CONNECT WITH US  

ಕಾನೂನು ಸದುಪಯೋಗಕ್ಕೆ ಸಲಹೆ

ಮುದ್ದೇಬಿಹಾಳ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಕಷ್ಟು ಕಾನೂನುಗಳನ್ನು ಅನುಷ್ಠಾನ ಮಾಡಲಾಗಿದ್ದು ಪ್ರತಿಯೊಬ್ಬ ಮಹಿಳೆಯೂ ಅವುಗಳ ಸದುಪಯೋಗಪಡೆದುಕೊಳ್ಳುವಂತೆ ನ್ಯಾಯಾಧೀಶೆ ಕಾವೇರಿ ಹೇಳಿದರು.

ಇಂದಿರಾ ನಗರದ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಕಂದಾಯ ಇಲಾಖೆ, ತಾಪಂ, ಸಿಡಿಪಿಒ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮಹಿಯರ ಮೇಲೆ ಆಗುವ ದೌರ್ಜನ್ಯ ಮತ್ತು ಮಕ್ಕಳಲ್ಲಿ
ಅಪೌಷ್ಟಿಕತೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಲ್ಲಿದ್ದರೂ ಕಲ್ಪನಾ ಚಾವ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿರಿಮೆ ನಮಗೆ ತಿಳಿಯಬೇಕು. ಆದರೆ ಅದೇ ದೇಶದ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎನ್ನುವುದು ದುರದೃಷ್ಟಕರ ಸಂಗತಿ. ಇದಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಕಾನೂನು ಸೇವಾ ಸಮಿತಿ ವತಿಯಿಂದ ಉಚಿತವಾಗಿ ಸಲಹೆ ಸೂಚನೆ ನೀಡಲಾಗುತ್ತಿದೆ. ಇದನ್ನು ಎಲ್ಲ ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಮಹಿಳೆಯರ ಮೇಲೆ ದೌರ್ಜನ್ಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ನ್ಯಾಯವಾದಿ ರಶ್ಮಿ ಕುಲಕರ್ಣಿ, ಮಹಿಳೆಯ ಮೇಲೆ ದೌರ್ಜನ್ಯ ತಾಯಿ ಹೊಟ್ಟೆಯಲ್ಲಿರುವಾಗಲೇ ಪ್ರಾರಂಭವಾಗುತ್ತಿತ್ತು. ಇದಕ್ಕಾಗಿ ಸರಕಾರ ಭ್ರೂಣ ಹತ್ಯೆ ಸೇರಿದಂತೆ ಇನ್ನಿತರ ಮಹಿಳಾ ದೌರ್ಜನ್ಯದ ಬಗ್ಗೆ ಕಠಿಣ ಕಾನೂನು ಜಾರಿ ಮಾಡಿದೆ. ಆದರೆ ಇವುಗಳ ಸದುಪಯೋಗ
ಎಲ್ಲರೂ ಪಡೆಯಬೇಕು ಎಂದು ಹೇಳಿದರು. 

ಮಕ್ಕಳಲ್ಲಿ ಅಪೌಷ್ಟಿಕತೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ ಉಪನ್ಯಾಸ ನೀಡಿದರು. ಸಿವಿಲ್‌ ನ್ಯಾಯಾಧೀಶ ರಘುನಾಥಗೌಡ ಕೆ.ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎನ್‌. ಆರ್‌.ಗುರಿಕಾರ, ಅಂಗನವಾಡಿ ಮೇಲ್ವಿಚಾರಕಿ ಶಿಲ್ಪಾ ನಾಯಕ ಇದ್ದರು. ಕವಿತಾ ಸ್ವಾಗತಿಸಿದರು. ಸುದಾನ
ನಿರೂಪಿಸಿದರು. ಶಶಿಕಲಾ ಮಠ ವಂದಿಸಿದರು.

ಅಧಿಕಾರಿಗಳು ಗೈರು: ತಹಶೀಲ್ದಾರ್‌, ತಾಪಂ ಇಒ, ತಾಲೂಕು ಯೋಜನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಡಿಪಿಒ, ಸಿಪಿಐ, ಪಿಎಸ್‌ಐ ಅವರು ಗುರುವಾರ ನಡೆದ ವಿಧಾನ ಪರಿಷತ್‌ ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.


Trending videos

Back to Top