CONNECT WITH US  

ಬಿಜೆಪಿ ತ್ಯಜಿಸಲು ಶಪಥ ಮಾಡಿ: ಜಿಗ್ನೇಶ್‌

ಬೀದರ: 2019ರ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ತ್ಯಜಿಸಲು ಶಪಥ ಮಾಡುವ ಮೂಲಕ ಅಂಬೇಡ್ಕರ್‌ ವಿರೋ ಧಿಗಳಿಗೆ ತಕ್ಕ ಪಾಠ ಕಲಿಸೋಣ ಎಂದು ಗುಜರಾತನ ಮಡಗಾಂವ್‌ ಶಾಸಕ ಹಾಗೂ ದಲಿತ ಹೋರಾಟಗಾರ ಜಿಗ್ನೇಶ್‌ ಮೇವಾನಿ ಹೇಳಿದರು.

ನಗರದ ಝೀರಾ ಫಂಕ್ಷನ್‌ ಹಾಲ್‌ನಲ್ಲಿ ಶುಕ್ರವಾರ ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೇಂದ್ರದ ಮೋದಿ ಸರ್ಕಾರ ಭಯಭೀತವಾಗಿ ದಲಿತ
ಹೋರಾಟಗಾರರಿಗೆ ನಕ್ಸಲ್‌ ಪಟ್ಟ ಕಟ್ಟುವ ಮೂಲಕ ಚಳವಳಿ ಹತ್ತಿಕ್ಕಲು ಯತ್ನಿಸುತ್ತಿದೆ. ತಾನು ಅಂಬೇಡ್ಕರ್‌ ಭಕ್ತ ಎಂದು ಹೇಳಿಕೊಳ್ಳುವ ಮೋದಿ ಒಳಗೊಳಗೆ ಅಟ್ರಾಸಿಟಿ ಕಾಯ್ದೆ ದುರ್ಬಲಗೊಳಿಸಲು ಯತ್ನಿಸುತ್ತಾರೆ. ಭೀಮಾ ಕೋರೆಗಾಂವ್‌ ಘಟನೆಯಲ್ಲಿ ಅಮಾಯಕ ದಲಿತರಿಗೆ ನಕ್ಸಲ್‌ ಪಟ್ಟ ಕಟ್ಟಿ ಜೈಲಿಗಟ್ಟಲಾಗುತ್ತಿದೆ ಎಂದು ಆರೋಪಿಸಿದರು.

ಮೋದಿ ಹಾಗೂ ಅಮಿತ್‌ ಶಾ ಇಚ್ಛೆ ಮೇರೆಗೆ ಮಹಾರಾಷ್ಟ್ರ ಸರ್ಕಾರ ಅಮಾಯಕರ ಮೇಲೆ ದೌರ್ಜನ್ಯ ಎಸಗಿದೆ. ಈಗ ನಾವು ಸುಮ್ಮನಿರಬಾರದು, ಮೋದಿಗೆ ಜೈ ಭೀಮ ಶಕ್ತಿ ತೋರಿಸಬೇಕಿದೆ. ಮೋದಿ ಮಣಿಯುವುದು ಜೈ ಭೀಮ ಸೈನಿಕರಿಗೆ ಮಾತ್ರ. ಹಾಗಾಗಿಯೇ ಮೋದಿ ಮತ್ತವರ ಸರ್ಕಾರ ಭಯಬೀತಗೊಂಡಿದೆ ಎಂದರು. ಮೋದಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಹೇಳಿದ ಒಂದೇ ಒಂದು ಕೆಲಸ ಮಾಡಿಲ್ಲ. ದೇಶದ ಚೌಕಿದಾರ್‌ ಎಂದು ಹೇಳಿಕೊಳ್ಳುವ ಮೋದಿ ದೇಶದಿಂದ ವಿಜಯ ಮಲ್ಯ, ನೀರವ್‌ ಮೋದಿ ಅಂಥ ಉದ್ಯಮಿಗಳು ಸಾವಿರಾರು ಕೋಟಿ ರೂ. ಲೂಟಿ ಮಾಡಿ ಪರಾರಿಯಾದರೂ ಅರಿವಿಗೆ ಬರಲಿಲ್ಲ. ಇದು ಏನನ್ನು ತೋರಿಸುತ್ತದೆ ಎಂದರೆ, ಒಂದೋ ಚೌಕಿದಾರ ಉದ್ದೇಶ ಪೂರ್ವಕವಾಗಿ ಮಲಗಿರಬೇಕು ಅಥವಾ ಕಳ್ಳರೊಂದಿಗೆ ಶಾಮೀಲಾಗಿರಬೇಕು ಎಂದು ಲೇವಡಿ ಮಾಡಿದರು.

