CONNECT WITH US  

ಹುಲಸೂರ: ಕಸಾಪ ಕಚೇರಿ ಉದ್ಘಾಟನೆ

ಬಸವಕಲ್ಯಾಣ: ಸಾಹಿತ್ಯ ಚಟುವಟಿಕೆಗಳು ಸಂಪ್ರದಾಯ ಬದ್ಧವಾಗಿರದೆ, ಶರಣರ ಆದೇಶದಂತೆ ಪರಿವರ್ತನೆಯಾಗಿರಬೇಕು ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು.

ಹುಲಸೂರನಲ್ಲಿ ಗುರುವಾರ ನಡೆದ ಕಸಾಪ ಕಚೇರಿ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿಗೆ ಒಂದು ನಿವೇಶನ ಕೊಡಲು ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಗೆ ಸೂಚಿಸಿದರು. ಹಾಗೂ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು.

ಕಸಾಪ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಶಾಸಕರ ಒಂದು ತಿಂಗಳ ಸಂಬಳ ಕೊಟ್ಟು ಅದರ ಭದ್ರತಾ ಠೇವಣಿಯ ಬಡ್ಡಿಯಲ್ಲಿ ಕನ್ನಡ ಭಾಷೆಯ ಚಟುವಟಿಕೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ನೂತನ ತಾಲೂಕು ಘೋಷಣೆಯಾದ ಬೆನ್ನಲ್ಲೆ ಕಸಾಪ ತಾಲೂಕು ಕಚೇರಿ ಉದ್ಘಾಟನೆ ಆಗಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹುಲಸೂರ ಕಸಾಪ ಅಧ್ಯಕ್ಷೆ ಡಾ| ಶಿವಲಿಲಾ ಮಠಪತಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಪರಿಷತ್‌ ಸದಾ ಸಿದ್ಧವಾಗಿದ್ದು, ಅದಕ್ಕೆ ಎಲ್ಲರ ಸಹಕಾರ ತುಂಬಾ ಅವಶ್ಯಕ ಎಂದು ಹೇಳಿದರು.

ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾರಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಡೋಣಗಾಂವಕರ್‌, ಕಸಾಪ ಗೌರವಾಧ್ಯಕ್ಷ ಮಲ್ಲಪ್ಪಾ ಧಬಾಲೆ, ಶ್ರೀದೇವಿ ನಿಡೋದೆ, ರೇಖಾ ಕಾಡಾದೆ, ಶಂಕರ ಮಾಳದೆ, ಸಚಿನ ವಗ್ಗೆ, ವಿವೇಕ, ರೇವಣಸಿದ್ಧ ಪಾಟೀಲ, ರುದ್ರೇಶ್ವರ ಗೋರ್ಟಾ, ಆಕಾಶ ಖಂಡಾಳೆ, ಬಸವರಾಜ ಮಾಳದೆ, ನಾಗೇಶ ಇಜಾರೆ, ಸಂತೋಷ ಎಕ್ಕಲೂರೆ, ಶಿವಕುಮಾರ ಸ್ವಾಮಿ, ವೀರಶೆಟ್ಟಿ ಪಾಟೀಲ ಮತ್ತಿತರರು ಇದ್ದರು. ಶಾಂತಲಿಂಗ ಮಠಪತಿ ಸ್ವಾಗತಿಸಿದರು. ರೇವಣಸಿದ್ಧ ಪಾಟೀಲ ವಂದಿಸಿದರು.


Trending videos

Back to Top