CONNECT WITH US  

ಅಪರಾಧ ಪತ್ತೆಗೆ ವರವಾದ ಸಿಸಿ ಕ್ಯಾಮರಾ

ಹುಮನಾಬಾದ: ಪಟ್ಟಣದಲ್ಲಿ ವರ್ಷಾರಂಭದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳು ಅಪರಾಧ ಪ್ರಕರಣ
ಪತ್ತೆಗೆ ವರದಾನವಾಗಿ ಪರಿಣಮಿಸಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಪಟ್ಟಣ ವಿಸ್ತಾರದ ಜೊತೆಗೆ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವಿಸ್ತರಣೆ ಮಾಡಲಾಗಿದೆ. ಈ ಎಲ್ಲದರ ಜತೆಗೆ ನಗರದಲ್ಲಿ ಹೆಚ್ಚಿದ ಅಪರಾಧ ಪ್ರಕರಣಗಳ ನಿಯಂತ್ರಣ ಸಂಬಂಧ ಜನದಟ್ಟಣೆ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂಬ ಅಭಿಪ್ರಾಯ 4 ವರ್ಷಗಳಿಂದ ಕೇಳಿಬರುತ್ತಿತ್ತು. ವಿಷಯವನ್ನು ಗಂಭೀರವಾಗಿ ಸ್ವೀಕರಿಸಿದ ಪೊಲೀಸ್‌ ಇಲಾಖೆ ಸಿಸಿ ಕ್ಯಾಮರಾ ಅಳವಡಿಕೆಯ ಸಾಧಕ- ಬಾಧಕಗಳ ಕುರಿತು ಸುದೀರ್ಘ‌ ಚಿಂತನೆ ನಡೆಸಿತ್ತು. ಆದರೇ ಪೊಲೀಸ್‌ ಇಲಾಖೆಯಲ್ಲಿ ಈ
ವ್ಯವಸ್ಥೆಗೆ ಅನುದಾನಕ್ಕೆ ಅವಕಾಶವಿಲ್ಲದ ಕಾರಣ ನನೆಗುದಿಗೆ ಬಿದ್ದಿತ್ತು.

ಸಿಸಿ ಕ್ಯಾಮರಾ ಅಳವಡಿಕೆ ಅನಿವಾರ್ಯತೆ ಅರಿತ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ, ಸಿಪಿಐ ಜೆ.ಎಸ್‌.ನ್ಯಾಮಗೌಡರ್‌, ಪಿಎಸ್‌ಐ ಎಲ್‌.ಟಿ.ಸಂತೋಷ ಅವರನ್ನು ಒಳಗೊಂಡ ತಂಡ 2016-17ನೇ ಸಾಲಿನಲ್ಲಿ ಶಾಸಕ ರಾಜಶೇಖರ ಬಿ.ಪಾಟೀಲ ಅವರ ಗಮನಕ್ಕೆ ತಂದಿತ್ತು. ಅಪರಾಧ ನಿಯಂತ್ರಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಿದ ಅವರು ಪುರಸಭೆಯಿಂದ ಅಗತ್ಯ ಅನುದಾನ ಕೊಡಿಸಲು ಸೂಚಿಸುತ್ತೇನೆ. ಅರ್ಜಿ ಸಲ್ಲಿಸಿ, ಎಂದಿದ್ದರು. ಶಾಸಕರ ಸಲಹೆಯ ಮೇರೆಗೆ 22 ಸಿಸಿ ಕ್ಯಾಮರಾಗಳಿಗೆ ತಗಲುವ 17ಲಕ್ಷ ರೂ. ಅನುದಾನ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅವ ಧಿಯಲ್ಲಿದ್ದ ಪುರಸಭೆ ಅಧ್ಯಕ್ಷ ಅಪ್ಸರಮಿಯ್ಯ ಆಡಳಿತ ಮಂಡಳಿ ಅನುಮೋದನೆ ಪಡೆದು 2017ನೇ ಸಾಲಿನಾಂತ್ಯ ರೂ.10 ಲಕ್ಷ ರೂ. ಬಿಡುಗಡೆಗೊಳಿಸಿದ್ದರು.

