CONNECT WITH US  

ಶಿಕ್ಷಣದಲ್ಲಿ ಕೊನೆ ಸ್ಥಾನದ ಹಣೆಪಟ್ಟಿ ಅಳಿಸಿ

ಬೀದರ: ಗಡಿ ಜಿಲ್ಲೆ ಬೀದರ ಶಿಕ್ಷಣ ಕ್ಷೇತ್ರದಲ್ಲಿ ಕೊನೆಯ ಸ್ಥಾನಕ್ಕೆ ಸೀಮಿತವಾಗಿದ್ದು, ಕೊನೆ ಸ್ಥಾನದ ಹಣೆಪಟ್ಟಿಯನ್ನು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಳಿಸಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಕೆಲಸ ಮಾಡಬೇಕಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.

ನಗರದ ಪಾಪನಾಶ ಕಲ್ಯಾಣ ಮಂಟಪದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದಿಂದ ಹಮ್ಮಿಕೊಂಡಿದ್ದ ಸಚಿವ ಬಂಡೆಪ್ಪ ಖಾಶೆಂಪುರ, ಶಾಸಕ ರಹೀಂ ಖಾನ್‌ ಅವರಿಗೆ ಅಭಿನಂದನೆ ಹಾಗೂ ನಿವೃತ್ತ ಶಿಕ್ಷಕ ಬಮ್ಮಶೆಟ್ಟಿ ಬಿರಾದಾರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಿಗಳು ಬದಲಾವಣೆ, ಹೊಸತನ ಹಾಗೂ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಕ್ಕೆ ಮುಂದಾಗಬೇಕು. ಅಧಿಕಾರಿಗಳ ಇಂತಹ ಕಾರ್ಯಕ್ಕೆ ಸದಾ ಸಾಥ್‌ ನೀಡುವುದಾಗಿ ಭರವಸೆ ನೀಡಿದರು.
 
ಇಂದಿನ ಶಿಕ್ಷಣ ಕೇವಲ ಅಂಕಗಳಿಗೆ, ನೌಕರಿಗೆ ಮಾತ್ರ ಸೀಮಿತವಾಗಿದ್ದು, ಶಿಕ್ಷಣದಿಂದ ಮಾನವನ ಸರ್ವೋತೊಮುಖ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೌಲ್ಯ, ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕು. ಸರ್ಕಾರಿ ಶಾಲೆಗಳ ಫಲಿತಾಂಶ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮಿರಿಸುವಂತೆ ಆಗಬೇಕು. ಜಿಲ್ಲೆಯಲ್ಲಿ ಉತ್ತಮವಾದ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬ ಶಿಕ್ಷಕರು ಕಂಕಣಬದ್ಧರಾಗಿ ಶ್ರಮಿಸಬೇಕು. ಒಬ್ಬ ಶಿಕ್ಷಕ ಇಡೀ ಸಮಾಜದ ಮನಸ್ಥಿತಿ ಬದಲಿಸುವ ಶಕ್ತಿ ಹೊಂದಿರುತ್ತಾರೆ. ಹಾಗೆ ಶಿಕ್ಷಣ ಕ್ಷೇತ್ರದಲ್ಲಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿ ಫಲಿತಾಂಶ ಸುಧಾರಣೆಗೆ ಹೆಚ್ಚು ಮಹತ್ವ ನೀಡಬೇಕು.
ಜೊತೆಯಲ್ಲಿ ಇತರೆ ವಿದ್ಯಾರ್ಥಿಗಳಿಗೂ ಕೂಡ ಗುಣಮಟ್ಟದ ಶಿಕ್ಷಣ ನೀಡಿ ಉಜ್ವಲಕ್ಕೆ ಭವಿಷ್ಯಕ್ಕೆ ಬುನಾದಿ ಹಾಕಬೇಕು ಎಂದರು.

ಸಾನಿಧ್ಯ ವಹಿಸಿದ್ದ ಗುರುಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಮಾನವ ಅಧರ್ಮ ಬಿಟ್ಟು ಧರ್ಮದ ಮಾರ್ಗದಲ್ಲಿ ನಡೆದರೆ ಬದುಕು ಸುಂದರ ಹಾಗೂ ಹಸನಾಗುತ್ತದೆ. ಶಿಕ್ಷಕರು ದೇಶದ ನಿರ್ಮಾಪಕರಾಗಿದ್ದು, ಅವರು ಮನಸ್ಸು ಮಾಡಿದರೆ ಸಮಾಜದಲ್ಲಿ ಸಮಗ್ರ ಬದಲಾವಣೆ ತರಬಹುದು. ಶಿಕ್ಷಕರು ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಆಗ ಮಾತ್ರ ಸುಂದರ ಸಮಾಜ, ದೇಶ ನಿರ್ಮಾಣವಾಗುವುದರಲ್ಲಿ ಸಂದೇಹ ಇಲ್ಲ ಎಂದು ಹೇಳಿದರು.

ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್‌ ಮಾತನಾಡಿದರು. ಇದೇ ವೇಳೆ ಸಚಿವ ಬಂಡೆಪ್ಪ ಖಾಶೆಂಪುರ, ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್‌ ಹಾಗೂ ನಿವೃತ್ತ ಶಿಕ್ಷಕ ಬಮ್ಮಶೆಟ್ಟಿ ಬಿರಾದಾರ ದಂಪತಿಗಳನ್ನು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ರಮೇಶ ಸ್ವಾಮಿ, ಶಿಕ್ಷಣಾಧಿಕಾರಿ ಇನಾಯತ್‌ ರಹೇಮಾನ್‌ ಸಿಂದೆ, ವಿ.ಎಂ. ಪತಾರ, ನಾಗಶೆಟ್ಟಿ ಡುಮಣಿ, ರವೀಂದ್ರ ರೆಡ್ಡಿ ಮಾಲಿಪಾಟೀಲ, ಶಿವಶಂಕರ ಟೋಕರೆ, ರಾಜಶೇಖರ ಗೌರೆ, ಪಾಂಡುರಂಗ ಬೆಲ್ದಾರ, ದಿಲೀಪಕುಮಾರ ಡೊಂಗರೆ, ಸಂಜೀವಕುಮಾರ ಅತಿವಾಳೆ, ರೇವಣಪ್ಪಾ ಸಂಗೋಳಗಿ, ಭೀಮರಾವ್‌ ಜಾನಪುರ, ಶೇಖ್‌ ಮೆಸ್ಸಿ, ಯೂಸುಫ್‌, ಗಂಗಾದೀಪಕ, ಸರಸ್ವತಿ, ಅನೀಲಕುಮಾರ, ಶಿವಪುತ್ರಪ್ಪಾ ಪಾಟೀಲ, ಘನಶೆಟ್ಟಿ ಬಿರಾದಾರ, ಅನೀಲಕುಮಾರ, ಪರಶುರಾಮ ರಾಠೊಡ, ವಿಜಯಕುಮಾರ ಮೋರ್ಗಿಕರ ಇನ್ನಿತರರು ಇದ್ದರು. 


Trending videos

Back to Top