CONNECT WITH US  

ಮೇಲ್ಮನೆ ಉಪಕದನ: ಗರಿಗೆದರಿದ ಲೆಕ್ಕಾಚಾರ

ವಿಜಯಪುರ: ಸ್ಥಳೀಯ ಸಂಸ್ಥೆಗಳ ವಿಜಯಪುರ-ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯ ಮತದಾನದ ಮೂಲಕ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಭದ್ರವಾಗಿದ್ದು, ಸೆ. 11ರಂದು ಮತ ಎಣಿಕೆ ನಡೆಯುತ್ತಿರುವ ಕಾರಣ ಅವಳಿ ಜಿಲ್ಲೆಯಲ್ಲಿ ರಾಜಕೀಯ ಕುತೂಹಲ ಮೂಡಿಸಿದೆ.

ಅವಳಿ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ 8,187 ಸದಸ್ಯರಲ್ಲಿ 8,111 ಮತದಾರರು ಸೆ. 6ರಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜೆಡಿಎಸ್‌ ಬೆಂಬಲಿತ ಮೈತ್ರಿ ಪಕ್ಷಗಳ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಹಾಗೂ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರ ಕಿರಿಯ ಸಹೋದರ ಸುನೀಲಗೌಡ ಪಾಟೀಲ ಸ್ಪರ್ಧಿಸಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಗೂಳಪ್ಪ ಶಟಗಾರ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಇವರಿಬ್ಬರ ಹೊರತಾಗಿ ಪಕ್ಷೇತರಾಗಿ ಕಾಂತಪ್ಪ ಇಂಚಗೇರಿ, ದುರ್ಗಪ್ಪ ಸಿದ್ದಾಪುರ, ಮಲ್ಲಿಕಾರ್ಜುನ ಕೆಂಗನಾಳ, ಜಮೀನಾªರ ಮಾರುತಿ ಹನಮಪ್ಪ, ಶರಣಪ್ಪ ಕನ್ನೊಳ್ಳಿ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗಾಗಿ ಕಣದಲ್ಲಿದ್ದಾರೆ.

ಕಳೆದ ಎರಡೂವರೆ ವರ್ಷಗಳ ಹಿಂದೆ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯತ್ವಕ್ಕೆ
ಚುನಾವಣೆ ನಡೆದಿತ್ತು. ಒಂದು ಸ್ಥಾನದಲ್ಲಿ ಮಾಜಿ ಸಚಿವ, ಬಾಗಲಕೋಟೆ ಜಿಲ್ಲೆಯ ಎಸ್‌.ಆರ್‌. ಪಾಟೀಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಈ ಸ್ಥಾನ ಬಾಗಲಕೋಟೆ ಜಿಲ್ಲೆಯ ಜಿ.ಎಸ್‌. ನ್ಯಾಮಗೌಡ ಅವರ ಮೂಲಕ ಬಿಜೆಪಿ ವಶದಲ್ಲಿತ್ತು. ಬಿಜೆಪಿ ಟಿಕೆಟ್‌ ಸಿಗದೇ ಬಂಡೆದದ್ದು ಪಕ್ಷೇತರರಾಗಿ ಸ್ಪರ್ಧಿಸಿ
ಬಸನಗೌಡ ಪಾಟೀಲ ಯತ್ನಾಳ ಗೆದ್ದಿದ್ದರು.

ಮೂರು ತಿಂಗಳ ಹಿಂದೆ ಯತ್ನಾಳ ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಯತ್ನಾಳ ಅವರಿಂದ
ತೆರವಾದ ಒಂದು ಸ್ಥಾನಕ್ಕೆ ನಡೆದ ಉಪ ಚುನವಣೆಯಲ್ಲಿ ಸೆ.6ರಂದು ಮತದಾನವಾಗಿದೆ. ಸೆ.11ರಂದು ವಿಜಯಪುರ ನಗರದಲ್ಲಿ ಮತ ಎಣಿಕೆ ನಡೆಯಲಿದೆ.

ಇತ್ತ ಚುನಾವಣೆಯಲ್ಲಿ ಮತದಾನ ಮುಗಿಯುತ್ತಲೇ ಅವಳಿ ಜಿಲ್ಲೆಗಳಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ನಡೆದಿದೆ.
ಯತ್ನಾಳ ಅವರು ಸ್ಪರ್ಧಿಸಿದಾಗ ಎಸ್‌. ಆರ್‌. ಪಾಟೀಲ ಅವರ ಗೆಲುವಿಗೆ ಬೇಕಾದ ಮತಗಳ ಹೊರತಾಗಿ ಉಳಿದ ಮತಗಳನ್ನು ಕಾಂಗ್ರೆಸ್‌ ಪಕ್ಷದ ಮುಖಂಡರು ಯತ್ನಾಳ ಅವರಿಗೆ ಕೊಡಿಸಿ ಗೆಲ್ಲಿಸಿದ್ದರು. ವಿಜಯಪುರ ಜಿಲ್ಲೆಯ ರಾಜಕೀಯ ಪ್ರಾತಿನಿಧ್ಯಕ್ಕಾಗಿ, ಬಿಜೆಪಿ ಬಂಡುಕೋರ ಯತ್ನಾಳ ಅವರನ್ನು ಗೆಲ್ಲಿಸಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ರಾಜಕೀಯ ತಂತ್ರ ರೂಪಿಸಲಾಗಿತ್ತು. ಇದೀಗ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಬಬಲೇಶ್ವರ ಶಾಸಕ ಡಾ| ಎಂ.ಬಿ. ಪಾಟೀಲ ಅವರಿಗೂ ತಮ್ಮ ಕಿರಿಯ ಸಹೋದರ ಸುನಿಲಗೌಡ ಅವರನ್ನು ಗೆಲ್ಲಿಸಿ, ಕಾಂಗ್ರೆಸ್‌ ಹೈಕಮಾಂಡ್‌ಗೆ ತಮ್ಮ ರಾಜಕೀಯ ಶಕ್ತಿ ಮನವರಿಕೆ ಮಾಡಿಕೊಡಬೇಕಿದೆ. 

ಇದೀಗ ಮತ್ತೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ಗೂಳಪ್ಪ ಶಟಗಾರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ತಮ್ಮಿಂದ ತೆರವಾಗಿರುವ ಸ್ಥಾನವನ್ನು ಬಿಜೆಪಿಗೆ ಮರಳಿ ಪಡೆಯುವುದು ಯತ್ನಾಳ ಅವರಿಗೆ ರಾಜಕೀಯ ಪ್ರತಿಷ್ಠೆಯಾಗಿದೆ. ಹೀಗಾಗಿ ಮತ ಎಣಿಕೆ ನಡೆಯುವ ಮಂಗಳವಾರ ದಿನದತ್ತ ಎಲ್ಲ ಚಿತ್ತ ನೆಟ್ಟಿದ್ದು, ಬಿಜೆಪಿ ವಶದಲ್ಲಿದ್ದ ಈ ಸ್ಥಾನ ದಶಗಳ ಬಳಿಕ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ನಡೆಸಿರುವ ಪ್ರಯತ್ನಗಳು ಫಲ ನೀಡುವುದೇ, ಬಿಜೆಪಿ ಮತ್ತೆ ಸ್ಥಾನವನ್ನು ಉಳಿಸಿಕೊಳ್ಳುವುದೇ ಎಂಬುದು ರಾಜಕೀಯ ಕುತೂಹಲದ
ಪ್ರಶ್ನೆಯಾಗಿದೆ.

„ಜಿ.ಎಸ್‌. ಕಮತರ


Trending videos

Back to Top