CONNECT WITH US  

2220 ಹೆಕೆ 2220 ಹೆಕ್ಟೇರ್‌ ಜಮೀನು ಜಲಾವೃತ

ಕಂಪ್ಲಿ: ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಲಕ್ಷಾಂತರ ಕ್ಯೂಸೆಕ್‌ ನೀರನ್ನು ಬಿಡುತ್ತಿರುವುದರಿಂದ ನದಿತೀರದ ಮೂರು ತಾಲೂಕುಗಳಲ್ಲಿ ಸುಮಾರು 2,220 ಹೆಕ್ಟೇರ್‌ ಜಮೀನು ಜಲಾವೃತಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ, ಕೋಟೆಯ ಮೀನುಗಾರರ ಕಾಲೋನಿ ಹಾಗೂ ತುಂಗಭದ್ರಾ ಪ್ರವಾಹದಿಂದ ಜಲಾವೃತಗೊಂಡ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗದಿದ್ದರೂ, ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಜಿಲ್ಲೆಯ ಹಡಗಲಿ, ಕಂಪ್ಲಿ ಮತ್ತು ಸಿರಗುಪ್ಪ ತಾಲೂಕಿನಲ್ಲಿ ಸುಮಾರು 2,220 ಹೆಕ್ಟೇರ್‌ ಜಮೀನು ಜಲಾವೃತಗೊಂಡಿದ್ದು, ರೈತರು ನಾಟಿ ಮಾಡಿದ ಭತ್ತ, ಬಾಳೆ, ಕಬ್ಬು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ ಎಂದರು.

ನದಿಯಲ್ಲಿ ಪ್ರವಾಹ ತಗ್ಗಿದ ನಂತರ ಕಂದಾಯ ಇಲಾಖೆ ಮೂಲಕ ಸಮೀಕ್ಷೆ ನಡೆಸಲಾಗುವುದು. ಈಗಾಗಲೇ ಪ್ರವಾಹ ಕಡಿಮೆಯಾಗುತ್ತಿದ್ದು, ಬೆಳೆಗಳು ಹಾಳಾಗಿರುವುದಿಲ್ಲ ಎಂಬ ಆಶಾಭಾವ ಇದೆ. ಬೆಳೆಗಳು ಹಾಳಾಗಿದ್ದರೆ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಎರಡು ಜಿಲ್ಲೆಗಳ ಪ್ರಮುಖ ಸೇತುವೆಯಾಗಿದ್ದು, ಬಹುತೇಕ ಶಿಥಿಲಗೊಂಡಿದೆ. ಇದೀಗ ನದಿ ಪ್ರವಾಹದಿಂದ ಸೇತುವೆಯ ರಕ್ಷಣಾ ಕಂಬಗಳು ಮುರಿದು ಬಿದ್ದಿವೆ. ಈ ಸೇತುವೆ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರಲಿದ್ದು, ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೇತುವೆ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಎರಡೂ ಜಿಲ್ಲೆಗಳ ಶಾಸಕರೊಂದಿಗೆ ಹಾಗೂ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋಟೆಯ ಮೀನುಗಾರರ ಕಾಲೋನಿಗೆ ಪ್ರತಿವರ್ಷ ಪ್ರವಾಹ ಬಂದಾಗಲೆಲ್ಲ ನೀರು ಹೋಗುತ್ತಿರುವುದರಿಂದ ಸಮಗ್ರವಾಗಿ ಸಮೀಕ್ಷೆ ನಡೆಸಿ, ಅಲ್ಲಿ ಕಾಲೋನಿಯಲ್ಲಿ ವಾಸಿಸುವವರಿಂದ 94 ಸಿಸಿ ಅರ್ಜಿ ಪಡೆದು ಶಾಶ್ವತ ವಸತಿ ಕಲ್ಪಿಸಲು ತೀರ್ಮಾನಿಸಲಾಗಿದೆ. ಸಮಗ್ರ ಸಮೀಕ್ಷೆ ನಡೆಸುವಂತೆ ಕಂಪ್ಲಿ ತಹಶೀಲ್ದಾರ್‌ ಅವರಿಗೆ ಸೂಚಿಸಿದರು. ಪುರಸಭೆ ಅಧ್ಯಕ್ಷ ಎಂ. ಸುಧೀರ್‌, ತಹಶೀಲ್ದಾರ್‌ ಎಂ.ರೇಣುಕಾ, ಹಿರಿಯ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ಪುರಸಭೆ ಸದಸ್ಯರಾದ ಬಟ್ಟ ಪ್ರಸಾದ್‌, ಮರೆಣ್ಣ, ಗೆಜ್ಜೆಳ್ಳಿ ಭಾಷಾ, ಮುಖಂಡರಾದ ಕೆ.ಎಸ್‌. ಚಾಂದ್‌ಭಾಷಾ, ಬಿ. ರವೀಂದ್ರಕುಮಾರ್‌, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಾಮದೇವ ಕೊಳ್ಳಿ, ವಿವಿಧ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪರ್ಯಾಯ ಬೆಳೆ ಬೆಳೆಯಿರಿ 
ಕಂಪ್ಲಿ: ತಾಲೂಕಿನಲ್ಲಿ ಉತ್ತಮ ನೀರಿನ ಸೌಲಭ್ಯಗಳಿದ್ದು, ರೈತರು ಕೇವಲ ಬಾಳೆ ಹಾಗೂ ಭತ್ತ ಬೆಳೆಯದೇ ಪರ್ಯಾಯ ಬೆಳೆ ಬೆಳೆಯಬೇಕು. ತೋಟಗಾರಿಕೆ ಬೆಳೆ ಬೆಳೆಯುವತ್ತ ಗಮನ ಹರಿಸಬೇಕು ಜಿಲ್ಲಾ ಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಂಜೂರ ಮತ್ತು ದಾಳಿಂಬೆ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳಲಾಗಿದೆ. ಶಾಸಕರಾದ ಜೆ.ಎನ್‌ ಗಣೇಶ್‌ ಅವರು ಕಂಪ್ಲಿಯ ಸಮಗ್ರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಇದೀಗ
ಕಂಪ್ಲಿ ತಾಲೂಕಿನಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ನೀಡಲಾಗುವುದು. ಗಣಿಬಾಧಿ ತ ಪ್ರದೇಶಗಳ ಅಭಿವೃದ್ದಿಗೆ ಹೊಸಪೇಟೆ ತಾಲೂಕಿಗೆ 4500 ಕೋಟಿ ರೂಗಳ ಕ್ರಿಯಾಯೋಜನೆ ತಯಾರಿಸಿ ಕಳುಹಿಸಲಾಗಿದೆ. ಇದರಲ್ಲಿ ಹೊಸಪೇಟೆ, ಕಂಪ್ಲಿ ಮತ್ತು ಮರಿಯಮ್ಮನಹಳ್ಳಿಗಳನ್ನು
ಸೇರಿಸಲಾಗಿದ್ದು, ಕಂಪ್ಲಿ ತಾಲೂಕಿಗೆ 400 ರಿಂದ 500 ಕೋಟಿ ರೂ. ಬರುವ ನಿರೀಕ್ಷೆ ಇದೆ ಎಂದರು. ಕಳೆದ ವರ್ಷ ನಿರ್ಮಿಸಿದ ಬುಕ್ಕಸಾಗರ ಕಡೇಬಾಗಿಲು ಸೇತುವೆ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳೆದ ಮೇ ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದರು.

Trending videos

Back to Top