CONNECT WITH US  

ಅನ್ನದಾತರ ಏಳ್ಗೆಗೆ ರಾಜಕಾರಣಿಗಳು ಶ್ರಮಿಸಲಿ: ಬಿರಾದಾರ

ಮುದ್ದೇಬಿಹಾಳ: ದೇಶದ ಬೆನ್ನೆಲುಬು ಎಂದು ಹೇಳಿಕೊಂಡು ಚುನಾಯಿತರಾಗುತ್ತಿರುವ ರಾಜಕಾರಣಿಗಳಿಗೆ ರೈತರು ಬರಗಾಲದಿಂದ ತತ್ತರಿಸಿದಾಗ ಅವರ ಏಳ್ಗೆಗೆ ಶ್ರಮಿಸದಿರುವುದು ದುರಾದೃಷ್ಟಕರವಾಗಿದೆ. ಆದ್ದರಿಂದ ರೈತರು ಒಗ್ಗೂಡಿ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣಗೌಡ ಬಿರಾದಾರ ಕರೆ ನೀಡಿದರು.

ತಾಲೂಕಿನ ಯರಝರಿ ಗ್ರಾಮದ ಬಬಲಾದಿ ಸದಾಶಿವ ಮಠದಲ್ಲಿ ಏರ್ಪಡಿಸಿದ್ದ ರೈತರ ಸಮಾವೇಶ ಹಾಗೂ ರೈತ ಸಂಘದ ಯರಝರಿ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದ ಅವರು ಮಾತನಾಡಿದರು.
 
ಮುದ್ದೇಬಿಹಾಳ ತಾಲೂಕಲ್ಲಿ ಸತತ ನಾಲ್ಕು ವರ್ಷಗಳಿಂದ ಭೀಕರ ಬರಗಾಲ ರೈತರನ್ನು ದಿಕ್ಕುಗೆಡಿಸಿದ್ದು ರೈತರು ತತ್ತರಿಸಿದ್ದಾರೆ. ಆತ್ಮಹತ್ಯೆಯತ್ತ ಸಾಗಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಗುಳೆ ಹೋಗುವ ಹವಣಿಕೆಯಲ್ಲಿದ್ದಾರೆ. ದನಕರುಗಳಿಗೆ ನೀರು, ಮೇವಿನ ಸಂಕಷ್ಟ ಎದುರಾಗಿದೆ. ರೈತರಿಗೆ ದುಡಿಯಲು ಕೆಲಸ ಇಲ್ಲ. ಇಷ್ಟಾದರೂ ಸರ್ಕಾರ
ರೈತರ ನೆರವಿಗೆ ಧಾವಿಸುತ್ತಿಲ್ಲ. ರೈತರ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಹೊಸ ಚೈತನ್ಯ ತುಂಬುವ ಕೆಲಸ ಸರಕಾರ ಮಾಡುತ್ತಿಲ್ಲ ಎಂದು ಹರಿಹಾಯ್ದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ವಕೀಲ ಸಿದ್ದನಗೌಡ ಬಿರಾದಾರ ಮಾತನಾಡಿ, ರೈತರ ಸಮಸ್ಯೆ ಮನದಟ್ಟು ಮಾಡಿಕೊಡಲು ಹಳ್ಳಿಯಿಂದ ದಿಲ್ಲಿವರೆಗೆ ರೈತರು ಚಳವಳಿ ಮಾಡುವ ಕಾಲ ದೂರವಿಲ್ಲ. ಎಲ್ಲ ರಾಜಕಾರಣಿಗಳು ರೈತರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿ ಅವರ ಸಂಕಷ್ಟಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಹೊರತು ನೆರವಿಗೆ ಧಾವಿಸುತ್ತಿಲ್ಲ. ಸರ್ಕಾರ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳುತ್ತಿರುವುದು ಹೆಸರಿಗೆ ಮಾತ್ರ. ಆದರೆ ನಿಜವಾಗಿಯೂ ನೋಡಿದಲ್ಲಿ ರೈತರಿಗೆ ಯಾವುದೇ ಅನುಕೂಲ ಆಗಿಲ್ಲ ಎಂದರು.

