CONNECT WITH US  

ನರೇಗಾ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌

ಬಳ್ಳಾರಿ: ನರೇಗಾ ಯೋಜನೆಯಡಿ ಏನೇ ಕೆಲಸ ಮಾಡಿದರೂ ತೊಂದರೆಯಿಲ್ಲ. ಅದು ನಿಧಾನವಾದರೂ ಪರವಾಗಿಲ್ಲ. ಆದರೆ, ಜಾಬ್‌ ಕಾರ್ಡ್‌ ಬಳಸದೆ ಕೆಲಸ ಮಾಡುವಂತಿಲ್ಲ. ಯಂತ್ರೋಪಕರಣ ಬಳಸುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ನರೇಗಾ ನಿಯಮ ಉಲ್ಲಂಘಿ ಸಿದಂತಾಗುತ್ತದೆ. ಅಂತಹವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ನರೇಗಾ ಯೋಜನೆಯಡಿ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ದೀರ್ಘ‌ ಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳುವಿಕೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಏನೇ ಕೆಲಸ ಮಾಡಿದರೂ, ನಿಧಾನವಾದರೂ ಪರವಾಗಿಲ್ಲ. ನರೇಗಾ ನಿಯಮ ಉಲ್ಲಂಘಿಸಬಾರದು. ಎಲ್ಲೆಲ್ಲಿ ಚೆಕ್‌ ಡ್ಯಾಂಗಳನ್ನ ನಿರ್ಮಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂಬುದನ್ನು ಈಗಾಗಲೇ ಸೆಟ್‌ಲೈಟ್‌ ಮೂಲಕ ಸರ್ವೇ ನಡೆಸಿ ಮಾಹಿತಿ ತರಿಸಿಕೊಳ್ಳಲಾಗಿದೆ. ಅಂತ ಕಡೆಗಳೆಲ್ಲೆಲ್ಲಾ ನರೇಗಾ ಯೋಜನೆಯಡಿ ಮಲ್ಟಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ನರೇಗಾ ಯೋಜನೆ ಅಡಿ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಅವಶ್ಯವಿರುವ ಹಾಗೂ ದೀರ್ಘ‌ಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನರೇಗಾ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲು ಜನಪ್ರತಿನಿಧಿಗಳು ಮುಂದಾಗಬೇಕು.

ಸರಕಾರಿ ಶಾಲೆಗಳಿಗೆ ಕಾಂಪೌಂಡ್‌, ಶೌಚಾಲಯ, ಕೈತೋಟ ಸೇರಿದಂತೆ ಖಾಸಗಿ ಶಾಲೆಗಳಲ್ಲಿರುವಂತಹ ಸೌಲಭ್ಯಗಳನ್ನು ನರೇಗಾ ಯೋಜನೆಯಡಿ ಅವಕಾಶವಿದೆ ಎಂದು ತಿಳಿಸಿದರು. ದನದ ಕೊಟ್ಟಿಗೆ,ಕುರಿದೊಡ್ಡಿಗಳ ನಿರ್ಮಾಣ,ರೈತಸಿರಿ ಅಡಿ ಸಸಿಗಳ ವಿತರಣೆ ಮತ್ತು ನಾಟಿ, ಸರಕಾರದ ಜಾಗ ಲಭ್ಯವಿರುವೆಡೆ ಸಾಮಾಜಿಕ ಅರಣ್ಯ ವಿಭಾಗದಿಂದ ಗಿಡ ನೆಡುವಿಕೆ ಸೇರಿದಂತೆ ವಿವಿಧ ರೀತಿಯ ದೀರ್ಘ‌ಕಾಲ ಬಾಳಿಕೆ ಬರುವಂತ ಆಸ್ತಿ ಸೃಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಪ್ರಸಕ್ತ ವರ್ಷ ಯೋಜನೆಯಡಿ ನೀಡಲಾಗಿರುವ ಗುರಿಗಳಲ್ಲಿ ಮಾನವ ದಿನಗಳ ಸೃಜನೆಯಲ್ಲಿ ಶೇ.54 ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆ 2ನೇ ಸ್ಥಾನದಲ್ಲಿದೆ. ನಿರ್ದಿಷ್ಟ ಸಮಯದೊಳಗೆ ಕೂಲಿ ಪಾವತಿಯಲ್ಲಿ 3ನೇ ಸ್ಥಾನದಲ್ಲಿದೆ. ಇ-ಗವರ್ನೆನ್‌ನಲ್ಲಿ ಉತ್ತಮ ಪ್ರದರ್ಶನ ಜಿಲ್ಲೆ ಪಡೆದಿದೆ.  ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ವಿಪುಲ ಅವಕಾಶಗಳಿದ್ದು, ಜನಪ್ರತಿನಿಧಿಗಳು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು. 

ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಪಂ ಸದಸ್ಯರಾದ ರಾಧಾ ಧರಪ್ಪ ನಾಯಕ್‌, ತಾಪಂ ಅಧ್ಯಕ್ಷೆ ರಮೀಜಾ ಬೀ, ಐಎಎಸ್‌ ಪ್ರೊಬೇಷನರಿ ನಂದಿನಿ, ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್‌, ಜಿಪಂ ಸದಸ್ಯರು, ವಿವಿಧ ತಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಪಂಗಳ ಅಧ್ಯಕ್ಷರು, ಜಿಲ್ಲೆಯ ನರೇಗಾ ಯೋಜನೆಯ ತಂತ್ರಾಂಶದಲ್ಲಿ ನಮೂದಾಗಿರುವ ಸಾಮಗ್ರಿ ಸರಬರಾಜುದಾರರು, ಜಿಲ್ಲಾ ಮಟ್ಟದ ಅನುಷ್ಠಾನ ಇಲಾಖಾ ಅಧಿಕಾರಿಗಳು, ತಾಪಂ ಇಒಗಳು, ಪಿಡಿಒಗಳು, ಪಂಚಾಯತ್‌ರಾಜ್‌ ಇಂಜನಿಯರಿಂಗ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ಗಳು, ಎಲ್ಲಾ ಸಂಯೋಜಕರು, ತಾಂತ್ರಿಕ ಸಹಾಯಕರು ಇದ್ದರು.

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ ಕಾರ್ಡ್‌ ಬಳಸದೆ ಗುತ್ತಿಗೆದಾರರ
ಮೂಲಕ ಕೆಲಸ ಮಾಡಿರುವುದು, ಯಂತ್ರಗಳನ್ನು ಬಳಸಿ ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡಿರುವ ಆಧಾರಗಳ
ಮೇಲೆ ಜಿಲ್ಲೆಯ 12 ಗ್ರಾಪಂ ಅಧ್ಯಕ್ಷರನ್ನು ಅನರ್ಹಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
 ಡಾ| ಕೆ.ವಿ.ರಾಜೇಂದ್ರ, ಜಿಪಂ ಸಿಇಒ 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top