CONNECT WITH US  

ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಸಲ್ಲ: ಎಂ.ಪಿ.ರವೀಂದ್ರ

ಹೂವಿನಹಡಗಲಿ: ಸಹಕಾರ ಸಂಘಗಳು ಸ್ವತಂತ್ರವಾಗಿದ್ದು, ಅವುಗಳಲ್ಲಿ ಯಾವುದೇ ರಾಜಕಾರಣಿಗಳ, ಜನಪ್ರತಿನಿಧಿಗಳ ಹಸ್ತಕ್ಷೇಪ ಮಾಡುವುದು ಸಣ್ಣತನವಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಪಿ.ರವೀಂದ್ರ ಹೇಳಿದರು.

ಪಟ್ಟಣದಲ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಕಾರ್ಯಕ್ರಮ ನಿಗದಿಪಡಿಸುವಲ್ಲಿ ಸಹಕಾರಿಗಳು ಸರ್ವ ಸ್ವತಂತ್ರರು. ಸರ್ಕಾರದ ಯಾವುದೇ ನೆರವಿಲ್ಲದೆ ಸ್ವಂತ ಶಕ್ತಿಯ ಮೇಲೆ ಕೆಲಸ ಮಾಡುತ್ತಿರುವ ಸಹಕಾರಿ ಸಂಘಗಳು ಸ್ವತಂತ್ರವಾಗಿರುತ್ತವೆ. ಸರ್ಕಾರ ಮೀಸಲಾತಿ ವಿಷಯದಲ್ಲಿ ಕೆಲವೊಂದು ಮೀಸಲಾತಿ ನಿಯಮ ಹೇಳಿರುತ್ತದೆ. ಅವುಗಳನ್ನು ಸಹಕಾರಿ ಸಂಘಗಳು ಪಾಲಿಸುತ್ತವೆ. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲು ಶಿಷ್ಟಾಚಾರ ಪಾಲಿಸಲು ಹೇಳುವ ಅಧಿಕಾರ ಯಾರಿಗೂ ಇರುವುದಿಲ್ಲ ಎಂದರು. 

ಸರ್ಕಾರದ ಸಾಲ ನೀತಿ ಬದಲಾಗಬೇಕಿದೆ: ಕೃಷಿ ಸಾಲ ಪಡೆದು ಪ್ರಾಮಾಣಿಕವಾಗಿ ಪಾವತಿಸುವ ರೈತರಿಗೆ ಹೆಚ್ಚಿನ ಲಾಭ ದೊರೆಯುವಂತೆ ಸರ್ಕಾರ ತನ್ನ ಸಾಲ ನೀತಿಯನ್ನು ಬದಲಾವಣೆ ಮಾಡಬೇಕು ಎಂದು ಈಗಾಗಲೇ ಸರ್ಕಾರ ಹಾಗೂ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಗವಿಮಠದ ಡಾ|ಹಿರಿಶಾಂತವೀರ ಮಹಾಸ್ವಾಮಿಗಳು, ಹಿರೇಮಲ್ಲನಕೇರಿ ಮಠದ ಶ್ರೀಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಹಕಾರ ಸಂಘಗಳು ಉಪ ನಿಬಂಧಕ ಲಿಯಾಖತ್‌ ಆಲಿ, ಪುರಸಭೆ
ಅಧ್ಯಕ್ಷೆ ಮಡಿವಾಳರ ಶಕುಂತಲಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಎಸ್‌. ಎಂ.ಲಲಿತಾಬಾಯಿ ಸೋಮ್ಯಾನಾಯ್ಕ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಹೇಮಣ್ಣ, ಉಪಾಧ್ಯಕ್ಷೆ ಉಚ್ಚಂಗೆಮ್ಮ, ಟಿಎಪಿಸಿಎಂಎಸ್‌ ಸಂಸ್ಥಾಪಕ ಅಧ್ಯಕ್ಷ ಎಂ.ಶೇಖರಪ್ಪ, ನಿರ್ದೇಶಕರು ಇದ್ದರು.

ಹಾಲಿ-ಮಾಜಿ ಶಾಸಕರ ಮುನಿಸು
ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ ಹಾಗೂ ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಬ್ಬರ ಮುನಿಸು ಟಿಎಪಿಸಿಎಂಎಸ್‌ ನೂತನ ಕಚೇರಿ ಕಟ್ಟಡ ಕಾರ್ಯಕ್ರಮದಲ್ಲಿ ಮತ್ತೂಮ್ಮೆ ಸಾಬೀತಾಯಿತು. ಇಬ್ಬರು ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡದೆ, ವೇದಿಕೆ ಹಂಚಿಕೊಳ್ಳದೆ ಹೋದರು.
ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ ಕ್ಷೇತ್ರದಲ್ಲಿ ಕೈಗೊಂಡಿದ್ದ ಅನ್ಯ ಕಾರ್ಯದ ನಿಮಿತ್ಯ ಕಾರ್ಯಕ್ರಮದಿಂದ ತೆರಳಿದರೆ, ಮಾಜಿ ಶಾಸಕ ಎಂ.ಪಿ. ರವೀಂದ್ರ ಮಾತ್ರ ವೇದಿಕೆ ಹಂಚಿಕೊಂಡರು.


Trending videos

Back to Top