CONNECT WITH US  

ಬಸ್ಸಿಲ್ಲದ ಹಳ್ಳಿಗಳಲ್ಲಿ ಜನರ ಪರದಾಟ

ಇಂಚಗೇರಿ: ಚಡಚಣ ತಾಲೂಕಿನ ಹಳ್ಳಿಗಳಾದ ಲಮಾಣಿಹಟ್ಟಿ, ಕಾತ್ರಾಳ, ಸಾತಲಗಾಂವ, ರಾಮನತಾಂಡಾ, ಕನಕನಾಳ, ಕಾಳೂಣ ತಾಂಡಾ, ಧುಮಕನಾಳ ಮುಂತಾದ ಹತ್ತು ಹಲವಾರು ಗ್ರಾಮಗಳು ಬಸ್‌ ಕೂಡಾ ಕಂಡಿಲ್ಲ. ಇದರಿಂದ ನಿತ್ಯ ಶಾಲಾ ವಿದ್ಯಾರ್ಥಿಗಳಿಗೂ ಹಾಗೂ ಜನರಿಗೂ ಪ್ರಯಾಣ ಪ್ರಯಾಸ ತಪ್ಪಿದ್ದಲ್ಲ. ಇದು ನೂತನ
ತಾಲೂಕಿನ ಸ್ಥಿತಿಗತಿಯಾಗಿದೆ.

2012ರಲ್ಲಿ ರಾಜ್ಯದಲ್ಲಿ ಬಿಜಿಪಿ ಸರ್ಕಾರದ ಅಧಿಕಾರವಧಿಯಲ್ಲಿ ಚಡಚಣ ತಾಲೂಕು ಘೋಷಣೆಯಾಯಿತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಮತ್ತೆ 2017ರಲ್ಲಿ ತಾಲೂಕು ಕೇಂದ್ರವನ್ನಾಗಿ ಘೋಷಿಸಿ ತಾಲೂಕಿಗೆ ಪ್ರಥಮ ದಂಡಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿ ಪ್ರಥಮ ಗಣರಾಜ್ಯೋತ್ಸವ ಆಚರಿಸಿತು. 2018 ರಲ್ಲಿ ನೂತನ
ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೂ ಒಂದು ಬಸ್‌ ಡಿಪೋ ಕೂಡಾ ಪ್ರಾರಂಭಿಸಿಲ್ಲ. 

ತಾಲೂಕಿನ ಸಂಪೂರ್ಣ ಗ್ರಾಮಗಳು ಇಂಡಿ ಡಿಪೋ ಮೇಲೆ ಅವಲಂಬಿತವಾಗಿದ್ದು, ಇಲ್ಲಿಂದ ಬರುವ ಬಸ್‌ ಗಳಿಗಾಗಿ ಕಾಯುವ ಸ್ಥಿತಿ ಅನಿವಾರ್ಯವಾಗಿದೆ. ಇಂಡಿ ತಾಲೂಕಿಗೆ 112 ಬಸ್‌ಗಳಿದ್ದು, ಅದರಲ್ಲಿ ಚಡಚಣ ತಾಲೂಕಿನ 42 ಹಳ್ಳಿಗಳಿಗೆ ಕೇವಲ 25 ಬಸ್‌ಗಳು ಓಡಾಡುತ್ತವೆ. ಅದರಲ್ಲಿ ಇಂಡಿ ಚಡಚಣ ಪ್ರತಿ ಗಂಟೆಗೊಂದು ಓಡಿದರೆ, ಉಳಿದ ಕೆಲ ಹಳ್ಳಿಹಳಿಗೆ ದಿನಕ್ಕೆ ಒಂದು ಬಾರಿ ಹೋದರೆ ಕೆಲ ಹಳ್ಳಿಗಳಿಗೆ ದಿನಕ್ಕೆ ಮೂರು ಬಾರಿ ಕೂಡಾ ಓಡಾಡುತ್ತವೆ. ಪ್ರಯಾಣಿಕರ
ಅನುಕೂಲತೆ ಮೇಲೆ ಬಸ್‌ಗಳು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಿಂದುವಾದ ಜಿಗಜೇವಣಿ ಗ್ರಾಮಕ್ಕೆ ನೂತನ ಸುಸಜ್ಜಿತವಾದ ಬಸ್‌ ನಿಲ್ದಾಣ ನಿರ್ಮಾಣವಾಗಬೇಕು. ಪ್ರತಿಯೊಂದು ಬಸ್‌ ನಿಲ್ದಾಣದಲ್ಲಿ ತಂಗಿ ಹೋಗುವಂತೆ ಮಾರ್ಪಾಡಾಗಬೇಕು. ಜಿಗಜೇವಣಿ ಗ್ರಾಮದಲ್ಲಿ ಬಸ್‌ಗಾಗಿ ಪ್ರಯಾಣಿಕರು ಕಾಯುತ್ತಾ ಕುಳಿತು ಸುಸ್ತಾಗಿ ಟಂಟಂ ಅಥವಾ ಇನ್ನಿತರ ಖಾಸಗಿ ವಾಹನಗಳಿಗೆ ಮೊರೆ ಹೋಗುವ ಪ್ರಸಂಗ ಬಂದಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಬಸ್‌ಗಳು ಓಡಾಡುವಂತೆ ಮಾಡಿದರೆ ಜನರ ಪರದಾಟ ತಪ್ಪುವುದು.
 
