CONNECT WITH US  

ಕೌಶಲವಿಲ್ಲದೇ ನಿರುದ್ಯೋಗ ಹೆಚ್ಚಳ

ಭಾಲ್ಕಿ: ಕೌಶಲ ರಹಿತ ಶಿಕ್ಷಣ ಪದ್ಧತಿಯಿಂದಾಗಿ ನಿರುದ್ಯೋಗ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಶಿಕ್ಷಣ ವಿದ್ಯಾರ್ಥಿಗಳನ್ನು
ಸದ್ಗುಣಿಗಳನ್ನಾಗಿಸಬೇಕು. ಆದರೆ, ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಗದುಗಿನ ಶಿವಾನಂದ ಮಠದ ಶ್ರೀ ಕೈವಲ್ಯಾನಂದ ಸ್ವಾಮೀಜಿ ಹೇಳಿದರು.

ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುತ್ಛಯದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಣ್ಣಿಗೆ ಸಂಸ್ಕಾರ ದೊರೆತಾಗ ಮಡಿಕೆ ಆಗುತ್ತದೆ. ಬೀಜಕ್ಕೆ
ಸಂಸ್ಕಾರ ದೊರೆತಾಗ ಬೆಳೆ ಆಗುತ್ತದೆ. ಹಾಗೆಯೇ ಗುರುಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಅವರು ರಾಷ್ಟ್ರದ ಅತ್ಯಮೂಲ್ಯ ಸಂಪತ್ತಾಗಿ ಪರಿವರ್ತನೆ ಆಗುತ್ತಾರೆ ಎಂದು ನುಡಿದರು.

ಗುರು ಸರ್ವಶ್ರೇಷ್ಠ. ವಿದ್ಯಾರ್ಥಿ ಎಷ್ಟೇ ಶ್ರೀಮಂತ, ಪ್ರಭಾವಿ ವ್ಯಕ್ತಿಯ ಮಗನಾಗಿದ್ದರೂ ಶಾಲೆಯ ಹೊರಗಡೆಯೇ ತನ್ನ
ಶ್ರೀಮಂತಿಕೆ, ಪ್ರಭಾವ ಬಿಟ್ಟು ವರ್ಗಕೋಣೆಗೆ ಬರಬೇಕು. ಅದುವೇ ಭಾರತೀಯ ಸಂಸ್ಕೃತಿ. ಹಿಂದಿನ ಕಾಲದಲ್ಲಿ ರಾಜರ
ಮಕ್ಕಳು ಸಹ ಗುರುಕುಲದಲ್ಲಿ ಇತರ ಮಕ್ಕಳಂತೆ ಸಾಮಾನ್ಯ ವಿದ್ಯಾರ್ಥಿಗಳಾಗಿಯೇ ಪಾಠ ಆಲಿಸುತ್ತಿದ್ದರು. ಹೀಗಾಗಿಯೇ ಕೆಲವರು ಮಹಾನ್‌ ರಾಜರು, ಪುರುಷರಾಗಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು. 

ಕೆಲ ದಶಕಗಳ ಹಿಂದೆ ಸಮಾಜ ಸೇವೆಗಾಗಿ ಶಾಲೆಗಳನ್ನು ತೆರೆಯುತ್ತಿದ್ದರು. ಈಗ ಹಣ ಗಳಿಕೆಯ ಉದ್ದೇಶಕ್ಕಾಗಿ ಶಾಲೆಗಳು ಹುಟ್ಟುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಚಾಣಕ್ಯ ಚಂದ್ರಗುಪ್ತ ಮೌರ್ಯನಲ್ಲಿದ್ದ ವಿಶೇಷ ಗುಣವನ್ನು ಗುರುತಿಸಿ ಮೌರ್ಯ ಸಾಮ್ರಾಜ್ಯ ಸ್ಥಾಪಿಸಲು ಪ್ರೇರೆಪಿಸಿದ್ದ. ಗುರುಗಳು ವಿದ್ಯಾಥಿಗಳಲ್ಲಿನ ವಿಶೇಷ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ್ದ
ಶ್ರೇಯಸ್ಸು ಬಸವಣ್ಣ ಮತ್ತು ಅನುಭವ ಮಂಟಪಕ್ಕೆ ಸಲ್ಲುತ್ತದೆ. ಶಿಕ್ಷಕರು ಶಿಕ್ಷಕಣದ ಜೊತೆಗೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಎಲ್ಲ ಗುರುವೃಂದದವರಿಗೆ ಆರತಿ ಬೆಳಗಿ ಗೌರವ ಸಲ್ಲಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶಾಹೀನ
ಸಂಸ್ಥೆ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ, ಜಿಲ್ಲಾ
ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್‌ ಚಿಮಕೋಡೆ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ
ಮೊಳಕೀರೆ, ಪ್ರಮುಖರಾದ ಅಕ್ಷಯ ಮುನ್ನೋಳಿ, ಪ್ರವೀಣ ಖಂಡಾಳೆ, ಲಕ್ಷ್ಮಣ ಮೇತ್ರೆ, ಬಸವರಾಜ ಪ್ರಭಾ, ಪಂಡರಿನಾಥ ಪವಾರ ಇದ್ದರು. ಮಧುಕರ ಗಾಂವ್ಕರ್‌ ನಿರೂಪಿಸಿದರು.


Trending videos

Back to Top