ ಹೊಂದಬೇಕಾಗಿದೆ. ಸಮಾಜದಲ್ಲಿ ಎಲ್ಲರೂ ಉತ್ತಮ ಜೀವನ ನಡೆಸುವಂತಹ ಸಮಾಜ ನಿರ್ಮಾಣವಾಗಬೇಕು.

ಆ ನಿಟ್ಟಿನಲ್ಲಿ ನಮ್ಮ ರಾಜಕಾರಣಿಗಳು ಕೆಲಸ ಮಾಡಬೇಕು. ವಚನ ಚಳವಳಿಯ ಉದ್ದೇಶ ಕಲ್ಯಾಣ ರಾಜ್ಯ ನಿರ್ಮಾಣ ಮಾಡುವುದಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕೆಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ, ಪ್ರಸ್ತುತ ಸಮಾಜದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ದಿ| ಎಂ.ಪಿ. ಪ್ರಕಾಶ್‌ರವರು ಸದಾ ಸಮಾಜಮುಖೀಯಾಗಿ ಕೆಲಸ ಮಾಡಿದವರು ಎಂದು ಹೇಳಿದರು. 

ಇಂದಿನ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಯುವ ಪೀಳಿಗೆಯನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ. ವಿನಾಕಾರಣ ಕಾಲ ಕಳೆಯುವುದು ಸಲ್ಲದು. ಆ ನಿಟ್ಟಿನಲ್ಲಿ ಎಂ.ಪಿ.ಪ್ರಕಾಶ್‌ರವರು ಯಾವತ್ತೂ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರಲಿಲ್ಲ.  ಏನಾದರೂ ಒಂದು ಪ್ರಗತಿದಾಯಕ ಕೆಲಸಗಳನ್ನು ಮಾಡುತ್ತಿದ್ದರು. ಸದನದಲ್ಲಿ ವಿರೋಧ ಪಕ್ಷದವರು ಯಾವುದೇ ಇಲಾಖೆಯ ಪ್ರಶ್ನೆಗಳನ್ನು ಕೇಳಿದರೂ ಸಹ ಅವರು ತಕ್ಷಣ ಉತ್ತರ ಕೊಡುತ್ತಿದ್ದರು. ಆದರೆ ಇಂದಿನ ಬಹುತೇಕ ರಾಜಕಾರಣಿಗಳಿಗೆ ಪೇಪರ್‌ ನಲ್ಲಿ ಬರೆದುಕೊಂಡಿರುವುದನ್ನು ಬಿಟ್ಟು ಬೇರೆ ಮಾತನಾಡಲು ಆಗದಿರುವುದು ವಿಪರ್ಯಾಸವಾಗಿದೆ ಎಂದರು.

ಇನ್ನು ರಾಜಕೀಯವಾಗಿ ಪ್ರಕಾಶ್‌ರವರು ರಾಯಭಾರಿ ಕೆಲಸ ಮಾಡಿದವರು. ಅವರನ್ನು ಮಾತಿನಲ್ಲಿ ಸೋಲಿಸುವುದು ಬೇರೆಯವರಿಗೆ ಕಷ್ಟವಾಗುತ್ತಿತ್ತು. ನನ್ನನ್ನು ಹಾಗೂ ಮಹದೇವ್‌ ಪ್ರಸಾದ್‌ ಅವರನ್ನು ಹೆಚ್ಚಾಗಿ ರಾಜಕಾರಣದಲ್ಲಿ ಬೆಳೆಸಿದವರು. ಶಾಸಕರು, ಮಂತ್ರಿಗಳು ಆಗುವವರೆಗೂ ಸಹಕಾರ ನೀಡಿದವರು ಎಂದು ಪ್ರಕಾಶ್‌ರವರ ರಾಜಕಾರಣದ ಸಹಕಾರ ಗುಣದ ಬಗ್ಗೆ ಶ್ಲಾಘಿಸಿದರು. 

ಇದೇ ಸಂದರ್ಭದಲ್ಲಿ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಜ್ಜಯ್ಯ ಸ್ವಾಮೀಜಿಗೆ"ಎಂ.ಪಿ.ಪ್ರಕಾಶ್‌ ಸಮಾಜ ಸೇವಾ ಸಿರಿ', ಮಣಿಪುರದ ಖ್ಯಾತ ರಂಗಕರ್ಮಿ ರನತ್‌ ಥಿಯಾಮ್‌ಗೆ "ಎಂ.ಪಿ.ಪ್ರಕಾಶ್‌ ರಾಷ್ಟ್ರೀಯ ಕಲಾಸಿರಿ', ರಂಗಭೂಮಿ-ಕಿರುತೆರೆ ನಟ ಕೆ.ವಿ.ನಾಗರಾಜಮೂರ್ತಿಗೆ "ಎಂ.ಪಿ.ಕೊಟ್ರಗೌಡ ಕಲಾರಾಧಕ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಲ್ಲದೇ, ಹತ್ತು ಜನ ಕ್ಯಾನ್ಸರ್‌ ಪೀಡಿತ ರೋಗಿಗಳಿಗೆ 25 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಯಿತು. 

ಗದಗ-ಡಂಬಳ ಎಡಯೂರು ಸಂಸ್ಥಾನ ಮಠದ ಡಾ| ತೋಂಟದ ಸಿದ್ದಲಿಂಗಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಸೊಪ್ಪಿನ ಬಾಳಪ್ಪ, ಹಿರಿಯ ರಂಗಕರ್ಮಿ ಶ್ರೀನಿವಾಸ್‌ ಜಿ.ಕಪ್ಪಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ಐ.ಎಂ. ವಿಠಲ್‌ವುೂರ್ತಿ, ಎಂ.ಪಿ. ರುದ್ರಾಂಬ ಪ್ರಕಾಶ್‌, ಸಮಾಜಮುಖೀ ಪ್ರತಿಷ್ಠಾನದ ಎಂ.ಪಿ.ವೀಣಾ, ಸುಮಾ, ಪ್ರೊ| ಶಾಂತಮೂರ್ತಿ ಬಿ. ಕುಲಕರ್ಣಿ, ಶ್ರೀಲತಾ, ದ್ವಾರಕೀಶ್‌ರೆಡ್ಡಿ ಇನ್ನಿತರರಿದ್ದರು. 

ಇಂದಿನ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಯುವ ಪೀಳಿಗೆಯನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ. ವಿನಾಕಾರಣ ಕಾಲ ಕಳೆಯುವುದು ಸಲ್ಲದು. ಆ ನಿಟ್ಟಿನಲ್ಲಿ ಎಂ.ಪಿ.ಪ್ರಕಾಶ್‌ ರವರು ಯಾವತ್ತೂ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರಲಿಲ್ಲ. ಏನಾದರೂ ಒಂದು ಪ್ರಗತಿದಾಯಕ ಕೆಲಸಗಳನ್ನು ಮಾಡುತ್ತಿದ್ದರು.
 ಅಮರೇಗೌಡ ಬಯ್ನಾಪುರ, ಕುಷ್ಟಗಿ ಶಾಸಕರು.

Trending videos

Back to Top