ಜಿಗಜೇವಣಿ ಸಮೀಪದ ಕಾತ್ರಾಳ, ಲಮಾನಟ್ಟಿ ಗ್ರಾಮದ ಶಾಲಾ ವಿದ್ಯಾರ್ಥಿಗಳು ವಾಹನವಿಲ್ಲದಿರುವುದರಿಂದ ನಿತ್ಯ ಸೈಕಲ್‌ ಅಥವಾ ನಡೆದುಕೊಂಡು ಅಲೆದಾಟ ನಡೆಸಬೇಕಿದೆ. ಒಂದು ವೇಳೆ ಮಳೆಯಾದರೆ, ಆ ದಿವಸ ಶಾಲೆಗೆ ರಜೆ.
ಇದರಿಂದ ಬೇಸತ್ತ ವಿದ್ಯಾರ್ಥಿಗಳು ಮೇಲಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸದಿರುವುದು ವಿಷಾದನೀಯ.

ಚಡಚಣ ಪಪಂ ನೀಡಿರುವ 4 ಎಕರೆ ಜಾಗದಲ್ಲಿ ಬಸ್‌ ಡಿಪೋ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಡಿಪೋ ಪ್ರಾರಂಭವಾದ ನಂತರ ಪ್ರತಿಯೊಂದು ಗ್ರಾಮಕ್ಕೆ ಬಸ್‌ ವ್ಯವಸ್ಥೆ ಪ್ರಾರಂಭಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗುವುದು.
  ದೇವಾನಂದ ಚವ್ಹಾಣ, ನಾಗಠಾಣ ಶಾಸಕ.

ನಮ್ಮೂರಿಗೆ ಒಂದು ಬಸ್‌ ಇಲ್ಲದ್ದರಿಂದ ನಿತ್ಯ ಶಾಲೆಗೆ ಕೆಲವರು ಕಾಲ್ನಡಿಗೆ ಮೂಲಕ ಸಾಗಿದರೆ ಕೆಲವರು ಸರ್ಕಾರ ನೀಡಿರುವ ಸೈಕಲ್‌ ಬಳಸಿಕೊಂಡು ಶಾಲೆಗೆ ಹೋಗಿ ಬರುತ್ತೇವೆ. ಸರ್ಕಾರ ಕೂಡಲೇ ಬಸ್‌ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕು.
 ಪ್ರೌಢ ಶಾಲಾ ವಿದ್ಯಾರ್ಥಿನಿಯರು, ಲಮಾಣಿಟ್ಟಿ.

„ಶಿವಯ್ಯ ಮಠಪತಿ

Trending videos

Back to Top