ಇದೇ ವೇಳೆ ರೈತರ ಪ್ರಮುಖ ಬೇಡಿಕೆಗಳಾದ ರಾಷ್ಟ್ರೀಕೃತ ಬ್ಯಾಂಕುಗಳ ರೈತರ, ಸ್ತ್ರೀ ಶಕ್ತಿ ಸಂಘಗಳ ಮತ್ತು ಕುರಿ ಸಾಕಾಣಿಕೆಗಾಗಿ ಮಾಡಿದ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 10 ತಾಸು ಗುಣಮಟ್ಟದ ವಿದ್ಯುತ್‌ ಪೂರೈಸಬೇಕು. ರೈತರಿಗೆ ಬರಬೇಕಾದ ಬೆಳೆ ವಿಮೆ, ಬೆಳೆ ಪರಿಹಾರ ಕುರಿತು ಗಂಭೀರ
ಚರ್ಚೆ ನಡೆಯಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. 

ನ್ಯಾಯಾಲಯದಲ್ಲಿರುವ ಕೆಬಿಜೆಎನ್ನೆಲ್‌ ವ್ಯಾಪ್ತಿಯ ರೈತರ ಭೂಪರಿಹಾರದ ಹಣ ಶೀಘ್ರ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು. ರೈತರು ಬೆಳೆದ ಮಾಲು ಮಾರುಕಟ್ಟೆಗೆ ಸಾಗಿಸಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ವಿಧವಾ, ವೃದ್ಧಾಪ್ಯ ವೇತನ ಶೀಘ್ರ ಬಟವಡೆ ಆಗುವಂತಾಗಬೇಕು. ರೈತರಿಗೆ ಬೀಜ ಗೊಬ್ಬರ ಉಚಿತವಾಗಿ ಪೂರೈಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ನಿಗದಿಪಡಿಸಿದ ಸ್ಥಳದಲ್ಲೇ ವಾಸ್ತವ್ಯ ಮಾಡುವಂತಾಗಬೇಕು ಎಂಬವುಗಳನ್ನು ಈಡೇರಿಸಲು ಸರ್ಕಾರಕ್ಕೆ ಪತ್ರ ಬರೆಯಲು ಸಮಾವೇಶದಲ್ಲಿ ತೀರ್ಮಾನಿಸಲಾಯಿತು.

ಯರಝರಿ ಯಲ್ಲಾಲಿಂಗ ಮಠದ ಮಲ್ಲಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಪ್ರಮುಖರಾದ ವೈ.ಎಲ್‌. ಬಿರಾದಾರ, ಎಸ್‌.ಡಿ. ಗುರಿಕಾರ, ಕೃಷ್ಣಪ್ಪ ನಾಯಕ, ಎಂ.ಎಂ. ಅಪರಾ , ಎಸ್‌.ಸಿ. ಹುಲ್ಲೂರ, ವಿ.ಐ. ಹಿರೇಮಠ, ಬಿ.ಡಿ. ದೇಶಮುಖ, ಕೆ.ಎಸ್‌. ಬಿರಾದಾರ, ಶಂಕರಗೌಡ ಬಿರಾದಾರ ಸೇರಿದಂತೆ ಹಲವು ರೈತ ಧುರೀಣರು, ಸ್ಥಳಿಯ ಪ್ರಗತಿಪರ ರೈತರು ವೇದಿಕೆಯಲ್ಲಿದ್ದರು. ಯರಝರಿ ಗ್ರಾಪಂ ಉಪಾಧ್ಯಕ್ಷ ಮಹಾಂತೇಶ ಪಟ್ಟಣದ ನಿರೂಪಿಸಿದರು. 


Trending videos

Back to Top