ಪಟ್ಟಣದ ಜನನಿಬಿಡ ಪ್ರದೇಶ ಹಾಗೂ ವೃತ್ತಗಳಾದ ಅಂಬೇಡ್ಕರ, ಸರ್ದಾರ ವಲ್ಲಭಭಾಯಿ ಪಟೇಲ್‌, ಬಸವೇಶ್ವರ ವೃತ್ತ, ಚಿದ್ರಿ ಬೈಪಾಸ್‌ ರಸ್ತೆ, ಕೆಇಬಿ ಬೈಪಾಸ್‌ ರಸ್ತೆ, ಕಲ್ಲೂರ ರಸ್ತೆ, ಶಿವಪುರ ಗಲ್ಲಿ, ಬಸ್‌ ನಿಲ್ದಾಣ ಮುಂಭಾಗ, ವೀರಭದ್ರೇಶ್ವರ ದೇವಸ್ಥಾನ ಮೊದಲಾದ ವೃತ್ತಗಳಲ್ಲಿ ಕ್ಯಾಮರಾ ಅಳವಡಿಸಲು ಯೋಜನೆ ರೂಪಿಸಿತ್ತು. ಅಂತೆಯೇ ವೀರಭದ್ರೇಶ್ವರ ಜಾತ್ರೆಗೂ ಮುನ್ನ ಜನವರಿ 18ಕ್ಕೆ ಲಭ್ಯ ಅನುದಾನ ಆಧರಿಸಿ, ಪಟ್ಟಣದ ಡಾ| ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಪ್ರವಾಸಿ ಮಂದಿರ, ಕೇಂದ್ರ ಬಸ್‌ ನಿಲ್ದಾಣ ಒಳಗೊಂಡಂತೆ ಸದ್ಯ ನಗರದ ಪ್ರಮುಖ ಭಾಗಗಳಲ್ಲಿ ಒಟ್ಟು 18 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೆಇಬಿ ಬೈಪಾಸ್‌, ಕಲ್ಲೂರ ಬೈಪಾಸ್‌ ರಸ್ತೆ, ವೀರಭದ್ರೇಶ್ವರ ದೇವಸ್ಥಾನ ಹಿಂಭಾಗ ಮತ್ತಿತರ ಕಡೆ ಇನ್ನೂ ಸಿಸಿ 6 ಕ್ಯಾಮರಾ ಅಳವಡಿಸಬೇಕಿದ್ದು, ಅದಕ್ಕೆ ಅನುದಾನ ಕೊರತೆ ಕಾಡುತ್ತಿದೆ.

ನಗರ ಸ್ವತ್ಛತೆ ಜೊತೆಗೆ ಅಪರಾಧ ಮುಕ್ತಗೊಳಿಸುವುದು ನಮ್ಮ ಕರ್ತವ್ಯ. ಆ ಹಿನ್ನೆಲೆಯಲ್ಲಿ ನಾನು ಅಧ್ಯಕ್ಷನಾಗಿದ್ದ
ಅವ ಧಿಯಲ್ಲೇ ಅನುದಾನ ಒದಗಿಸಿದ್ದೇನೆ. ಕ್ಯಾಮರಾ ಅಳವಡಿಸಿದಾಗಿನಿಂದ ಪಟ್ಟಣದಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿವೆ. ಇನ್ನುಳಿದ ಕಡೆ ಕ್ಯಾಮರಾ ಅಳವಡಿಸಿದರೆ ಸಮಸ್ಯೆಗೆ ಶಾಶ್ವತ ಪರಹಾರ ಒದಗಿಸಿದಂತಾಗುತ್ತದೆ. ಬಾಕಿ ಅನುದಾನ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಪುರಸಭೆಯ ಹಿರಿಯ
ಸದಸ್ಯ ಅಪ್ಸರಮಿಯ್ಯ ತಿಳಿಸಿದರು.

ಶಿವನಗರ, ಬಸವನಗರ, ಶಿಕ್ಷಕರ ಬಡಾವಣೆ ಒಳಗೊಂಡಂತೆ ಸಾಕಷ್ಟು ಕಡೆ ಬೈಕ್‌ ಮೇಲೆ ಬಂದು ಅದೆಷ್ಟೋ ಮಹಿಳೆಯರ ಕತ್ತಿನಲ್ಲಿರುವ ಚಿನ್ನದ ಸರ ಕಿತ್ತುಕೊಂಡು ಪರಾರಿ ಆಗುತ್ತಿರುವುದು ಹೆಚ್ಚಿತ್ತು. ಬುಧವಾರ ಹಾಗೂ ರವಿವಾರ ಸಂತೆಯಲ್ಲಿ ಜೇಬುಗಳ್ಳರು, ಮೊಬೈಲ್‌ ಕಳ್ಳರ ಹಾವಳಿ ಹೆಚ್ಚಿತ್ತು. ಇದೀಗ ಕ್ಯಾಮೆರಾ ಅಳವಡಿಸಿದಾಗಿನಿಂದ ನಿಯಂತ್ರಣಕ್ಕೆ ಬಂದಿದೆ ಎನ್ನುವುದು ಸಾರ್ವಜನಿಕರ ಅನಿಸಿಕೆ.

