CONNECT WITH US  

ಮುದ್ದೇಬಿಹಾಳ ಪುರಸಭೆ ಚುನಾವಣೆ ಫಲಿತಾಂಶ ಇಂದು

ಮುದ್ದೇಬಿಹಾಳ: ಇಲ್ಲಿನ ಪುರಸಭೆಗೆ ಶುಕ್ರವಾರ ನಡೆದಿದ್ದ ಮತದಾನದ ಮತ ಎಣಿಕೆ ಎಂಜಿವಿಸಿ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 8ರಿಂದ ಪ್ರಾರಂಭಗೊಳ್ಳಲಿದೆ. 23 ವಾರ್ಡ್‌ ಪೈಕಿ ಒಂದು ವಾರ್ಡ್‌ಗೆ ಅವಿರೋಧ ಆಯ್ಕೆ ಆದ ಹಿನ್ನೆಲೆ 22 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು.

ಮತಯಂತ್ರಗಳನ್ನು ಎಂಜಿವಿಸಿ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಭದ್ರಪಡಿಸಿಡಲಾಗಿದೆ. ಎಲ್ಲ 22 ಮತಗಟ್ಟೆಗಳ 22 ಮತಯಂತ್ರಗಳಲ್ಲಿ ದಾಖಲಾಗಿರುವ ಏಕಕಾಲಕ್ಕೆ ಎಣಿಸಲು 22 ಟೇಬಲ್‌ ಮತ್ತು ಟೇಬಲ್ಲಿಗೊಬ್ಬರಂತೆ ಎಣಿಕೆ ಸುಪರ್‌ವೈಸರ್‌, ಎಣಿಕೆ ಸಹಾಯಕ ಸೇರಿ 44 ಸಿಬ್ಬಂದಿ ನಿಯೋಜಿಸಲಾಗಿದೆ. ಎಣಿಕೆ ಕೇಂದ್ರದೊಳಕ್ಕೆ ಅಭ್ಯರ್ಥಿ ಜೊತೆ ಒಬ್ಬ ಏಜೆಂಟ್‌ರನ್ನು ಮಾತ್ರ ಒಳಗೆ ಬಿಡಲಾಗುತ್ತದೆ.

ಎಣಿಕೆ ಪ್ರಾರಂಭಗೊಂಡ 15 ನಿಮಿಷದಲ್ಲೇ ಫಲಿತಾಂಶ ಪ್ರಕಟಿಸಲು ತಾಲೂಕಾಡಳಿತ ಸಜ್ಜಾಗಿದೆ. ಸಿಪಿಐ ರವಿಕುಮಾರ ಕಪ್ಪತ್ತನ್ನವರ, ಪಿಎಸೈ ಮಲ್ಲಪ್ಪ ಮಡ್ಡಿ ಉಸ್ತುವಾರಿಯಲ್ಲಿ ಹೆಚ್ಚಿನ ಪೊಲೀಸರನ್ನು ಎಣಿಕೆ ಕೇಂದ್ರದ ಭದ್ರತೆಗೆ ನಿಯೋಜಿಸಲಾಗಿದೆ. ಎಣಿಕೆ ಕೇಂದ್ರದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ವಿಜಯೋತ್ಸವ, ಗುಂಪುಗೂಡುವಿಕೆ
ಮುಂತಾದವುಗಳನ್ನು ನಿಷೇಧಿಸಲಾಗಿದೆ. 

ಚುನಾವಣಾ ವೀಕ್ಷಕ ಕೆಬಿಜೆಎನ್ನೆಲ್‌ ವಿಶೇಷ ಭೂಸ್ವಾಧೀನಾಧಿಕಾರಿ ಸೋಮಲಿಂಗ ಗೆಣ್ಣೂರ, 1ರಿಂದ 11ನೇ ವಾರ್ಡ್‌ ಚುನಾವಣಾಧಿಕಾರಿ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, 12ರಿಂದ 23ನೇ ವಾರ್ಡ್‌ ಚುನಾವಣಾಧಿಕಾರಿ ಪಿಡಬ್ಲೂಡಿ ಎಇಇ ಅರುಣ ಪಾಟೀಲ ಉಸ್ತುವಾರಿ ವಹಿಸಲಿದ್ದಾರೆ.

