CONNECT WITH US  

ಪಿಒಪಿ ಮೂರ್ತಿ ವಿಸರ್ಜನೆ ನಿಷೇಧ

ವಿಜಯಪುರ: ಜಿಲ್ಲೆಯಲ್ಲಿ ಈ ಗಣೇಶ ಉತ್ಸವ ಸಂಪೂರ್ಣ ಪರಿಸರ ಸ್ನೇಹಿ ಮಾಡಲು ಜಿಲ್ಲಾಡಳಿತ ಪಣ ತೊಟ್ಟಿದ್ದು,
ರಸಾಯನಿಕ ಪರಿಕರಗಳಿಂದ ರೂಪಿಸಿದ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಿದೆ. ಅಲ್ಲದೆ ಅಪ್ಪಟ ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆಗೂ ಕೃತಕ ಹೊಂಡ ನಿರ್ಮಿಸಿದ್ದು ಜಲಮೂಲಗಳ ಸಂರಕ್ಷಣೆಗೆ ಮುಂದಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಗಣೇಶ ಉತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಸಾಮೂಹಿಕ ಗಣೇಶ
ಉತ್ಸವ ಸಮಿತಿಗಳಂತೂ ವೈವಿಧ್ಯಮಯ ಆಚರಣೆಗಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತವೆ. ಕಳೆದ ಕೆಲ ದಶಕಗಳಿಂದ ಸಾಂಪ್ರದಾಯಿಕ ಮಣ್ಣಿನ ಗಣೇಶ ಮೂರ್ತಿಗಳ ಬದಲಾಗಿ ರಾಸಾಯನಿಕ ಬಳಕೆಯ ಪಿಒಪಿ ಅಂದರೆ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಮಾಡಿದ ಗಣೇಶ ಮೂರ್ತಿಗಳ ಬಳಕೆ ಸಾಮಾನ್ಯವಾಗಿದ್ದು ಪರಿಸರಕ್ಕೆ ಧಕ್ಕೆ ಆಗುತ್ತಿದೆ.

ಪಿಒಪಿ ಗಣೇಶ ಮೂರ್ತಿ ವಿಸರ್ಜನೆಯಿಂದ ಜಲಮೂಲಗಳು ಮೂಲ ಅಸ್ತಿತ್ವ ಕಳೆದಕೊಂಡು ನಿರ್ಜೀವವಾಗಿವೆ.
ಕಳೆದ ವರ್ಷ ನಗರದಲ್ಲಿರುವ ಐತಿಹಾಸಿಕ ಜಲಮೂಲಗಳಾದ ಬಾವಿ-ಹೊಂಡಗಳ ಜೀರ್ಣೋದ್ಧಾರ ನಡೆಸಿದ್ದು, ಬತ್ತಿದ
ಭಾವಿಗಳು ಜಲ ಸೆಲೆಗಳು ಮರು ಜೀವ ಪಡೆದಿದ್ದು ನೀರು ಶುದ್ಧೀಕರಣ ಘಟಕಗಳನ್ನೂ ಅಳವಡಿಸಲಾಗಿದೆ.
 
ಇದನ್ನರಿತ ಜಿಲ್ಲಾಡಳಿತ ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ನಿರ್ಮಾಣ, ಬಳಕೆಯನ್ನು
ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ನಿಷೇಧಕ್ಕೆ ನಾಂದಿ ಹಾಡಿದೆ. ಕಳೆದ ವರ್ಷದಿಂದ ಅದು ಬಹುತೇಕ ಚಾಲನೆ
ಪಡೆದಿದೆ. ವಿಜಯ ಪುರ ನಗರದಲ್ಲಿ 350ಕ್ಕೂ ಹೆಚ್ಚು ಹಾಗೂ ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚಿನ ಸಾರ್ವಜನಿಕ ಗಣೇಶ ಮೂರ್ತಿಗಳು ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ನಗರದಲ್ಲಿನ ಬಹುತೇಕ ಗಣೇಶ ಮೂರ್ತಿಗಳ ಐತಿಹಾಸಿಕ ಜಲಮೂಲ ಸ್ಮಾರಕ ತಾಜ್‌ ಬಾವಡಿ ಬಾವಿಯಲ್ಲಿ ವಿಸರ್ಜಿಸುವ ವ್ಯವಸ್ಥೆಗೂ ಕಡಿವಾಣ ಹಾಕಲಾಗಿದೆ. 

ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಈ ಮಧ್ಯೆ ಪರಿಸರ ಸ್ನೇಹಿ ಗಣೇಶ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ತಿಂಗಳ ಮೊದಲೇ ಗಣೇಶ ಮೂರ್ತಿಗಳ ತಯಾರಕರು, ಮಾರಾಟಗಾರರ ಸಭೆ ಕರೆದು ಪಿಒಪಿ ಮೂರ್ತಿ ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
 
ಕಡ್ಡಾಯವಾಗಿ ಮಣ್ಣಿನ ಮೂರ್ತಿಗಳನ್ನೇ ತಯಾರಿಸಿ ಮಾರಬೇಕು. ಅಪ್ಪಟ ಮಣ್ಣಿನ ಮೂರ್ತಿಗಳನ್ನೇ ಖರೀದಿಸಿ,
ಪೂಜಿಸುವಂತೆ ಗ್ರಾಹಕರಲ್ಲೂ ಜಾಗೃತಿ ಮೂಡಿಸಬೇಕು. ಇದರ ಹೊರತಾಗಿಯೂ ನಿಯಮ ಮೀರಿ ಪಿಒಪಿ ಮೂರ್ತಿ
ತಯಾರಿಸಿ ಮಾರಿದರೆ ಕಠಿಣ ಕ್ರಮ ಖಚಿತ ಎಂದೂ ಎಚ್ಚರಿಸಿದ್ದು ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ
ಸ್ಥಾಪನೆ ಬಹುತೇಕ ಹೆಚ್ಚುವ ನಿರೀಕ್ಷೆ ಇರಿಸಲಾಗಿದೆ.

ಮತ್ತೂಂದೆಡೆ ಗಣೇಶ ವಿಸರ್ಜನೆಗೆ ಪ್ರತ್ಯೇಕ ಹೊಂಡಗಳ ನಿರ್ಮಿಸಲಾಗುತ್ತಿರುವ ಕಾರಣ, ನಗರದ ಕೆರೆ-ಹೊಂಡಗಳಲ್ಲಿ
ಮೂರ್ತಿಗಳ ವಿಸರ್ಜನೆ ಸಂಪೂರ್ಣ ನಿಷೇಧಿಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಅವರು
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಕಡ್ಡಾಯಗೊಳಿಸಿ ಹಲವು ಬಾರಿ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ
ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. 

ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ-ಮಾರಾಟವನ್ನು ಹಾಗೂ ಐತಿಹಾಸಿಕ ಬಾವಡಿಗಳಿಗೆ ಮೂರ್ತಿಗಳ ವಿಸರ್ಜನೆಯನ್ನೂ ಸಂಪೂರ್ಣ ನಿಷೇಧಿಸಿದೆ. ಮಣ್ಣಿನ ಗಣೇಶ ಮೂರ್ತಿ ವಿಸರ್ಜನೆಗೆ ಕೃತಕ ಹೊಂಡಗಳ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಗಳು ಸೂಕ್ತ ವ್ಯವಸ್ಥೆ ಮಾಡಲಿವೆ. ಇದರ ಹೊರತಾಗಿ ನಿಯಮ ಮೀರಿದ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
 ಎಸ್‌.ಬಿ. ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ವಿಜಯಪುರ.

ಇಂದು ಹೆಚ್ಚು ಓದಿದ್ದು

ಕಲಘಟಗಿ: ಹಿರೇಹೊನ್ನಿಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು.

Nov 16, 2018 05:31pm

ಸುಯೋಗ ನಿಸರ್ಗ ಚಿತ್ರಕಲಾ ಶಿಬಿರ ನಡೆಯಿತು.

Nov 16, 2018 11:47am

ತನ್ನ ಕನಸಿನ ಮನೆಯೊಂದಿಗೆ ಫಾರೂಕ್‌.

Nov 16, 2018 11:09am

Trending videos

Back to Top