ಸಿಸಿ ಕ್ಯಾಮೆರಾ ಅಳವಡಿಸಿದ ನಂತರ ಅಪರಾಧ ಕೃತ್ತ ಎಸಗುವವರಲ್ಲಿ ನಡುಕ ಹುಟ್ಟಿದೆ. ಪರಿಣಾಮ ಅಪರಾಧಿಗಳು ನಗರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮರಾ ಅಳವಡಿಕೆ ನಂತರದಿಂದ ಅಪರಾಧ ಪ್ರಕರಣ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬಾಕಿ ಭಾಗಗಳಲ್ಲೂ ಕ್ಯಾಮರಾ ಅಳವಡಿಸಿದಲ್ಲಿ ಹುಮನಾಬಾದ ಅಪರಾಧ ಮುಕ್ತವಾಗುವಲ್ಲಿ
ಯಾವುದೇ ಸಂಶಯವಿಲ್ಲ. 
 ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ

ಕ್ಯಾಮರಾ ಅಳವಡಿಸದ ನಂತರ ಮುಖ್ಯ ರಸ್ತೆಗಳಲ್ಲಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ ಆರೋಪಿಗಳ ಪತ್ತೆಗೆ
ಅನುಕೂಲವಾಗಿದೆ. ಅನೇಕ ಮನೆಗಳ್ಳತನ, ಬೈಕ್‌ ಮೇಲೆ ಬರುವ ಸರಗಳ್ಳರ ಸಂಖ್ಯೆ ತೀರಾ ಕಡಿಮೆಯಾಗಿದೆ. ಒಟ್ಟಾರೆ ಅಪರಾಧ ನಿಯಂತ್ರಣ ಎನ್ನುವುದಕಿಂತಲೂ ಅಪರಾಧಿಗಳ ಪತ್ತೆಗೆ ಹೆಚ್ಚು ಅನುಕೂಲ ಆಗಿದೆ.
 ಎಲ್‌.ಟಿ.ಸಂತೋಷ ಪಿಎಸ್‌ಐ, ಹುಮನಾಬಾದ

ಪಟ್ಟಣಕ್ಕೆ ಮೂಲಸೌಲಭ್ಯ ಕಲ್ಪಿಸುವುದರ ಜೊತೆಗೆ ಅಪರಾಧ ಮುಕ್ತಗೊಳಿಸುವುದೂ ಅಷ್ಟೇ ಮುಖ್ಯ. ಅದೇ ಕಾರಣಕ್ಕಾಗಿ ಪುರಸಭೆ ಆಡಳಿತ ಮಂಡಳಿ ಪಕ್ಷಾತೀತ ನೀಡಿದ ಅನುಮೋದನೆ ಕಾರಣ ಅನುದಾನ ಒದಗಿಸಲು ಸಾಧ್ಯವಾಯಿತು. ಬಾಕಿ ಅನುದಾನ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಲಭ್ಯವಾಗುವ ಸಾಧ್ಯತೆ ಇದೆ.  ಅಶೋಕ ಚನ್ನಕೋಟೆ, ಮುಖ್ಯಾಧಿಕಾರಿ, ಪುರಸಭೆ ಹುಮನಾಬಾದ

ಹುಮನಾಬಾದ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆನ್ನುವ ಉದ್ದೇಶ ಇದ್ದರೂ ಅನುದಾನ ಅಲಭ್ಯತೆ ಕಾರಣ ಕಾರ್ಯ
ಸಾಧ್ಯವಾಗಿರಲಿಲ್ಲ. ಶಾಸಕರ ಸಲಹೆ ಮೇರೆಗೆ ಮನವಿ ಸಲ್ಲಿಸಿದ್ದರಿಂದ ಪುರಸಭೆ ಅಗತ್ಯ ಅನುದಾನಕ್ಕೆ ಅನುಮೋದನೆ ನೀಡಿದ ನಂತರ ನಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿದೆ. ಕಿಸೆ ಕಳ್ಳತನ, ಮೊಬೈಲ್‌ ಕಳ್ಳತನ ಕಡಿಮೆ ಆಗಿದೆ.
 ಜೆ.ಎಸ್‌.ನ್ಯಾಮಗೌಡರ್‌ ಸಿಪಿಐ, ಹುಮನಾಬಾದ

ಶಶಿಕಾಂತ ಕೆ.ಭಗೋಜಿ 

Trending videos

Back to Top