CONNECT WITH US  

ವಿವಿಧ ಸಂಘಟನೆಗಳಿಂದ ದೇಣಿಗೆ ಸಂಗ್ರಹ

ಬಳ್ಳಾರಿ: ಕೊಡಗಿನ ನೆರೆ ಸಂತ್ರಸ್ತರಿಗಾಗಿ ನಗರದಲ್ಲಿ ದೇಣಿಗೆ ಸಂಗ್ರಹಿಸಿದ ಕ್ರೈಂ ಕಂಟ್ರೋಲ್‌ ಅಂಡ್‌ ರೀಸರ್ಚ್‌ ಆರ್ಗನೈಜೇನ್‌ ಸಂಘಟನೆಯು, ಆಹಾರ ಪದಾರ್ಥ ಸೇರಿದಂತೆ ದಿನಬಳಕೆ ವಸ್ತುಗಳನ್ನು ಗೃಹ ರಕ್ಷಕದಳದ ಕಚೇರಿ ಅಧಿಕಾರಿಗಳ ಮೂಲಕ ಮಡಿಕೇರಿಗೆ ರವಾನಿಸಲಾಯಿತು.

ಇಲ್ಲಿನ ದೇವಿನಗರ, ಬಸವನಕುಂಟೆ, ಶಾಸ್ತ್ರಿನಗರ ಪ್ರದೇಶಗಳಲ್ಲಿ ಕಾಲ್ನಡಿಗೆ ಮೂಲಕ ಮನೆ ಮನೆಗೆ ತೆರಳಿದ ಆರ್ಗನೈಜೇಷನ್‌ ಸದಸ್ಯರು, ಸ್ಥಳೀಯ ನಿವಾಸಿಗಳಿಂದ ಅಕ್ಕಿ, ಬೇಳೆ, ಬ್ಲಾಂಕೆಟ್ಸ್‌, ಬಿಸ್ಕಟ್ಸ್‌, ಟೂತ್‌ಬ್ರಷ್‌, ಪೇಸ್ಟ್‌, ಸಾಬೂನು, ಕೊಬ್ಬರಿ ಎಣ್ಣೆ, ಮೇಣದಬತ್ತಿ, ಸ್ತ್ರೀ-ಪುರುಷರ ಮತ್ತು ಮಕ್ಕಳ ವಸ್ತ್ರಗಳನ್ನು ಸಂಗ್ರಹಿಸಿದರು. ಈ ವೇಳೆ ಒಟ್ಟು 10 ಕ್ವಿಂಟಲ್‌ ಅಕ್ಕಿ, 1 ಕ್ವಿಂಟಲ್‌ ಬೇಳೆಯನ್ನು ಸಂಗ್ರಹಿಸಿದ ಸದಸ್ಯರು, ಈ ಎಲ್ಲ ದವಸ ಧಾನ್ಯಗಳನ್ನು ಮಡಿಕೇರಿಯಲ್ಲಿನ ನೆರೆ ಸಂತ್ರಸ್ತರಿಗೆ ರವಾನಿಸುವಂತೆ ನಗರದ ಗೃಹ ರಕ್ಷಕದಳದ ಅಧಿಕಾರಿಗಳಿಗೆ ಒಪ್ಪಿಸಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಪಿ.ಲಕ್ಷೀದೇವಿ ಶ್ರೀನಿವಾಸಲು, ಸಮಾಜ ಸೇವಕ ಪ್ರಕಾಶ್‌, ಉಮೇಶ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ ಯುವಕ ಸಂಘದ ಅಧ್ಯಕ್ಷ ಜೆ.ವಿ.ಮಂಜುನಾಥ್‌, ಡಿ.ದೊಡ್ಡನಗೌಡ, ಸುನೀಲ್‌, ಕಾರ್ತೀಕ್‌, ಚೈತನ್ಯಶ್ರೀ, ನಂದಿನಿ, ಐಶ್ವರ್ಯ, ಕೀರ್ತನ, ರಂಗ,ಧರಣೀಶ್‌ ಸೇರಿದಂತೆ ಇನ್ನಿತರರಿದ್ದರು.

ದೇಣಿಗೆ ಸಂಗ್ರಹಿಸಿದ ಹಗಲುವೇಷ ಕಲಾವಿದರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ತತ್ತರಿಸಿರುವ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಿರುವ ಹಗಲುವೇಷ ಕಲಾವಿದರು, ನಗರದ ವಿವಿಧೆಡೆ ದೇಣಿಗೆ ಸಂಗ್ರಹಿಸಿದರು. ಹಳೆದರೋಜಿಯ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌, ಶ್ರೀಅಶ್ವರಾಮಣ್ಣ ಹಗಲುವೇಷ ಕಲಾಸಂಘ, ಕಂಪ್ಲಿಯ ಜಿಲ್ಲಾ ಹಕ್ಕಿಪಿಕ್ಕಿ ಅಭಿವೃದ್ದಿ ಸಂಘ, ಶ್ರೀಭೀಮಾಂಬಿಕಾ ನಾಟಕ ಕಲಾಸಂಘದ ಕಲಾವಿದರು ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಪರಿಹಾರ ನಿಧಿ ಸಂಗ್ರಹಿಸಲು ಆರಂಭಿಸಿದರು. ಈ ವೇಳೆ ರಾಮಲಕ್ಷ್ಮಣ, ಶೂರ್ಪಣಕಿ, ಸುಂದ, ಉಪಸುಂದ, ಆಂಜನೆಯ, ಭೀಮಸೇನ ಸೇರಿದಂತೆ ವಿವಿಧ ವೇಷಗಳನ್ನು ಧರಿಸಿದ್ದ ಸುಮಾರು 20ಕ್ಕೂ ಹೆಚ್ಚು ಕಲಾವಿದರು, ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೇಣಿಗೆ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಟ್ಟರು.

Trending videos

Back to Top