CONNECT WITH US  

ಸೋಲು-ಅವಮಾನ ಕಲಿಸುತ್ತವೆ ಪಾಠ

ಸೊಲ್ಲಾಪುರ: ಸೋಲು ಮತ್ತು ಅವಮಾನಗಳಿಂದ ವ್ಯಕ್ತಿ ಕಲಿಯುವ ಪಾಠವನ್ನು ಜಗತ್ತಿನ ಯಾವ ವಿಶ್ವವಿದ್ಯಾಲಯಗಳಿಂದಲೂ ಕಲಿಯಲು ಸಾಧ್ಯವಿಲ್ಲ. ನಾವು ನಮ್ಮ ಸೋಲನ್ನು ಅರಿಯಬೇಕು, ಅದನ್ನು ಸರಿಪಡಿಸುವ
ಮಾರ್ಗ ಕಂಡುಕೊಳ್ಳಬೇಕು. ಸೋತು ಗೆದ್ದವರೆಲ್ಲರೂ ಸಾಧಕರಾಗಿದ್ದಾರೆ ಎಂದು ಸೆಟ್‌-ನೆಟ್‌ ಮಾರ್ಗದರ್ಶಕ ದಾನಯ್ಯ ಕವಟಿಮಠ ಹೇಳಿದರು.

ನಗರದ ಶ್ರೀ ಸಿದ್ದೇಶ್ವರ ಹೆಣ್ಣುಮಕ್ಕಳ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ನಾವು ನಮ್ಮ ಸೋಲಿಗೆ ಧೃತಿಗೆಡಬಾರದು. ಅದೊಂದು ಅನುಭವವಾಗಬೇಕು. ನಮ್ಮ ಭವಿಷ್ಯದ ನಿರ್ಮಾಪಕರು ನಾವೇ. ನಾವು ಇಂದು ಮಾಡುವ ಪ್ರತಿಯೊಂದು ಕೆಲಸವು ನಾಳಿನ ಭವಿಷ್ಯ ರೂಪಿಸುತ್ತವೆ. ಅದಕ್ಕಾಗಿ ನಾವು ನಮ್ಮ ಕೆಲಸವನ್ನು ಗೌರವಿಸಬೇಕು, ಆರಾಧಿಸಬೇಕು ಮತ್ತು ಶ್ರದ್ಧೆಯಿಂದ ಮುಂದುವರಿಸಬೇಕು ಎಂದರು.

ವಿದ್ಯಾರ್ಥಿಗಳು, ಶಿಕ್ಷಕರು, ಸೈನಿಕರು, ವೈದ್ಯರು, ರೈತರು ಹಾಗೂ ಸೇವಕರು ಯಾರೇ ಆಗಿರಲಿ ಅವರು ಕೆಲಸವನ್ನು ಗೌರವಿಸಿದಾಗ, ಅದನ್ನೇ ಉಸಿರಾಗಿಸಿಕೊಂಡಾಗ ಮಾತ್ರ ಯಶಸ್ವಿಯಾಗುತ್ತಾರೆ. ಸಾಧಾರಣ ವ್ಯಕ್ತಿಗಳು ಅಸಾಧಾರಣ ವ್ಯಕ್ತಿಗಳಾಗಿರುವುದು ಅವರು ಅವರ ವೃತ್ತಿಯನ್ನು ಗೌರವದಿಂದ, ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಕಂಡಿದ್ದರಿಂದ. ಅದೇ ರೀತಿ ವಿದ್ಯಾರ್ಥಿಗಳು ಸತತವಾಗಿ ಅಭ್ಯಾಸದಲ್ಲಿ ತೊಡಗಿದರೆ ಯಶಸ್ಸು ಖಂಡಿತವಾಗಲೂ ದೊರೆಯುತ್ತದೆ ಎಂದರು.

ಸಾಧನೆ ಹಾದಿಯಲ್ಲಿ ಸಾವಿರ ತೊಡಕುಗಳು, ಟೀಕೆಗಳು ಬರುತ್ತವೆ. ಅವುಗಳಿಗೆ ಬೆದರಿ ಹಿಂದಡಿ ಇಡಬಾರದು.
ಲೆಕ್ಕಕ್ಕೆ ಇಲ್ಲದಿರುವುದಕ್ಕಿಂತ ಟೀಕೆಗೆ ಗುರಿಯಾಗುವುದೇ ಲೇಸು. ಟೀಕೆಗೆ ಗುರಿಯಾದರೂ ಚಿಂತಿಸಬಾರದು.
ಬೇರೆಯವರ ಟೀಕೆಗಳಿಗೆ ಸಾಧನೆಯೇ ಉತ್ತರವಾಗಲಿ. ನೀವು ಇಂದು ಪಡುತ್ತಿರುವ ಶ್ರಮ ನಾಳೆ ಫಲ ಕೊಡುತ್ತದೆ. ಸಹನೆ ಇರಲಿ ಎಂದು ಹೇಳಿದರು.

ಶ್ರೀ ಸಿದ್ದೇಶ್ವರ ದೇವಸ್ಥಾನ ಪಂಚ ಕಮಿಟಿಯ ಪ್ರಸಿದ್ಧಿ ಪ್ರಮುಖರಾದ ನ್ಯಾಯಮೂರ್ತಿ ಆರ್‌.ಎಸ್‌. ಪಾಟೀಲ,
ಕಾಲೇಜಿನ ಪ್ರಾ ಚಾರ್ಯ ಪ್ರೊ| ಗಜಾನನ ಧರಣೆ, ವಿಭಾಗ ಪ್ರಮುಖ ಪ್ರೊ| ಶಿಲ್ಪಾ ದೇಶಮುಖ, ಪತ್ರಕರ್ತ ಸೋಮಶೇಖರ ಜಮಶೆಟ್ಟಿ ಹಾಗೂ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪ್ರೊ| ಶ್ರೀಶೈಲ ಮಳೆವಾಡಿ ಪೂಚಯಿಸಿದರು, ಕುಮಾರಿ ಎನ್‌. ನೇತಾಲಕರ ನಿರೂಪಿಸಿದರು, ಕುಮಾರಿ ಎಂ. ಕೊನಾಪುರೆ ವಂದಿಸಿದರು. 

Trending videos

Back to Top