ಮಾಧ್ಯಮಗಳಿಗೆ ಟ್ರಂಪ್ ಪ್ರಶಸ್ತಿ ಕೊಡ್ತಾರಂತೆ
Team Udayavani, Jan 4, 2018, 7:03 AM IST
ಹಾಲಿವುಡ್ನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭಕ್ಕಾಗಿ ಎದುರು ನೋಡುತ್ತಿದ್ದ ಅಮೆರಿಕದ ಮಂದಿಯ ಚಿತ್ತ ಈಗ ಬೇರೊಂದು ಪ್ರಶಸ್ತಿಯೆಡೆಗೆ ನೆಟ್ಟಿದೆ.
ಸಿನಿಮಾ ಪ್ರಶಸ್ತಿಗಳಿಗಿಂತಲೂ ಈ ಪ್ರಶಸ್ತಿ ಆಮೆರಿಕನ್ನರ ಆಸಕ್ತಿ ಕೆರಳಿಸಿದೆ. ಕಾರಣ, ಆ ಪ್ರಶಸ್ತಿಯನ್ನು ಘೋಷಿಸುತ್ತಿರುವವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಟ್ರಂಪ್ ಮತ್ತು ಮಾಧ್ಯಮಗಳ ಸಂಬಂಧ ಅಷ್ಟಕ್ಕಷ್ಟೇ. ಆದರೂ ಅವರು ಪ್ರಶಸ್ತಿ ಕೊಡುವುದಾಗಿ ಘೋಷಿಸಿದ್ದಾರೆ. ಈ ಪ್ರಶಸ್ತಿ ಹೆಸರು “ಮೋಸ್ಟ್ ಡಿಸ್ಆನೆಸ್ಟ್ ಆ್ಯಂಡ್ ಕರಪ್ಟ್ ಮೀಡಿಯಾ’ (ಅತ್ಯಂತ ಅಪ್ರಾಮಾಣಿಕ ಮತ್ತು ಭ್ರಷ್ಟ ಮಾಧ್ಯಮ) ಪ್ರಶಸ್ತಿ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸೋಮವಾರ ಸಂಜೆ 5 ಗಂಟೆಗೆ ನಾನು ವರ್ಷದ “ಮೋಸ್ಟ್ ಡಿಸ್ಆನೆಸ್ಟ್ ಆ್ಯಂಡ್ ಕರಪ್ಟ್ ಮೀಡಿಯಾ’ ಪ್ರಶಸ್ತಿ ಘೋಷಿಸಲಿದ್ದೇನೆ. ನಕಲಿ ಮಾಧ್ಯಮಗಳ ಅಪ್ರಾಮಾಣಿಕತೆ, ಕೆಟ್ಟ ವರದಿಗಾರಿಕೆಗಳ ಆಧರಿಸಿ ಪ್ರಶಸ್ತಿ ನೀಡಲಾಗುವುದು ಎಂದಿದ್ದಾರೆ. ಟ್ರಂಪ್ರ ಚಿಕ್ಕ ಕದಲಿಕೆಯನ್ನೂ ಟ್ರೋಲ್ ಮಾಡುವ ಟ್ವಿಟರಿಗರು ಅದನ್ನೂ ಬಿಟ್ಟಿಲ್ಲ.