CONNECT WITH US  

ನಾಳೆ ಅಕ್ಕಮಹಾದೇವಿ ವಿವಿ ಘಟಿಕೋತ್ಸವ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಫೆ.13ರಂದು ನಡೆಯಲಿದ್ದು, ಧಾರವಾಡದ ಸಂಗೀತ ಸಾಧಕಿ ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿವಿ ಉಪ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಜರುಗಲಿರುವ ಘಟಿಕೋತ್ಸವದಲ್ಲಿ ಎಚ್ಎಎಲ್‌ ಪ್ರಧಾನ ವ್ಯವಸ್ಥಾಪಕಿ ನೇಮಿಚಂದ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಫೆ.13ರಂದು ಬೆ.11 ಗಂಟೆಗೆ ವಿಶ್ವವಿದ್ಯಾಲಯದ ಆವರಣದ ಕ್ರೀಡಾಂಗಣದಲ್ಲಿ ಮಹಿಳಾ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ.ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದರು.

46 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ. ಮತ್ತು 10 ವಿದ್ಯಾರ್ಥಿನಿಯರಿಗೆ ಎಂ.ಫಿಲ್‌ ಹಾಗೂ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕ ಪಡೆದ 56 ವಿದ್ಯಾರ್ಥಿನಿಯರಿಗೆ 67 ಚಿನ್ನದ ಪದಕ ಸಹಿತ ಪದವಿ ಪ್ರದಾನ ನಡೆಯಲಿದೆ. ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೊಮಾ ಸೇರಿ ಒಟ್ಟು 10,873 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 1293 ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗಿದೆ ಎಂದರು.

ವಿವಿ ಪರ್ಯಾಯ ಇಂಧನ ಬಳಕೆ ಉತ್ತೇಜಿಸುತ್ತಿದ್ದು, ಕೇಂದ್ರ ಸರ್ಕಾರದ ಎಸ್‌ಸಿಐ-ಬೂಟ ಯೋಜನೆ ಅಡಿಯಲ್ಲಿ 170 ಕೆವಿ ವಿದ್ಯುತ್‌ ಉತ್ಪಾದಿಸುವ 2 ಸೌರ ಘಟಕ ಸ್ಥಾಪಿಸಲಾಗಿದೆ. ಇದರಿಂದ ವಿವಿಗೆ ಮಾಸಿಕ 1 ಲಕ್ಷ ರೂ. ಉಳಿತಾಯವಾಗುತ್ತಿದೆ. ಇದಲ್ಲದೇ ದೇಶದಲ್ಲೇ ಮೊಟ್ಟ ಮೊದಲು ಬಾರಿ ಮಹಿಳಾ ಅಸ್ಮಿತೆ-ಮಹಿಳಾ ಅನನ್ಯತೆ ಪ್ರತಿಬಿಂಬಿಸುವ ಮಹಿಳಾ ವಸ್ತುಸಂಗ್ರಹಾಲಯ ಸ್ಥಾಪನೆ ಯೋಜನೆ ರೂಪಿಸಿದ್ದು, 10 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವನೆ ಕೇಂದ್ರದ ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತ್ಯೇಕವಾಗಿ ಸಲ್ಲಿಸಲಾಗಿದೆ ಎಂದರು.

ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ತರಬೇತಿಗಾಗಿ ಅಲ್ಪಾವಧಿ-ಮಧ್ಯಮಾವಧಿ ಕೋರ್ಸ್‌ ಆರಂಭಿಸಲು ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜಿಸಲಾಗಿದೆ. ಬೋಧನೆಯಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಹಿತಿ ತಂತ್ರಜ್ಞಾನ ಆಧಾರದಲ್ಲಿ ಮಾ.8ರಂದು ಮಹಿಳಾ ದಿನಾಚರಣೆ ದಿನ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಟೆಲಿ ಎಜ್ಯುಕೇಶನ್‌ ಕಾರ್ಯಕ್ರಮ ಪ್ರಸಾರಕ್ಕೆ ಯೋಜಿಸಿದ್ದೇವೆ. ವಿಶ್ವವಿದ್ಯಾನಿಲಯದಲ್ಲಿ ಹಸಿರೀಕರಣ ಹೆಚ್ಚಳಕ್ಕಾಗಿ ವಿವಿಧ 987 ಬಗೆಯ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದ್ದು, ಓರ್ವ ವಿದ್ಯಾರ್ಥಿನಿ ಒಂದು ಸಸಿ ದತ್ತು ಯೋಜನೆ ಆರಂಭಿಸಲಾಗಿದೆ ಎಂದರು.

ಪತ್ರಿಕೋದ್ಯಮ ವಿಭಾಗದಲ್ಲಿ ಡಾ.ಎಸ್‌.ಎಸ್‌.ಸಿದರೆಡ್ಡಿ ಟ್ರಸ್ಟ್‌ನಿಂದ ಪ್ರಥಮ ಮಹಿಳಾ ಕಾರ್ಯಪಡೆಯ ಅಧ್ಯಕ್ಷರಾಗಿದ್ದ ಗುರಮ್ಮ ಸಿದರೆಡ್ಡಿ ದತ್ತಿ ಹಾಗೂ ಎ.ಕೆ. ಬರಡೋಲ ಹೆಸರಿನಲ್ಲಿ ಗ್ರಂಥಾಲಯ ವಿಭಾಗದಲ್ಲಿ ದತ್ತಿ ಉಪನ್ಯಾಸ ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷ ಕನ್ನಡ, ಮಹಿಳಾ ಅಧ್ಯಯನ, ಗ್ರಂಥಾಲಯ ಹಾಗೂ ಪತ್ರಿಕೋದ್ಯಮ ವಿಭಾಗಗಳಲ್ಲಿ ತಲಾ ಒಂದೊಂದು ಚಿನ್ನದ ಪದಕ ನೀಡಲಾಗುತ್ತಿದೆ. ಸಾವಿತ್ರಿ ಪಂಚಗಟ್ಟಿ ಹೆಸರಿನಲ್ಲಿ ವಿವಿಧ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸಲು 4 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿ ವೇತನ ನೀಡಲು ನಿಧಿ ಸ್ಥಾಪಿಸಲಾಗಿದೆ ಎಂದರು. ಕುಲಸಚಿವೆ ಪ್ರೊ.ಆರ್‌.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪಿ.ಜಿ.ತಡಸದ, 10ನೇ ಘಟಿಕೋತ್ಸವದ ಸಂಯೋಜನಾಧಿಕಾರಿ ಡಿ.ಎಂ.ಜ್ಯೋತಿ, ಮಾಧ್ಯಮ ಸಂಯೋಜನಾಧಿಕಾರಿ ಓಂಕಾರ ಕಾಕಡೆ ಇದ್ದರು.


Trending videos

Back to Top