ಯಾರಿಗೆ ಶುಭ ತರಲಿದೆ ಶ್ರಾವಣ?: ಮತ ಎಣಿಕೆ ದಿನ ಸೋಮವಾರ ಶ್ರಾವಣ ಮಾಸದ ಕಡೆ ಸೋಮವಾರ
ಆಗಿದೆ. ಶ್ರಾವಣ ಮಾಸ ಯಾರಿಗೆ ಶುಭ ತರಲಿದೆ ಎನ್ನುವ ಚರ್ಚೆ ಇಲ್ಲೆಲ್ಲ ನಡೆದಿದೆ. 18ನೇ ವಾರ್ಡನಲ್ಲಿ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಅವಿರೋಧ ಆಯ್ಕೆಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪ್ರಾರಂಭದಲ್ಲೇ ಖಾತೆ ತೆರದು ಉತ್ಸಾಹದಲ್ಲಿದ್ದು ಒಟ್ಟು 22 ವಾರ್ಡ್‌ಗಳಲ್ಲಿ 19 ವಾರ್ಡ್‌ಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಇದೇ 18ನೇ
ವಾರ್ಡನಲ್ಲಿ ಸ್ಪ ರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ನಾಮಪತ್ರ ಹಿಂತೆಗೆದುಕೊಂಡು ಬಿಜೆಪಿಗೆ ಮುಖಭಂಗ ಆಗಿತ್ತು.

ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ 20 ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಅಭ್ಯರ್ಥಿಗಳ ಕೊರತೆ ಎದುರಿಸಿರುವ ಜೆಡಿಎಸ್‌ ಕೇವಲ 15 ವಾರ್ಡ್‌ಗಳಲ್ಲಿ ಮಾತ್ರ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು 14 ವಾರ್ಡ್‌ಗಳಲ್ಲಿ 21 ಪಕ್ಷೇತರರು ಕಣದಲ್ಲಿದ್ದು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ. ಎಲ್ಲ 75 ಸ್ಪರ್ಧಿಗಳ ಹಣೆಬರಹ ಇಂದು ಕೇವಲ ಹತ್ತೇ ನಿಮಿಷದಲ್ಲಿ ಬಹಿರಂಗಗೊಳ್ಳಲಿದೆ. ಮತದಾನದ
ಸಂದರ್ಭ 2, 8, 14ನೇ ವಾರ್ಡ್‌ನಲ್ಲಿ ಬಿಜೆಪಿ ಕಾಂಗ್ರೆಸ್‌ ನಡುವೆ, 17ನೇ ವಾರ್ಡ್‌ನಲ್ಲಿ ಬಿಜೆಪಿ ಪಕ್ಷೇತರ
ನಡುವೆ ನೇರ ಹಣಾಹಣಿ ಇತ್ತು. 3, 7, 13, 15, 23ನೇ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, 4, 22ನೇ ವಾರ್ಡ್‌ನಲ್ಲಿ ಬಿಜೆಪಿ, ಜೆಡಿಎಸ್‌, ಪಕ್ಷೇತರ ಮತ್ತು 5, 6, 19ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ, ಪಕ್ಷೇತರರ ನಡುವೆ ತ್ರಿಕೋನ ಸ್ಪರ್ಧೆ ಇತ್ತು.

1, 9, 10, 11, 12, 16, 20, 21ನೇ ವಾರ್ಡ್‌ಗಳಲ್ಲಿ 4 ಮತ್ತು 4ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು ಬಹುಮುಖ ಸ್ಪರ್ಧೆ ಕಂಡು ಬಂದಿತ್ತು. ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ ಇದೇ ಮೊದಲ ಬಾರಿ ಪುರಸಭೆ ಚುನಾವಣಾ ಕಣದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಧಿಕಾರ ಹಿಡಿಯುವ ಧಾವಂತದಲ್ಲಿ ಇದೆ. ಆದರೆ ಹೆಚ್ಚು ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊಮ್ಮಿದರೂ ಪುರಸಭೆ ಅಧಿಕಾರ ಹಿಡಿಯಲು ಅಗತ್ಯವಾಗಿರುವ ಬಹುಮತ 12 ಸ್ಥಾನ ಗಳಿಸುವಲ್ಲಿ ಹಿನ್ನೆಡೆಯಾಗುವ ನಿರೀಕ್ಷೆ ಇದ್ದು ಕಾಂಗ್ರೆಸ್‌, ಜೆಡಿಎಸ್‌ ಸೇರಿಕೊಂಡು ಸಮ್ಮಿಶ್ರ ಅಕಾರ ನಡೆಸುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.

Trending videos

Back to Top