ಗೌರಿ, ಕಲಬುರ್ಗಿ, ಪಾನ್ಸರೆ ಅವರನ್ನು ವೈಚಾರಿಕ ಭಿನ್ನಮತಗಳಿಂದಲೇ ಕೊಲ್ಲಲಾಗಿದೆ. ಗೌರಿಯನ್ನು ನಾನು ತಾಯಿ ಎಂದು ಕರೆಯುತ್ತಿದ್ದೆ. ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ, ಈಗಿನ ಕೇಂದ್ರ ಸರ್ಕಾರಕ್ಕೆ ಭಿನ್ನಾಭಿಪ್ರಾಯಗಳಿರುವ ವ್ಯಕ್ತಿಗಳನ್ನು ಕಂಡರೆ ಆಗುವುದಿಲ್ಲ. ಹಾಗಾಗಿ, ಇತ್ತೀಚೆಗೆ ಇಬ್ಬರು ರಾಷ್ಟ್ರೀಯ ಮಾಧ್ಯಮಗಳ ಸುದ್ದಿ ನಿರೂಪಕರು ಕೆಲಸ ಬಿಡಬೇಕಾಗಿ ಬಂದಿದೆ. ಕಾರಣ ಇಷ್ಟೇ, ಮೋದಿ ವಿರುದ್ಧ ಟಿಪ್ಪಣಿ ಮಾಡಿದ್ದು ಎಂದು ಆಪಾದಿಸಿದರು. 

ನಾಗಪುರ ಕೇಂದ್ರಿತ ಆರ್‌ಎಸ್‌ಎಸ್‌ನವರು ದೇಶದ  ವಿಧಾನ ಬದಲಿಸಲು ಹೊರಟಿದ್ದಾರೆ. ಯಾವ ಕಾರಣಕ್ಕೆ ಸಂವಿಧಾನ ಸುಡುತ್ತಿದ್ದೀರಿ. ದೇಶದ ನಾಗರಿಕರ ಎದೆಯಲ್ಲಿ ಸಂವಿಧಾನ ಇದೆ. ಅದನ್ನು ಹೇಗೆ ಸುಡುತ್ತೀರಿ ಎಂದು ಪ್ರಶ್ನಿಸಿದರು. ಝಿರಾ ಕಲ್ಯಾಣ ಮಂಟಪದಲ್ಲಿ ಜನ ಕಿಕ್ಕಿರಿದು ತುಂಬಿದ್ದು, ಜೈ ಭೀಮ ಜಯಘೋಷಗಳು ಮುಗಿಲು ಮುಟ್ಟಿದ್ದವು. ಬೆಂಗಳೂರಿನ ಇರ್ಷಾದ್‌ ಅಹ್ಮದ್‌ ದೇಸಾಯಿ, ಸೊಲ್ಲಾಪುರದ ದಶರಥ ಕಸಬೆ, ಜಿಲ್ಲಾ ಆಯೋಜಕರಾದ ರಾಜರತನ್‌ ಹಾಗೂ ಸುರೇಶ ಗಾಯಕವಾಡ ಹಾಜರಿದ್ದರು.


Trending videos

Back to Top