ಕಂಪ್ಲಿ ಮಾರ್ಗವಾಗಿ ಬಸ್ ಓಡಿಸಲು ಆಗ್ರಹ

ಕಂಪ್ಲಿ: ಗಂಗಾವತಿಯಿಂದ ಹೊಸಪೇಟೆ, ಹೊಸಪೇಟೆಯಿಂದ ಗಂಗಾವತಿಗೆ ರಾಮಸಾಗರ ಮತ್ತು ಕಂಪ್ಲಿ ಮಾರ್ಗವಾಗಿ
ವಿವಿಧ ಘಟಕಗಳ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು, ಸರ್ಕಾರಿ
ನೌಕರರು ಹಾಗೂ ಪ್ರಯಾಣಿಕರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬುಕ್ಕಸಾಗರ ಕಡೆಬಾಗಿಲು ಸೇತುವೆ ಬಳಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಪರಿಣಾಮ ಸುಮಾರು 3 ರಿಂದ 4 ತಾಸು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತೊಂದರೆಯಾಯಿತು.
ತುಂಗಭದ್ರಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಾಗೂ ಕಂಪ್ಲಿ-ಕೋಟೆಯ ಹತ್ತಿರ ತುಂಗಭದ್ರಾ ನದಿಗೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡಿರುವುದರಿಂದ ಬಸ್‌ಗಳನ್ನು ಕಂಪ್ಲಿ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕೊಡದೇ ಕಡೆಬಾಗಿಲು ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಗಂಗಾವತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಂಗಾವತಿ ಮತ್ತು ಹೊಸಪೇಟೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳು ಬುಕ್ಕಸಾಗರ ಕಡೆಬಾಗಿಲು ಮೂಲಕ ಸಂಚರಿಸುತ್ತಿದ್ದವು.
ಇದರಿಂದ ಕಂಪ್ಲಿ ಮಾರ್ಗವಾಗಿ ಬಸ್‌ಗಳು ಬಾರದಿರುವುದರಿಂದ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ದೈನಂದಿನ ಕೆಲಸ ಕಾರ್ಯಗಳಿಗೆ ಹೊಸಪೇಟೆ, ಗಂಗಾವತಿಗೆ ತೆರಳುವವರಿಗೆ ತೀವ್ರ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರು ಹಾಗೂ ಘಟಕ ವ್ಯವಸ್ಥಾಪಕರು ರಾಮಸಾಗರ ಮತ್ತು ಕಂಪ್ಲಿ
ಮೂಲಕವೇ ಬಸ್‌ಗಳು ಸಂಚರಿಸಬೇಕೆಂದು ಆದೇಶ ನೀಡಿದರೂ ಸಹಿತ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಅಧಿಕಾರಿಗಳ ಆದೇಶ ಧಿಕ್ಕರಿಸಿ ತಮ್ಮಿಚ್ಚೆಯಂತೆ ಕಡೆಬಾಗಿಲು ಮೂಲಕ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ವಿರುದ್ಧ ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ.ರೇಣುಕಾ, ಪಿಎಸ್‌ಐ ಆರ್.ಆರ್.ನಾಯ್ಕ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಅಲ್ಲದೇ, ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕಟ್ಟುನಿಟ್ಟಾಗಿ ಎಲ್ಲಾ ಬಸ್‌ಗಳು ಕಂಪ್ಲಿ ಮಾರ್ಗವಾಗಿಯೇ ತೆರಳಬೇಕು. ತಪ್ಪಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹೊಸಪೇಟೆ ಈಶಾನ್ಯ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಎಂ.ವೆಂಕಟೇಶ್, ಹೊಸಪೇಟೆ ಬಸ್ ನಿಲ್ದಾಣದಿಂದ
ಹೊರಡುವ ಎಲ್ಲಾ ಬಸ್‌ಗಳು ರಾಮಸಾಗರ ಮತ್ತು ಕಂಪ್ಲಿ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಲಿಖೀತ ಮೂಲಕ ತಹಶೀಲ್ದಾರ್ ಎಂ.ರೇಣುಕಾ, ಪಿಎಸ್‌ಐ ಆರ್.ಆರ್.ನಾಯ್ಕ ಅವರಿಗೆ ಬರೆದುಕೊಟ್ಟ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರ ವರೆಗೂ ಪ್ರತಿಭಟನೆ ನಡೆಸಿದ್ದರಿಂದ ನೂರಾರು ವಾಹನಗಳು
ಸಾಲುಗಟ್ಟಿ ನಿಂತಿದ್ದವು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ಮತ್ತು ಸರ್ಕಾರಿ, ಖಾಸಗಿ ನೌಕರಿಗೆ ತೆರಳುವವರಿಗೆ ತೀವ್ರ ತೊಂದರೆ ಉಂಟಾಯಿತು.