CONNECT WITH US  

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ

ಹಗರಿಬೊಮ್ಮನಹಳ್ಳಿ: ಮಕ್ಕಳ ಭವಿಷ್ಯ ಕಟ್ಟಿಕೊಳ್ಳುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಪೋಷಕರು ಸದಾ ಬೆನ್ನೆಲುಬಾಗಿರಬೇಕು. ಶಿಕ್ಷಕರು ಗುಣಮಟ್ಟದ ಬೋಧನೆಯಲ್ಲಿ ತೊಡಗಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಮೆರಗು ಬರಲು ಸಾಧ್ಯ ಎಂದು ಬಿಇಒ ಶೇಖರಪ್ಪ ಹೊರಪೇಟೆ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ರಾಜ್ಯ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ಸಂಘದಿಂದ ಎಸ್‌ಸಿ- ಎಸ್‌ಟಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮಕ್ಕಳ ಅಂಕಗಳಿಕೆ ಉತ್ತಮ ಪಡಿಸುವ ನಿಟ್ಟಿನಲ್ಲಿ ಶಿಕ್ಷಕರ ನಿರಂತರ ಶ್ರಮ ಅಗತ್ಯವಿದೆ. ಮಕ್ಕಳು ಶಿಕ್ಷಕರ ಬೋಧನೆಯನ್ನು ಸರಿಯಾಗಿ ಅರ್ಥೈಸಿಕೊಂಡು ವಿಷಯದ ಹಿಡಿತ ಸಾಧಿಸಿದಾಗ ಅಂಕಗಳಿಕೆ ಉತ್ತಮಪಡಿಸಿಕೊಳ್ಳಬಹುದು ಎಂದರು.

 ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ನಿರಂತರ ಪರಿಶ್ರಮ ಅಗತ್ಯ. ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕು ಮೊದಲ ಸ್ಥಾನ ಹೊಂದುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಬೇಕು. ಈಗಾಗಲೇ ವಿಶೇಷ ತರಗತಿಗಳ ಮೂಲಕ ಶಿಕ್ಷಕರು ಪರಿಶ್ರಮ ಪಡುತ್ತಿದು, ಶೈಕ್ಷಣಿಕ ಗುಣಮಟ್ಟ ಬಲಪಡಿಸುವ ವಿಶ್ವಾಸವಿದೆ ಎಂದು ಹೇಳಿದರು.

ತಹಶೀಲ್ದಾರ್‌ ಕೆ. ವಿಜಯಕುಮಾರ್‌ ಮಾತನಾಡಿ, ಮಕ್ಕಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ
ಕಾರ್ಯಕ್ರಮಗಳು ಪೂರಕ. ಪ್ರತಿಭೆಗಳಿಗೆ ಸೂಕ್ತ ನೆರವು ಒದಗಿಸಲು ಸಂಘ-ಸಂಸ್ಥೆಗಳು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. 

ವಿದ್ಯಾರ್ಥಿ ಮೊದಲ ಹಂತವಾದ ಎಸ್ಸೆಸ್ಸೆಲ್ಸಿಯಲ್ಲಿ ಕಠಿಣ ಶ್ರಮದೊಂದಿಗೆ ಅಂಕ ಗಳಿಕೆಯಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದರು. ಇದೇವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಶಿಕ್ಷಕ ಎಲ್‌. ಗೋವಿಂದ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಟಿ. ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಂ.ಕೆ.ದುರುಗಪ್ಪ ಉಪನ್ಯಾಸ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಎಲ್‌. ರೆಡ್ಡಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಬೋರಯ್ಯ, ಸಂಘದ ಸಲಹೆಗಾರ ಯು. ಕೃಷ್ಣನಾಯ್ಕ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಲ್‌.ಡಿ. ರವಿನಾಯ್ಕ, ಸಂಘದ ಮಹೇಶಪ್ಪ, ಪೋಮ್ಯಾನಾಯ್ಕ, ಯು. ರಾಮಕೃಷ್ಣ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಕೆ. ಮಲ್ಲಿಕಾರ್ಜುನ, ಕೆ. ಶ್ರೀನಿವಾಸ, ಎಂ. ಸ್ವಾಮಿ, ಎಚ್‌. ಕೊಟ್ರಪ್ಪ, ಕೆ. ಮಂಜಪ್ಪ, ರಾಮನಾಯ್ಕ, ನೇಮ್ಯಾನಾಯ್ಕ ಇತರರಿದ್ದರು. ಸಂಘದ ಕಾರ್ಯದರ್ಶಿ ಎನ್‌. ಸುರೇಶ್‌, ಶಿಕ್ಷಕ ನವೀನ್‌, ಹೀರ್ಯಾನಾಯ್ಕ ವಂದಿಸಿದರು.

Trending videos

Back to Top